ಅ.5ರೊಳಗೆ ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸದಿದ್ದರೆ ಬೃಹತ್ ಪ್ರತಿಭಟನೆ
ಮುದ್ದೇಬಿಹಾಳ ಸೆ.21: ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕುಗಳ 3,200 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಅ.5ರೊಳಗೆ ಪೂರ್ಣಗೊಳಿಸದಿದ್ದರೆ ನಾಗರಬೆಟ್ಟ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ಎಚ್ಚರಿಸಿದರು.
ಪಟ್ಟಣದ ಪಂಜುರ್ಳಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ಆರಂಭವಾದ ಯೋಜನೆ ಎಂಟು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಕಾಮಗಾರಿಗೆ ಭೂಮಿ ಕಳೆದುಕೊಂಡ ಹಲವು ರೈತರಿಗೆ ಪರಿಹಾರ ನೀಡಿಲ್ಲ. ಯೋಜನೆ ಪೂರ್ಣಗೊಳಿಸಲು ಅಧಿಕಾರಿಗಳು ಹಲವು ಬಾರಿ ಕಾಲಾವಕಾಶ ಪಡೆದರೂ ಕಾಮಗಾರಿ ಇನ್ನೂ ಮುಗಿದಿಲ್ಲ ಎಂದು ಆರೋಪಿಸಿದರು.
ಕಾಲುವೆಗೆ ನೀರು ಹರಿಯದ ಕಾರಣ ಕಾಲುವೆ ಬಿರುಕುಬಿಡುತ್ತಿದ್ದು, ಗಿಡ-ಗಂಟಿಗಳು ಹಾಗೂ ಮಣ್ಣು ತುಂಬಿಕೊಂಡು ಹಾಳಾಗುತ್ತಿದೆ. ಅ.5ರೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ನಾಗರಬೆಟ್ಟ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಅಗತ್ಯವಾದರೆ ನಾಲತವಾಡ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಶಾಸಕ ಸಿ.ಎಸ್. ನಾಡಗೌಡ ಅವರು ಭೂಮಿ ಕಳೆದುಕೊಂಡ ರೈತರು ಹಾಗೂ ಭೂಸ್ವಾಧೀನ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು. ರೈತರ ನೀರಿನ ಹಕ್ಕಿಗಾಗಿ ನಡೆಯುವ ಹೋರಾಟವನ್ನು ರಾಜಕೀಯ ಹೋರಾಟ ಎಂದು ಪರಿಗಣಿಸಬಾರದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಯಮನಪ್ಪ ರಕ್ಕಸಗಿ, ರವಿಕುಮಾರ ಸಿದ್ರೇಡ್ಡಿ, ಪರಮಪ್ಪ ಗುರಿಕಾರ, ಶರಣಗೌಡ ಸಿದ್ರೇಡ್ಡಿ, ಕರೇಪ್ಪ ಕೆಸಾಪೂರ, ಶ್ರೀಶೈಲ ಚಲವಾದಿ, ಲಕ್ಕಪ್ಪ ಬಂಗಾರಗುಂಡ, ಆನಂದ ಪಾಟೀಲ, ಪ್ರಭು ಚಲವಾದಿ, ಮಲ್ಲಪ್ಪ ರಕ್ಕಸಗಿ, ಶಂಕರಗೌಡ ಸಿರರಟ್ಟಿ, ಮಹೇಂದ್ರ ಬಂಗಾರಗುಂಡ, ಸಿದ್ದಪ್ಪ ಸೋಮನಾಳ, ಬಸನಗೌಡ ಸಿ. ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.