ಅಪೌಷ್ಟಿಕತೆ ಕಾಯಿಲೆಯಲ್ಲ, ಜನರ ನಿರ್ಲಕ್ಷ: ಡಾ.ಇಂಗಳೆ
ಮುಂಡಗೋಡ: ಅಂಗನವಾಡಿ ವ್ಯಾಪ್ತಿಯ ಮಕ್ಕಳಿಗೆ ಕಡ್ಡಾಯವಾಗಿ ಚುಚ್ಚುಮದ್ದು ಆಗುವಂತೆ ಕಾಳಜಿ ವಹಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಆಡಳಿತ ವೈದ್ಯಾಧಿಕಾರಿ ಎಚ್.ಎಫ್.ಇಂಗಳೆ ಸೂಚಿಸಿದರು.
ಲೊಯೋಲ ವಿಕಾಸ ಕೇಂದ್ರ, ತಾಲೂಕಾ ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ಮಕ್ಕಳು ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಎಲ್ವಿಕೆ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸುಸ್ಥಿರ ಅಭಿವೃದ್ಧಿ ಯೋಜನೆಯಡಿ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಅಪೌಷ್ಟಿಕತೆ ಕಾಯಿಲೆಯಲ್ಲ, ಜನರ ನಿರ್ಲಕ್ಷ್ಯ. ನಮ್ಮ ಎಲ್ಲಾ ಕಾಯಿಲೆಗಳಿಗೆ ಓಷಧಿ ಇರುವುದು ನಾವು ಸೇವಿಸುವ ಆಹಾರದಲ್ಲಿ. ಸರಿಯಾದ ರೀತಿಯ ಆಹಾರ ಮನೆಯಲ್ಲಿಯೆ ಇರುತ್ತದೆ. ಮನೆಯಲ್ಲಿ ಸಾಕಿದ ಕೋಳಿ ಮೊಟ್ಟೆ, ಎಮ್ಮೆ, ಆಕಳಿನ ಹಾಲು, ಹೊಲಗಳಲ್ಲಿ ಬೆಳೆದ ಹೆಸರು ಕಾಳು, ತೊಗರಿ, ರಾಗಿ, ಜೋಳ, ಕಡಲೆ, ಶೇಂಗಾ, ತರಕಾರಿ ನಿಯಮಿತವಾಗಿ ಪ್ರಮಾಣಬದ್ಧವಾಗಿ ಸೇವಿಸುವುದರಿಂದ ಅಪೌಷ್ಟಿಕತೆ ಹೋಗಲಾಡಿಸಿ ಆಸ್ಪತ್ರೆ ಮತ್ತು ಓಷಧ ಸೇವನೆಯಿಂದ ದೂರವಿರಲು ಸಾಧ್ಯ. ಮಕ್ಕಳಿಗೆ ಮನೆಯಲ್ಲಿಯೇ ಆಹಾರ ತಯಾರಿ ಮಾಡಿ ನೀಡಬೇಕು ಎಂದರು. ಪ್ರಭಾರ ಸಿಡಿಪಿಒ ದೀಪಾ ಬಂಗೇರ ಮಾತನಾಡಿ ಗರ್ಭಿಣಿ, ಬಾಣಂತಿ ಹಾಗೂ 0ದಿಂದ5 ವರ್ಷದ ಮಕ್ಕಳ ಕಾಳಜಿಯನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಾರೆ. ಪ್ರತಿ ತಿಂಗಳು ಆರೋಗ್ಯ ಶಿಬಿರ, ಚುಚ್ಚುಮದ್ದು ಪೌಷ್ಟಿಕ ಆಹಾರ ವಿತರಣೆ ಮಾಡುತ್ತಾರೆ. ಅಪೌಷ್ಟಿಕತೆ ಕುರಿತು ಕಳವಳ ಪಡುವ ಅಗತ್ಯವಿಲ್ಲ ಎಂದರು. ಚಿಕ್ಕ ಮಕ್ಕಳ ವೈದ್ಯಾಧಿಕಾರಿ ಪ್ರವೀಣಕುಮಾರ ಡೊರಳ್ಳಿ ಮಾತನಾಡಿ ಗರ್ಭಿಣಿ ಮತ್ತು ಬಾಣಂತಿಯರು ಸಮತೋಲನ ಆಹಾರ ಸೇವಿಸುವುದರಿಂದ ಹುಟ್ಟುವ ಹಾಗೂ ಹುಟ್ಟಿದ ಮಗುವಿನ ಬೆಳವಣಿಗೆಯಲ್ಲಿ ದಷ್ಟಪುಷ್ಟತೆಯನ್ನು ಕಾಣಬಹುದು ಎಂದರು. ಎಲ್ವಿಕೆ ನಿರ್ದೇಶಕ ಫಾ.ಅನಿಲ ಡಿಸೋಜಾ ಮಾತನಾಡಿ ಸರ್ಕಾರದ ಯೋಜನೆ ಸದುಪಯೋಗ ಪಡೆಯಬೇಕು ಎಂದರು. ಮಂಗಳಾ ಮೋರೆ ಮಾತನಾಡಿದರು. ಡಾ.ಪ್ರವೀಣಕುಮಾರ ಡೊರಳ್ಳಿ, ತಜ್ಞ ವೈದ್ಯ ಸಂದೇಶ, ಸಿಸ್ಟರ್ ಆರುಂಧತಿ ಮತ್ತು ತೇಜಸ್ವಿನಿ ಆರೋಗ್ಯ ತಪಾಸಣೆ ನಡೆಸಿದರು.
ಲೊಯೋಲ ವಿಕಾಸ ಕೇಂದ್ರದಿಂದ ಮಲ್ಟಿ ವಿಟಾಮಿನ್ ವಿತ್ ಸಿರ್ ಮತ್ತು ಪ್ರೋಟೀನ್ ಪೌಡರ್ ಮಕ್ಕಳಿಗೆ ಉಚಿತವಾಗಿ ವಿತರಿಸಲಾಯಿತು. 4 ಅಂಗನವಾಡಿ ಕೇಂದ್ರಗಳಿಗೆ ತರಕಾರಿ ಬೀಜಗಳನ್ನು ಸಾಂಕೇತಿಕವಾಗಿ ನೀಡಲಾಯಿತು. ತಾಲೂಕಿನ 87 ಮಕ್ಕಳು, 87 ಪೋಷಕರು, 18 ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಹಾಗೂ ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಮಲ್ಲಮ್ಮ ನೀರಲಗಿ ಸ್ವಾಗತಿಸಿದರು. ತುಂಗಾ ನಾಯ್ಕ ನಿರೂಪಿಸಿದರು. ಹಜರತ್ ಮುಲ್ಲಾ ಮತ್ತು ಸಂಗಡಿಗರು ಜಾಗೃತಿ ಹಾಡುಗಳನ್ನು ಹೇಳಿದರು. ಲಕ್ಷ್ಮಣ ಮುಳೆ ವಂದಿಸಿದರು.