ಮಲ್ಲಕಂಬ: ಮರೆಯಾಗುತ್ತಿರುವ ಕ್ರೀಡೆಯೊಂದಕ್ಕೆ ಮರುಜೀವ
ಬೆಂಗಳೂರು: ಏಪ್ರಿಲ್ 21 :ಒಂದು ಕಾಲದಲ್ಲಿ ಜಯಪ್ರಿಯಗೊಂಡಿದ್ದ ಕ್ರೀಡೆಯೊಂದಕ್ಕೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ಸಿಗದಿದ್ದರೆ ಆ ಶ್ರೇಷ್ಠ ಕ್ರೀಡೆಯು ಯಾವ ರೀತಿಯಲ್ಲಿ ಜನರಿಂದ ದೂರವಾಗುತ್ತದೆ ಎಂಬುದಕ್ಕೆ ದೇಹ ಮತ್ತು ಮನಸ್ಸನ್ನು ಬಲಿಷ್ಠಗೊಳಿಸುವ ಮಲ್ಲಕಂಬ ಕ್ರೀಡೆಯೇ ನಿದರ್ಶನ.
ಬೆಂಗಳೂರಿನಲ್ಲಿ ಏಪ್ರಿಲ್ 24 ರಿಂದ ಆರಂಭಗೊಂಡು ಮೇ 3ರ ವರೆಗೆ ನಡೆಯಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ನಲ್ಲಿ ಕರ್ನಾಟಕ ಸರಕಾರ ಮೊದಲ ಬಾರಿಗೆ ಮರೆಯಾಗುತ್ತಿರುವ ಕ್ರೀಡೆಯೊಂದಕ್ಕೆ ಮರುಜೀವ ತುಂಬವ ಕೆಲಸವನ್ನು ಮಾಡಿದೆ. ಮೊದಲ ಬಾರಿಗೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮಲ್ಲಕಂಬ ಸ್ಪರ್ಧೆ ಕಾಣಿಸಿಕೊಳ್ಳುತ್ತಿದೆ.
12ನೇ ಶತಮಾನದಲ್ಲಿ ಕರುನಾಡನ್ನು ಆಳಿದ್ದ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಜನಪ್ರಿಯಗೊಂಡಿದ್ದ ಮಲ್ಲಕಂಬ ತರಬೇತಿ ಯೋಧರಿಗೆ ಕಡ್ಡಾಯವಾಗಿತ್ತು. 1936ರ ಬರ್ಲಿನ್ ಒಲಿಂಪಿಕ್ಸ್ನಲ್ಲಿ ಮಲ್ಲಕಂಬ ಕ್ರೀಡೆಯನ್ನು ಭಾರತೀಯರು ಪ್ರದರ್ಶಿಸಿದ್ದರು. ಜರ್ಮನಿಯ ದೊರೆ ಅಡಾಲ್ಫ್ ಹಿಟ್ಲರ್ ಮಲ್ಲಕಂಬ ಕ್ರೀಡೆಯನ್ನು ಮೆಚ್ಚಿ, ಭಾರತ ತಂಡಕ್ಕೆ ವಿಶೇಷ ಔತಣ ಕೂಟವನ್ನು ನೀಡಿ ಗೌರವಿಸಿದ್ದರು. ಆದರೆ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಮಲ್ಲಕಂಬ ಕ್ರೀಡೆ ಜನಪ್ರಿಯತೆಯನ್ನು ಕಳೆದುಕೊಂಡಿತು. ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಗರಡಿ ಮನೆಗಳಲ್ಲಿ ಕುಸ್ತಿಪಟುಗಳು ಮಲ್ಲಕಂಬವನ್ನು ಅಭ್ಯಾಸ ಮಾಡುತ್ತ ಬಂದರು.
