ಯುಜಿಸಿಯ ಮಾರ್ಗಸೂಚಿಗಳನ್ನು ಅನುಸರಿಸಲು ಆಗ್ರಹಿಸಿ ಡಿಪ್ಲೊಮಾ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ
ಬಳ್ಳಾರಿ 20: ಬೆಸ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಿ, ಯುಜಿಸಿಯ ಮಾರ್ಗಸೂಚಿಗಳನ್ನು ಅನುಸರಿಸಲು ಆಗ್ರಹಿಸಿ ಇಂದು ಬಳ್ಳಾರಿಯ ಡಿಸಿ ಕಛೇರಿಯ ಆವರಣದಲ್ಲಿ ಡಿಪ್ಲೊಮಾ ವಿದ್ಯಾರ್ಥಿಗಳು ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಮಗೆ ಪರೀಕ್ಷೆಗಳನ್ನು ಎದುರಿಸಲು ಭಯವಿಲ್ಲ ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸಿಬಿಎಸ್‌ಇ, ಐಸಿಎಸ್‌ಸಿ, ಪಿಯು ವಿದ್ಯಾರ್ಥಿಗಳ ಪರೀಕ್ಷೆ ರದ್ದುಗೊಳಿಸಿದಂತೆ ಡಿಪ್ಲೊಮಾ ವಿದ್ಯಾರ್ಥಿಗಳ ಆಡ್ ಸೆಮೆಸ್ಟರ್ ಪರೀಕ್ಷೆಯನ್ನು ರದ್ದುಗೊಳಿಸಿ ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳನ್ನುದ್ದೇಶಿಸಿ ಎಐಡಿಎಸ್‌ಓನ ರಾಜ್ಯ ಸಮಿತಿ ಸದಸ್ಯ ರವಿಕಿರಣ್.ಜೆ.ಪಿ ರವರು ಮಾತನಾಡುತ್ತಾ ಸರ್ಕಾರ ಈಗ ದೀಡೀರನೆ ನಾವು ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ಸುತ್ತೋಲೆ ಹೊರಡಿಸಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಈಗ ಹಠಾತ್ತನೆ ಹಿಂದಿನ ಸೆಮಿಸ್ಟರಿನ ಪರೀಕ್ಷೆಯನ್ನು ಜುಲೈ ಕೊನೆಯ ವಾರದಿಂದ ಆಗಸ್ಟ್ ಮೊದಲ ವಾರದಲ್ಲಿ ಮುಗಿಸಿ ನಂತರ ಪ್ರಸ್ತುತ ಸೆಮಿಸ್ಟರ್ ಪರೀಕ್ಷೆಯನ್ನು ಮುಗಿಸುವುದು ವಿದ್ಯಾರ್ಥಿಗಳ ಮೇಲೆ ಅತೀವ ಒತ್ತಡ ಹೇರಿದಂತಾಗುತ್ತದೆ. ಅಲ್ಲದೆ ಡಿಪ್ಲೋಮಾ ವಿದ್ಯಾರ್ಥಿಗಳಲ್ಲಿ ಅನೇಕರಿಗೆ 18 ವರ್ಷ ತುಂಬಿರದ ಹಿನ್ನಲೆಯಲ್ಲಿ ಲಸಿಕೆಯನ್ನೂ ಪಡೆಯುವಂತಿಲ್ಲ. ಲಸಿಕೆ ಇಲ್ಲದೇ ವಿದ್ಯಾರ್ಥಿಗಳು ಆಫ್ ಲೈನ್ ತರಗತಿಗಳು/ ಪರೀಕ್ಷೆಗೆ ಹಾಜರಾಗುವುದು ಅಪಾಯಕಾರಿ. ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದುಗೊಳಿಸಿದಂತೆಯೇ ಡಿಪ್ಲೋಮಾ ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷಗಳನ್ನು ರದ್ದುಗೊಳಿಸದಿದ್ದಲ್ಲಿ ತಾರತಮ್ಯವಾಗುತ್ತದೆ. ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳು ಆಗ ಎರಡು ಸೆಮಿಸ್ಟರ್ ಪರೀಕ್ಷಗಳು ಮತ್ತು ಸಿಇಟಿ ಸೇರಿ ಮೂರು ಪರೀಕ್ಷೆಯನ್ನೂ ಬರೆಯಬೇಕಾಗುತ್ತದೆ. ಈ ಬಗೆಗೆ AIDSO ರಾಜ್ಯ ಸಮಿತಿ ನಡೆಸಿದ ಬೃಹತ್ ಗೂಗಲ್ ಸಮೀಕ್ಷೆಯಲ್ಲಿ ರಾಜ್ಯದ 46 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಮೂಲಕ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಎಐಡಿಎಸ್‌ಓ ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ಜೆ.ಸೌಮ್ಯ, ಜಿಲ್ಲಾಧ್ಯಕ್ಷ ಗುರಳ್ಳಿ ರಾಜ, ಜಿಲ್ಲಾ ಸೆಕ್ರೆಟರಿಯಟ್ ಸದಸ್ಯರಾದ ಕೆ.ಈರಣ್ಣ, ಶಾಂತಿ, ಕೆ.ಮಂಜುನಾಥ, ಅನುಪಮಾ, ಜೆ.ಪಿ.ರೇವಣಸಿದ್ದೇಶ್ವರ, ನಿಹಾರಿಕ ಹಾಗೂ ನೂರಾರು ವಿದ್ಯಾರ್ಥಿಗಳು ಭಗವಹಿಸಿದ್ದರು.