ಕ್ರೀಡೆ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ದಾಖಲೆಯ ಆರನೇ ಪ್ರಶಸ್ತಿ ಮೇಲೆ ಭಾರತದ ಕಣ್ಣು

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ದಾಖಲೆಯ ಆರನೇ ಪ್ರಶಸ್ತಿ ಮೇಲೆ ಭಾರತದ ಕಣ್ಣು

ನವದೆಹಲಿ, ಅ. 12 (ಯುಎನ್‌ಐ): ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸುವ ಗುರಿಯೊಂದಿಗೆ ಭಾರತ ತಂಡ ಕಣಕ್ಕಿಳಿಯಲಿದೆ. ಅಕ್ಟೋಬರ್ 27ರಿಂದ ನವೆಂಬರ್ 5ರವರೆಗೆ ಪಂಜಾಬ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ದಾಖಲೆಯ ಆರನೇ ಪ್ರಶಸ್ತಿಯನ್ನು ಗೆಲ್ಲುವ ಗುರಿ ಹೊಂದಿದೆ.

ಟೂರ್ನಿಯ ಒಂಬತ್ತನೇ ಆವೃತ್ತಿಯ ಪಂದ್ಯಗಳು ಜಲಂಧರ್ ಮತ್ತು ಮೊಹಾಲಿಯಲ್ಲಿ ನಡೆಯಲಿವೆ. ಈವರೆಗೆ ನಡೆದ ಎಂಟು ಆವೃತ್ತಿಗಳಲ್ಲಿ ಭಾರತ ಐದು ಬಾರಿ ಪ್ರಶಸ್ತಿ ಗೆದ್ದಿದ್ದು, ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ.

ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಯಶಸ್ವಿಯಾಗಿ ಉಳಿಸಿಕೊಂಡಿರುವ ಭಾರತ ತಂಡ, ಇದೀಗ ಮತ್ತೊಂದು ಖಂಡಮಟ್ಟದ ಟೂರ್ನಿಯಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರಿಸುವ ನಿರೀಕ್ಷೆಯಲ್ಲಿದೆ.

2011ರಲ್ಲಿ ಚೀನಾದ ಓರ್ಡೋಸ್‌ನಲ್ಲಿ ನಡೆದ ಉದ್ಘಾಟನಾ ಆವೃತ್ತಿಯಲ್ಲಿ ಭಾರತ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ನಿಗದಿತ ಸಮಯದಲ್ಲಿ ಗೋಲು ಗಳಿಸಲು ವಿಫಲವಾದವು. ಬಳಿಕ ನಡೆದ ಶೂಟೌಟ್‌ನಲ್ಲಿ ಭಾರತ 4-2 ಅಂತರದಿಂದ ಜಯಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

2016ರಲ್ಲಿ ಮಲೇಷ್ಯಾದ ಕುವಾಂಟನ್‌ನಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಎರಡನೇ ಬಾರಿ ಪ್ರಶಸ್ತಿ ಗೆದ್ದಿತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ರೂಪಿಂದರ್ ಪಾಲ್ ಸಿಂಗ್, ಅಫ್ಫಾನ್ ಯೂಸುಫ್ ಮತ್ತು ನಿಕ್ಕಿನ್ ತಿಮ್ಮಯ್ಯ ಗೋಲು ಗಳಿಸಿದರು. ಅಂತಿಮವಾಗಿ ಭಾರತ 3-2 ಅಂತರದಿಂದ ಗೆಲುವು ಸಾಧಿಸಿತು.

