ಮುದ್ದೆಬಿಹಾಲ್

225ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟ್

225ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟ್

 ಮುದ್ದೇಬಿಹಾಳ  25: ನೀಟ್‌-2026 ಮರುಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಾಗರಬೆಟ್ಟ ಗ್ರಾಮದ ಆಕ್ಸ್‌ಫರ್ಡ್‌ ಪಾಟೀಲ್ಸ್‌ ಶಿಕ್ಷಣ ಸಂಸ್ಥೆಯ 225ಕ್ಕೂ ಅಧಿಕ ವಿದ್ಯಾರ್ಥಿಗಳು ವೈದ್ಯಕೀಯ ಸೀಟ್ ಪಡೆದು ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.  

 ಪಟ್ಟಣದ ಬಿದರಕುಂದಿ ಸಮೀಪದ ಸಂಸ್ಥೆಯ ಉಪಶಾಖೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಡಳಿತ ಅಧಿಕಾರಿ ಅಮೀತಗೌಡ ಪಾಟೀಲ್ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಬಿಬಿಎಸ್‌ಗೆ ಆಯ್ಕೆಯಾಗಿದ್ದಾರೆ.

ಮೈಸೂರು, ಬೆಳಗಾವಿ, ಹುಬ್ಬಳ್ಳಿ, ರಾಯಚೂರು, ಬಳ್ಳಾರಿ, ಮಂಗಳೂರು, ಬೆಂಗಳೂರು, ಕೊಪ್ಪಳ ಸೇರಿದಂತೆ ವಿವಿಧೆಡೆಗಳ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದರು.  

 ಆಯ್ಕೆಯಾದ 225ಕ್ಕೂ ಅಧಿಕ ವಿದ್ಯಾರ್ಥಿಗಳ ಪೈಕಿ 160ಕ್ಕೂ ಹೆಚ್ಚು ಮಂದಿ ರೈತ ಕುಟುಂಬದ ಮಕ್ಕಳು. ಸಂಸ್ಥೆಯಿಂದ ಈವರೆಗೆ ಒಟ್ಟು 1,455 ವಿದ್ಯಾರ್ಥಿಗಳು ವೈದ್ಯಕೀಯ ಸೀಟ್ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.  

 ಪ್ರತಿವರ್ಷ ಎಂಬಿಬಿಎಸ್‌ಗೆ ಆಯ್ಕೆಯಾಗುವ 30ರಿಂದ 40 ವಿದ್ಯಾರ್ಥಿಗಳಿಗೆ ಸ್ಕಾಲರಿ​‍್ಶಪ್ ಮೂಲಕ ಸಹಾಯಧನ ನೀಡಲಾಗುತ್ತಿದೆ. ಮುಂದಿನ ವರ್ಷ 250ಕ್ಕೂ ಅಧಿಕ ವೈದ್ಯಕೀಯ ಸೀಟ್‌ಗಳನ್ನು ಪಡೆಯುವ ಗುರಿ ಹೊಂದಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಹಾಗೂ ಆಡಳಿತ ಮಂಡಳಿಯ ಸಮನ್ವಯವೇ ಈ ಸಾಧನೆಗೆ ಪ್ರಮುಖ ಕಾರಣ ಎಂದು ಅಮೀತಗೌಡ ಪಾಟೀಲ್ ಹೇಳಿದರು.  

 ಶಿಕ್ಷಕ ಆರ್‌.ಎಸ್‌. ಮುರಾಳ ಮಾತನಾಡಿ, ಹಳ್ಳಿಗಾಡಿನ ಶಿಕ್ಷಣ ಸಂಸ್ಥೆಯೊಂದರಿಂದ 225ಕ್ಕೂ ಅಧಿಕ ವೈದ್ಯಕೀಯ ಸೀಟ್‌ಗಳು ದೊರೆತಿರುವುದು ಗಮನಾರ್ಹ ಸಾಧನೆ. ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಶ್ರಮ ಪ್ರಮುಖವಾಗಿದೆ ಎಂದರು.  ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಸಿ.ಎಸ್‌. ದೇಸಾಯಿ ಹಾಗೂ ವಿನಯ್ ಪಾಟೀಲ ಉಪಸ್ಥಿತರಿದ್ದರು. 


ಸುದ್ದಿ ಓದಿ