ಕ್ರೀಡೆ

ರೋಚಕ ಫೈನಲ್‌ನಲ್ಲಿ ಗೆದ್ದು ಚೊಚ್ಚಲ ಕೆಪಿಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ ಮೈಸೂರು ರಾಯಲ್ಸ್

ರೋಚಕ ಫೈನಲ್‌ನಲ್ಲಿ ಗೆದ್ದು ಚೊಚ್ಚಲ ಕೆಪಿಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ ಮೈಸೂರು ರಾಯಲ್ಸ್

ಬೆಂಗಳೂರು, ಅ. 13 (ಯುಎನ್‌ಐ): ಕೊನೆಯ ಎಸೆತದವರೆಗೂ ರೋಚಕತೆ ಮೂಡಿಸಿದ ಫೈನಲ್ ಪಂದ್ಯದಲ್ಲಿ ತುಮಕೂರು ಟೈಟನ್ಸ್ ತಂಡವನ್ನು ಮಣಿಸಿದ ಮೈಸೂರು ರಾಯಲ್ಸ್, ಚೊಚ್ಚಲ ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್ (ಕೆಪಿಪಿಎಲ್) ಚಾಂಪಿಯನ್ ಆಗಿ ಹೊರಹೊಮ್ಮಿತು. ಇಲ್ಲಿನ ಜಿಕೆವಿಕೆ ಕ್ರೀಡಾಂಗಣದ ಕೋರ್ಟ್‌ಗಳಲ್ಲಿ ನಡೆದ ಫೈನಲ್‌ನಲ್ಲಿ ಮೈಸೂರು ತಂಡ ಜಯಭೇರಿ ಬಾರಿಸಿತು.

ಅಕ್ಟೋಬರ್ 9ರಿಂದ 11ರವರೆಗೆ ಮೂರು ದಿನಗಳ ಕಾಲ ನಡೆದ ಈ ಟೂರ್ನಿಯಲ್ಲಿ ಒಟ್ಟು 45 ಗಂಟೆಗಳ ಕಾಲ ಸ್ಪರ್ಧಾತ್ಮಕ ಪಂದ್ಯಗಳು ನಡೆದವು. ದೇಶದ ವಿವಿಧ ಭಾಗಗಳಿಂದ 50ಕ್ಕೂ ಹೆಚ್ಚು ಪ್ರಮುಖ ಪಿಕಲ್‌ಬಾಲ್ ಆಟಗಾರರು ಭಾಗವಹಿಸಿದ್ದರು. ಅವರಲ್ಲಿ ವಂಶಿಕ್ ಕಪಾಡಿಯಾ ಮತ್ತು ಸೋನು ವಿಶ್ವಕರ್ಮ ಅವರಂತಹ ಪ್ರಮುಖ ಆಟಗಾರರೂ ಸೇರಿದ್ದರು.

ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಮೇಲುಗೈ ಸಾಧಿಸಲು ತೀವ್ರ ಪೈಪೋಟಿ ನಡೆಸಿದವು. ಪಂದ್ಯದುದ್ದಕ್ಕೂ ಹಲವು ರೋಚಕ ತಿರುವುಗಳು ಕಂಡುಬಂದವು. ನಿರ್ಣಾಯಕ ಹಂತದಲ್ಲಿ ಸಂಯಮದಿಂದ ಆಟವಾಡಿದ ಮೈಸೂರು ರಾಯಲ್ಸ್ ತಂಡ ಕೊನೆಯ ಕ್ಷಣಗಳಲ್ಲಿ ಮೇಲುಗೈ ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ನಿಕಟ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದೊಂದಿಗೆ ಕೆಪಿಪಿಎಲ್‌ನ ಚೊಚ್ಚಲ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಟೂರ್ನಿಯು ಪಿಕಲ್‌ಬಾಲ್ ಕ್ರೀಡೆಯ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಹಾಗೂ ತಂಡ ಆಧಾರಿತ ಲೀಗ್‌ಗಳು ಆಟಗಾರರಿಗೆ ಸ್ಪರ್ಧಾತ್ಮಕ ವೇದಿಕೆ ಒದಗಿಸುವ ಮಹತ್ವವನ್ನು ಎತ್ತಿ ತೋರಿಸಿತು.