2018ರಲ್ಲಿ ಒಮಾನ್‌ನ ಮಸ್ಕತ್‌ನಲ್ಲಿ ನಡೆದ ಆವೃತ್ತಿಯ ಫೈನಲ್ ಪಂದ್ಯ ಮಳೆಯಿಂದಾಗಿ ಪೂರ್ಣಗೊಳ್ಳಲಿಲ್ಲ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ಜಂಟಿ ಚಾಂಪಿಯನ್‌ಗಳೆಂದು ಘೋಷಿಸಲಾಯಿತು. ಇದರಿಂದ ಭಾರತದ ಪ್ರಶಸ್ತಿಗಳ ಸಂಖ್ಯೆ ಮೂರಕ್ಕೆ ಏರಿತು.

2023ರಲ್ಲಿ ಚೆನ್ನೈ ಮೊದಲ ಬಾರಿಗೆ ಈ ಟೂರ್ನಿಗೆ ಆತಿಥ್ಯ ವಹಿಸಿತ್ತು. ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಕಣಕ್ಕಿಳಿದ ಭಾರತ, ಫೈನಲ್‌ನಲ್ಲಿ ಮಲೇಷ್ಯಾ ವಿರುದ್ಧ ಅದ್ಭುತ ಪುನರಾಗಮನ ಮಾಡಿತು. ಮೊದಲಾರ್ಧದಲ್ಲಿ 1-3ರಿಂದ ಹಿನ್ನಡೆಯಲ್ಲಿದ್ದ ಭಾರತ, ಮೇಯರ್ ರಾಧಾಕೃಷ್ಣನ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 4-3 ಅಂತರದಿಂದ ರೋಚಕ ಜಯ ದಾಖಲಿಸಿತು.

ಪಂದ್ಯದ ಕೊನೆಯ 16 ನಿಮಿಷಗಳಲ್ಲಿ ಹರ್ಮನ್‌ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್ ಮತ್ತು ಆಕಾಶದೀಪ್ ಸಿಂಗ್ ಗೋಲು ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಭಾರತ ನಾಲ್ಕನೇ ಪ್ರಶಸ್ತಿ ಗೆದ್ದುಕೊಂಡು ಟೂರ್ನಿಯ ಅತ್ಯಂತ ಯಶಸ್ವಿ ತಂಡವೆಂಬ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿತು.

2024ರಲ್ಲಿ ಚೀನಾದ ಹುಲುನ್‌ಬುಯಿರ್‌ನಲ್ಲಿ ನಡೆದ ಟೂರ್ನಿಯಲ್ಲೂ ಭಾರತ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಮೊಕಿ ಹಾಕಿ ತರಬೇತಿ ಕೇಂದ್ರದಲ್ಲಿ ನಡೆದ ಫೈನಲ್‌ನಲ್ಲಿ ಆತಿಥೇಯ ಚೀನಾವನ್ನು 1-0 ಅಂತರದಿಂದ ಮಣಿಸಿತು. ಜುಗ್ರಾಜ್ ಸಿಂಗ್ ಗಳಿಸಿದ ಏಕೈಕ ಗೋಲು ಭಾರತಕ್ಕೆ ಐದನೇ ಪ್ರಶಸ್ತಿಯನ್ನು ತಂದುಕೊಟ್ಟಿತು.

ಈಗಾಗಲೇ ಐದು ಬಾರಿ ಚಾಂಪಿಯನ್ ಆಗಿರುವ ಭಾರತ, ಪಂಜಾಬ್‌ನಲ್ಲಿ ತವರಿನ ಪ್ರೇಕ್ಷಕರ ಬೆಂಬಲವನ್ನು ಬಳಸಿಕೊಂಡು ಮತ್ತೊಂದು ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಅಕ್ಟೋಬರ್ 27ರಿಂದ ನವೆಂಬರ್ 5ರವರೆಗೆ ನಡೆಯಲಿರುವ 2026ರ ಆವೃತ್ತಿಯಲ್ಲಿ ಆರನೇ ಪ್ರಶಸ್ತಿ ಗೆದ್ದರೆ, ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಹೆಗ್ಗಳಿಕೆ ಭಾರತದ್ದಾಗಲಿದೆ.

ಸುದ್ದಿ ಓದಿ