ಮಹಾರಾಷ್ಟ್ರದ ವಿದರ್ಭಾ ಜಿಲ್ಲೆಯ ಅಮರಾವತಿಯಲ್ಲಿರುವ ಹನುಮಾನ್ ವ್ಯಾಯಾಮ ಪ್ರಸಾರಕ ಮಂಡಳಿಯ 35 ಮಲ್ಲಕಂಬ ಪಟುಗಳು ಬರ್ಲಿನ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡು ಇತಿಹಾಸ ನಿರ್ಮಿಸಿದರು. ಅಂದು ಯುವಕರಲ್ಲಿ ಆರೋಗ್ಯದ ಜೊತೆಯಲ್ಲಿ ಸ್ವಾತಂತ್ರ್ಯದ ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದ ಬಾಲಗಂಗಾಧರ ತಿಲಕ್ ಅವರ ಶ್ರಮ ಇಂದಿಗೂ ದೇಶದ ಯುವಜನರಲ್ಲಿ ಕಾಣುತ್ತಿದೆ. ಮಾತ್ರವಲ್ಲದೆ ಜಗತ್ತಿನ ಅನೇಕ ದೇಶಗಳು ಮಲ್ಲಕಂಬದ ಬಗ್ಗೆ ಆಸಕ್ತಿ ತೋರಿ ವಿಶ್ವ ಚಾಂಪಿಯನ್ಷಿಪ್ಗಳಲ್ಲಿ ಪಾಲ್ಗೊಳ್ಳುತ್ತಿವೆ.
ಮಲ್ಲಕಂಬ ಅಂದರೆ ಕಂಬದಲ್ಲಿ ಕಸರತ್ತು ಮಾಡುವ ಕುಸ್ತಿಪಟು. ಮಲ್ಲ ಅಂದರೆ ಜಟ್ಟಿ, ಕುಸ್ತಿಪಟು. ನೆಲದ ಮೇಲೆ ನೇರವಾಗಿ ನಿಂತ ಬೀಟಿ ಮರದ ಕಂಬ, ಅದಕ್ಕೆ ಹರಳೆಣ್ಣೆಯನ್ನು ಸವರಿರುತ್ತಾರೆ, ಆ ಕಂಬದ ಮೇಲೆ ಮಲ್ಲರು ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸುತ್ತಾರೆ. ಅಲ್ಲಿ ಯೋಗದ ಹೆಚ್ಚಿನ ಆಸನಗಳನ್ನು ಪ್ರದರ್ಶಿಸುತ್ತಾರೆ. ಕುಸ್ತಿಯ ಅಭ್ಯಾಸದ ವೇಳೆ ಅಂಕಣದಿಂದ ಹೊರಭಾಗದಲ್ಲಿ ಆಡುವ ಈ ಕ್ರೀಡೆ ನಂತರದ ದಿನಗಳಲ್ಲಿ ಎಲ್ಲರ ಆಕರ್ಷಣೆಯಾಗಿ ಬೆಳೆಯಿತು.
ಮಲ್ಲಕಂಬದ ಇತಿಹಾಸವನ್ನು ಹುಡುಕಿದರೆ ಸ್ಪಷ್ಟವಾಗಿ ಸಿಗುವುದಿಲ್ಲ. ರಾಮಾಯಣದಲ್ಲೂ ಪ್ರಸ್ತಾಪ ಇದೆ ಎಂದು ಹೇಳುತ್ತಾರೆ. ಹನುಮಂತನು ಮಲ್ಲಕಂಬದ ಅಭ್ಯಾಸ ನಡೆಸುತ್ತಿದ್ದ, ಈ ಕಾರಣಕ್ಕಾಗಿಯೇ ದೇಶದ ಹೆಚ್ಚಿನ ವ್ಯಾಯಾಮ ಶಾಲೆ, ಗರಡಿ ಮನೆ, ಕುಸ್ತಿ ಮತ್ತು ಮಲ್ಲಕಂಬ ತರಬೇತಿ ಕೇಂದ್ರಗಳಿಗೆ ಹನುಮಾನ್ ಎಂದು ಹೆಸರಿಡುವುದು ವಿಶೇಷ. 12ನೇ ಶತಮಾನದಲ್ಲಿ ಕನ್ನಡ ನಾಡನ್ನು ಆಳಿದ್ದ ಕಲ್ಯಾಣಿ ಚಾಲುಕ್ಯ ದೊರೆ ಮೂರನೇ ಸೋಮವರ್ಮನ ಕೃತಿ, “ಮಾನಸೋಲ್ಲಾಸ”ದಲ್ಲಿ ಮಲ್ಲಕಂಬದ ಬಗ್ಗೆ ತಿಳಿಸಿರುವುದರಿಂದ ಆ ಕಾಲದಿಂದಲೂ ಈ ಕ್ರೀಡೆ ಕನ್ನಡ ನಾಡಿನಲ್ಲಿ ಜನಪ್ರಿಯಗೊಂಡಿತ್ತು ಎಂಬುದು ಸ್ಪಷ್ಟ. ಮರಾಠ ದೊರೆ ಎರಡನೇ ಪೇಶ್ವೆ ಬಾಜಿರಾವ್ ಅವರ ವ್ಯಾಯಾಮ ಗುರು ಬಾಲಂಭಟ್ಟ ದಾದಾ ದೇವ್ಧರ್ ಪೇಶ್ವೆಗಳ ಸೇನೆಗೆ ಮಲ್ಲಕಂಬದ ತರಬೇತಿ ನೀಡುತ್ತಿದ್ದ ಕಾರಣ ಈ ಕ್ರೀಡೆ ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗಿತ್ತು. ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ತ್ಯಾಂತಾ ಟೋಪಿ ತ್ತು ನಾನಾ ಸಾಹೇಬ್ ಮೊದಲಾದ ದೊರೆಗಳು ಮಲ್ಲಕಂಬವನ್ನು ಅಭ್ಯಾಸ ಮಾಡುತ್ತಿದ್ದರು ಎಂಬುದನ್ನು ಇತಿಹಾಸ ಹೇಳುತ್ತದೆ. ಸಮತೋಲನ, ದಕ್ಷತೆ ಹಾಗೂ ಶಿಸ್ತು ಇದು ಸೇನೆಯಲ್ಲಿ ಇರಬೇಕಾದ ಪ್ರಮುಖ ಅಂಶ. ಈ ಕಾರಣಕ್ಕಾಗಿ ಮಲ್ಲಕಂಬವನ್ನು ಮರಾಠ ದೊರೆಗಳು ತಮ್ಮ ಸೈನಿಕರಿಗೆ ಕಡ್ಡಾಯ ಗೊಳಿಸಿದ್ದರು. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಈ ಕ್ರೀಡೆ ಹೆಚ್ಚು ಜನಪ್ರಿಯವಾಯಿತು.
ಕರ್ನಾಟಕದ ಗದುಗಿನ ಲಕ್ಷ್ಮೇಶ್ವರದಲ್ಲಿ ಕರ್ನಾಟಕ ರಾಜ್ಯ ಮಲ್ಲಕಂಬ ಸಂಸ್ಥೆ ಸ್ಥಾಪನೆಗೊಂಡಿತು. ಹಲವಾರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಚಾಂಪಿಯನ್ಷಿಪ್ ನಡೆದ ನಂತರ 2019ರಲ್ಲಿ ಮುಂಬೈಯಲ್ಲಿ ಮೊದಲ ವಿಶ್ವ ಮಲ್ಲಕಂಬ ಚಾಂಪಿಯನ್ಷಿಪ್ ನಡೆಯಿತು. ಅಲ್ಲಿ ಭಾರತ ನಿರೀಕ್ಷೆಯಂತೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಜಗತ್ತಿನ ಅನೇಕ ದೇಶಗಳನ್ನು ಆಕರ್ಷಿಸಿರುವ ನಮ್ಮ ನಾಡಿನ ಕ್ರೀಡೆಯನ್ನು ನಾವು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ನಲ್ಲಿ ಆಳ್ವಾಸ್ ಕಾಲೇಜು ಮೂಡಬಿದಿರೆಯ ಮಲ್ಲಕಂಬ ತಂಡ ಕರ್ನಾಟಕವನ್ನು ಪ್ರತಿನಿಧಿಸಲಿದೆ.