ಮುದ್ದೇಬಿಹಾಳದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹಕ್ಕೆ ಕರೆ
ಮುದ್ದೇಬಿಹಾಳ 21: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿದರೆ ಅವರು ವೈಯಕ್ತಿಕ ಸಾಧನೆಯೊಂದಿಗೆ ತಾವು ಪ್ರತಿನಿಧಿಸುವ ಪ್ರದೇಶದ ಕೀರ್ತಿಯನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಬಹುದು ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ಓಸ್ವಾಲ್ ಹಾಲ್ನಲ್ಲಿ ಭಾನುವಾರ ನಡೆದ ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಏಕಲವ್ಯ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮುದ್ದೇಬಿಹಾಳ ಕ್ಷೇತ್ರದಲ್ಲಿ ಏಕಲವ್ಯ ರೋಲರ್ ಸ್ಕೇಟಿಂಗ್ ಅಕಾಡೆಮಿ ಸ್ಥಾಪಿಸಿ ಮಕ್ಕಳಿಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ತರಬೇತಿ ನೀಡುವ ಮೂಲಕ ತಾಲೂಕಿನ ಹೆಸರು ರಾಜ್ಯಾದ್ಯಂತ ಪಸರಿಸಲು ಶ್ರಮಿಸುತ್ತಿರುವ ಸಂಸ್ಥಾಪಕ ಶಿವಕುಮಾರ್ ಶಾರದಳ್ಳಿ ಅವರ ಪ್ರಯತ್ನ ಶ್ಲಾಘನೀಯ ಎಂದರು.
ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಪ್ರಾಮಾಣಿಕ ಪರಿಶ್ರಮ ಇದ್ದರೆ ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸಬಹುದು. ಕರಾಟೆ ಹಾಗೂ ರೋಲರ್ ಸ್ಕೇಟಿಂಗ್ನಲ್ಲಿ ವಿದ್ಯಾರ್ಥಿಗಳು ಪರಿಶ್ರಮದಿಂದ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರು.
ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ನದೀಮ್, ಪ್ರಧಾನ ಕಾರ್ಯದರ್ಶಿಯಾಗಿ ಕಟ್ಟೆ ಸ್ವಾಮಿ, ಗೌರವಾಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಆಚಾರ್ಯ, ಉಪಾಧ್ಯಕ್ಷರಾಗಿ ಸತೀಶ್, ಮೌನೇಶ್ ಹಾಗೂ ವಿಶಾಲ್, ಖಜಾಂಚಿಯಾಗಿ ಶಿವಕುಮಾರ್ ಶಾರದಳ್ಳಿ ಮತ್ತು ಸಹ ಕಾರ್ಯದರ್ಶಿಯಾಗಿ ಪ್ರಕಾಶ ಉಜನಿಕೊಪ್ಪ ಆಯ್ಕೆಯಾದರು.
ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಸುಭಾಷ್ ವಿಜಯನಗರ ಅವರು ಅಧಿಕಾರ ವಹಿಸಿಕೊಂಡು ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಕರಾಟೆ ಹಾಗೂ ರೋಲರ್ ಸ್ಕೇಟಿಂಗ್ನಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.