ವಿಜಯಪುರ

ಕಾರ್ಮಿಕ ಸಂಹಿತೆ ವಿರೋಧಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ

ಕಾರ್ಮಿಕ ಸಂಹಿತೆ ವಿರೋಧಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ

ಲೋಕದರ್ಶನ ವರದಿ 

ವಿಜಯಪುರ 10 : ರಾಷ್ಟ್ರೀಯ ಕರೆಯ ಮೇರೆಗೆ ಇಂದು ವಿಜಯಪುರ ನಗರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಸಿಐಟಿಯು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವಂತೆ ಹಾಗೂ ಕಾರ್ಮಿಕ ವಿರೋಧಿ ಕನಿಷ್ಠ ಕೂಲಿ ಪರಿಷ್ಕರಣೆಯನ್ನು ವಿರೋಧಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.  

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಐತಿಹಾಸಿಕ ಕ್ವಿಟ್ ಇಂಡಿಯಾ ಚಳವಳಿಯ ನೆನಪು ಮತ್ತು ಸ್ಫೂರ್ತಿಯೊಂದಿಗೆ ದೇಶಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾರ​‍್ೊರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ ಎಂಬ ಘೋಷಣೆಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.  

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೆಡೆ ರೈತ ವಿರೋಧಿ, ಕಾರ್ಮಿಕ ವಿರೋಧಿ, ದಲಿತ ವಿರೋಧಿ, ಮಹಿಳಾ ವಿರೋಧಿ ಹಾಗೂ ವಿದ್ಯಾರ್ಥಿ-ಯುವಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದ್ದರೆ, ಮತ್ತೊಂದೆಡೆ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ದಮನಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.  

ಇದೇ ವೇಳೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಭೂಮಿಯನ್ನು ಅಂಬಾನಿ, ಅದಾನಿ ಸೇರಿದಂತೆ ದೇಶೀಯ ಹಾಗೂ ವಿದೇಶಿ ಕಂಪನಿಗಳ ಪಾಲಾಗಿಸುತ್ತಿವೆ ಎಂದು ಆರೋಪಿಸಲಾಯಿತು. ದೇಶದ ಸಮಸ್ತ ಕಾರ್ಮಿಕ ವರ್ಗವನ್ನು ಜೀತ ಪದ್ಧತಿಯ ಕಾಲಕ್ಕೆ ನೂಕುವ ಪ್ರಯತ್ನ ನಡೆಯುತ್ತಿದೆ ಎಂದು ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.  

ಸಿಐಟಿಯು ಸಂಚಾಲಕರಾದ ಲಕ್ಷ್ಮಣ ಹಂದ್ರಾಳ, ಸುರೇಶ್ ಜೀಬಿ, ಸುನಂದಾ ನಾಯಕ್, ಈರಣ್ಣ ಬೆಳ್ಳುಂಡಗಿ, ಸುಮಂಗಲ ಆನಂದ ಶೆಟ್ಟಿ, ಸಂಗಪ್ಪ ಕಪಾಳಿ, ಅಶ್ವಿನಿ ತಳವಾರ, ಪಿಂಟು ಕೊಂಡಗೂಳಿ, ಮುರುಗೇಂದ್ರ ಹುಣಶ್ಯಾಳ, ಬರ್ಮಣ್ಣ ಸುರಪುರ, ಖಾಜಾಸಾಬ್ ಕೋಲಾರ ಸೇರಿದಂತೆ ಹಲವು ಕಾರ್ಮಿಕ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 


ಸುದ್ದಿ ಓದಿ