ಲೀಗ್‌ನ ಬ್ರ್ಯಾಂಡ್ ಅಂಬಾಸಿಡರ್ ಹಾಗೂ ಕನ್ನಡ ಚಿತ್ರರಂಗದ ನಟ ಶ್ರೀಮುರಳಿ ಸಮಾರೋಪ ಸಮಾರಂಭದಲ್ಲಿ ಮೈಸೂರು ರಾಯಲ್ಸ್ ತಂಡಕ್ಕೆ ಟ್ರೋಫಿ ಪ್ರದಾನ ಮಾಡಿದರು.

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳನ್ನೂ ವಿತರಿಸಲಾಯಿತು. ಪುರುಷರ ವಿಭಾಗದಲ್ಲಿ ಅರ್ಥವ್ ನೀಮಾ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರೆ, ಮಹಿಳೆಯರ ವಿಭಾಗದಲ್ಲಿ ಆಲಿಕಾ ಇಬ್ರಾಹಿಂ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರು. ವಂಶಿಕ್ ಕಪಾಡಿಯಾ ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ (ಎಂವಿಪಿ) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಲೀಗ್‌ನಲ್ಲಿ ಕ್ರೀಡಾಸ್ಫೂರ್ತಿ ಮತ್ತು ಉತ್ತಮ ನಡವಳಿಕೆಯನ್ನು ಪ್ರದರ್ಶಿಸಿದ ಬೆಂಗಳೂರು ಚಾರ್ಜರ್ಸ್ ತಂಡಕ್ಕೆ ಫೇರ್ ಪ್ಲೇ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎಂಟ್ರೋಪಿ ಸ್ಪೋರ್ಟ್ಸ್ ಆ್ಯಂಡ್ ಈವೆಂಟ್ಸ್ ಸಂಸ್ಥೆಯು ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಅಸೋಸಿಯೇಷನ್ (ಕೆಎಸ್‌ಪಿಎ) ಮತ್ತು ಕರ್ನಾಟಕ ರಾಜ್ಯ ಒಲಿಂಪಿಕ್ ಅಸೋಸಿಯೇಷನ್ (ಕೆಎಸ್‌ಒಎ) ಸಹಯೋಗದಲ್ಲಿ ಚೊಚ್ಚಲ ಕೆಪಿಪಿಎಲ್ ಟೂರ್ನಿಯನ್ನು ಆಯೋಜಿಸಿತ್ತು. ಕರ್ನಾಟಕದಲ್ಲಿ ಪಿಕಲ್‌ಬಾಲ್ ಕ್ರೀಡೆಯನ್ನು ಉತ್ತೇಜಿಸುವುದರ ಜೊತೆಗೆ ಆಟಗಾರರಿಗೆ ವ್ಯವಸ್ಥಿತ ಸ್ಪರ್ಧಾತ್ಮಕ ವೇದಿಕೆಯನ್ನು ಒದಗಿಸುವುದು ಲೀಗ್‌ನ ಪ್ರಮುಖ ಉದ್ದೇಶವಾಗಿತ್ತು.

ದೇಶದ ವಿವಿಧ ಭಾಗಗಳ ಆಟಗಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಟೂರ್ನಿಯು ವೃತ್ತಿಪರ ಸಂಘಟನೆಯೊಂದಿಗೆ ತಂಡಗಳ ನಡುವಿನ ಸ್ಪರ್ಧೆ ಹಾಗೂ ವೈಯಕ್ತಿಕ ಸಾಧನೆಗಳಿಗೆ ಸಮಾನ ಅವಕಾಶ ಕಲ್ಪಿಸಿತು.

ಚೊಚ್ಚಲ ಆವೃತ್ತಿಯ ಯಶಸ್ವಿ ಮುಕ್ತಾಯವು ಕರ್ನಾಟಕದಲ್ಲಿ ಪಿಕಲ್‌ಬಾಲ್ ಕ್ರೀಡೆಯ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಆಟಗಾರರಿಗೆ ಉನ್ನತ ಮಟ್ಟದಲ್ಲಿ ಸ್ಪರ್ಧಿಸಲು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಮೈಸೂರು ರಾಯಲ್ಸ್ ತಂಡವು ಕೆಪಿಪಿಎಲ್‌ನ ಮೊದಲ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಮುಂಬರುವ ಆವೃತ್ತಿಗಳಿಗೆ ಭದ್ರ ಬುನಾದಿ ಹಾಕಿದೆ.

ಸುದ್ದಿ ಓದಿ