ರಾಷ್ಟ್ರೀಯ

ಮುಸ್ಲಿಂ ಮೀಸಲಾತಿ ಕುರಿತು ಎಸ್‌ಪಿ ನಿಲುವು ಸ್ಪಷ್ಟಪಡಿಸಿ: ಅಖಿಲೇಶ್ ಯಾದವ್‌ಗೆ ರಾಜ್‌ಭರ್ ಸವಾಲು

ಮುಸ್ಲಿಂ ಮೀಸಲಾತಿ ಕುರಿತು ಎಸ್‌ಪಿ ನಿಲುವು ಸ್ಪಷ್ಟಪಡಿಸಿ: ಅಖಿಲೇಶ್ ಯಾದವ್‌ಗೆ ರಾಜ್‌ಭರ್ ಸವಾಲು

ಲಖನೌ, ನ. 28 : ಮುಸ್ಲಿಮರಿಗೆ ಮೀಸಲಾತಿ ನೀಡುವ ಕುರಿತು ಸಮಾಜವಾದಿ ಪಕ್ಷದ (ಎಸ್‌ಪಿ) ನಿಲುವನ್ನು ಸ್ಪಷ್ಟಪಡಿಸುವಂತೆ ಉತ್ತರ ಪ್ರದೇಶದ ಗ್ರಾಮ ಪಂಚಾಯತ್‌ ರಾಜ್ ಸಚಿವ ಹಾಗೂ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಅವರು ಶನಿವಾರ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್‌ಗೆ ಸವಾಲು ಹಾಕಿದರು. ಮತದಾರರನ್ನು ಸೆಳೆಯಲು ಎಸ್‌ಪಿ ಮೀಸಲಾತಿ ವಿಷಯವನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

‘ಎಕ್ಸ್‌’ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ, “ಅಖಿಲೇಶ್, ನಿಮಗೆ ಕುರಾನ್ ಮುಖ್ಯವೋ, ಸಂವಿಧಾನ ಮುಖ್ಯವೋ?” ಎಂದು ರಾಜ್‌ಭರ್ ಪ್ರಶ್ನಿಸಿದರು. ಮೀಸಲಾತಿ ಕುರಿತು ಮಾತನಾಡುವಾಗ ಅಖಿಲೇಶ್ ಪದೇಪದೇ ಸಂವಿಧಾನವನ್ನು ಉಲ್ಲೇಖಿಸುತ್ತಾರೆ. ಆದರೆ ಧರ್ಮವನ್ನೇ ಏಕೈಕ ಆಧಾರವಾಗಿಟ್ಟುಕೊಂಡು ಮೀಸಲಾತಿ ನೀಡುವ ವಿಚಾರದಲ್ಲಿ ಸಂವಿಧಾನದ ಮಿತಿಗಳನ್ನು ಕಡೆಗಣಿಸುತ್ತಾರೆ ಎಂದು ಅವರು ಆರೋಪಿಸಿದರು.

ಇಂದಿರಾ ಸಾಹ್ನಿ ಪ್ರಕರಣ ಹಾಗೂ ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶದ ಮೀಸಲಾತಿ ನೀತಿಗಳಿಗೆ ಸಂಬಂಧಿಸಿದ ಕಾನೂನು ವಿವಾದಗಳನ್ನು ಉಲ್ಲೇಖಿಸಿದ ರಾಜ್‌ಭರ್, ಎಸ್‌ಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಲು ಸಂವಿಧಾನ ತಿದ್ದುಪಡಿಗೆ ಮುಂದಾಗುತ್ತದೆಯೇ ಎಂದು ಪ್ರಶ್ನಿಸಿದರು.

ಅಂತಹ ಪ್ರತ್ಯೇಕ ಮೀಸಲಾತಿಯನ್ನು ಯಾವ ಕೋಟಾದಡಿ ಕಲ್ಪಿಸಲಾಗುತ್ತದೆ ಎಂದೂ ಅವರು ಕೇಳಿದರು. ಈಗಿರುವ ಶೇ. 50ರ ಮೀಸಲಾತಿ ಮಿತಿಯೊಳಗೆ ಪ್ರತ್ಯೇಕ ಕೋಟಾ ಕಲ್ಪಿಸಿದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿಗೆ ಧಕ್ಕೆಯಾಗಬಹುದು. ಮಿತಿ ಮೀರಿದರೆ ಕಾನೂನು ಸವಾಲು ಎದುರಾಗಬಹುದು ಎಂದು ಅವರು ವಾದಿಸಿದರು.

ಎಸ್‌ಪಿ ಮತ್ತು ಅದರ ಮಿತ್ರಪಕ್ಷಗಳು ಚುನಾವಣಾ ಲಾಭಕ್ಕಾಗಿ ‘ಸಂವಿಧಾನ ಉಳಿಸಿ’ ಘೋಷಣೆಯನ್ನು ಬಳಸುತ್ತಿವೆ ಎಂದು ರಾಜ್‌ಭರ್ ಟೀಕಿಸಿದರು. ಯಾದವೇತರ ಒಬಿಸಿ ಮತ್ತು ದಲಿತ ಮತದಾರರು ಎಸ್‌ಪಿಯ ರಾಜಕೀಯ ತಂತ್ರವನ್ನು ಅರಿತುಕೊಂಡಿದ್ದಾರೆ ಎಂದು ಹೇಳಿದ ಅವರು, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.

ಸುದ್ದಿ ಓದಿ