ಬಳ್ಳಾರಿ

ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಸಚಿವ ಬಿ.ಶ್ರೀರಾಮುಲು

ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಸಚಿವ ಬಿ.ಶ್ರೀರಾಮುಲು

ಬಳ್ಳಾರಿ 25: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ನೋಡಿಕೊಳ್ಳಿ ಮತ್ತು ಅಗತ್ಯದಾಸ್ತನು ಇಟ್ಟುಕೊಳ್ಳಿ ಎಂದು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ನಗರದ ಜಿಪಂನ ನಜೀರ್ ಸಭಾಂಗಣದಲ್ಲಿ ಬುಧವಾರ ನಡೆದ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮುಂಗಾರು ಹಂಗಾಮು ಸಂದರ್ಭದಲ್ಲಿ ರೈತರಿಗೆ ಬಿತ್ತನೆ ಬೀಜ,ರಸಗೊಬ್ಬರ ಹಾಗೂ ಇನ್ನೀತರ ಕೃಷಿ ಸಂಬಂಧಿತ ಸಮಸ್ಯೆಗಳು ತಲೆದರೂರದಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರು ಬೆಳೆದ ಬೆಳೆಗೆ ಇನ್ಸಶೂರೆನ್ಸ್‌ ಮಾಡಿಸುವಂತೆ ಪ್ರೇರೆಪಿಸಬೇಕು;ಅನೀರೀಕ್ಷಿತ ಹಾನಿಗಳಾದಾಗ ರೈತರನ್ನು ವಿಮೆ ಕಾಪಾಡಲು ಸಾಧ್ಯವಾಗುತ್ತದೆ ಎಂದರು. 

ಒಂದು ಜಿಲ್ಲೆ ಒಂದು ಉತ್ಪನ್ನದಡಿ ಆಯ್ಕೆಯಾದ ಅಂಜೂರ ಬೆಳೆ ವಿಸ್ತೀರ್ಣಕ್ಕೆ ಹೆಚ್ಚಿನ ಒತ್ತು ನೀಡುವ ಕೆಲಸ ಮಾಡಿ ಹಾಗೂ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಕುರಿತು ಹೆಚ್ಚಿನ ಅರಿವು ಮೂಡಿಸುವ ಕೆಲಸ ಮಾಡಿ ಎಂದರು. 

ಬಳ್ಳಾರಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಅಗತ್ಯ ದಾಸ್ತಾನು ಮಾಡಿಕೊಳ್ಳಲಾಗಿದ್ದು,ಯಾವುದೇ ರೀತಿಯ ಕೊರತೆ ಇಲ್ಲ ಮತ್ತು ಈ ತಿಂಗಳು ಸಾಮಾನ್ಯವಾಗಿ ಬರಬೇಕಿದ್ದ 24 ಎಂಎಂ ಬದಲಿಗೆ 85ಎಂಎಂ ಮಳೆ ಬಿದ್ದ ಪರಿಣಾಮ ರೈತರಿಗೆ ಭೂಮಿ ಹದ ಮಾಡಿಕೊಳ್ಳಲು ಅನುಕೂಲವಾಗಿದೆ ಎಂದು  

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಅವರು ಸಭೆಗೆ ತಿಳಿಸಿದರು. 

ಎಲ್ಲರೂ ಒಂದೇ ಬೆಳೆ ಬೆಳೆಯುವುದರ ಬದಲು ಪರ್ಯಾಯ ಬೆಳೆಗಳನ್ನು ಬೆಳೆಯಲು ರೈತರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಡುವಂತೆ ಸಂಸದ ವೈ.ದೇವೇಂದ್ರ​‍್ಪ ಅವರು ನಿರ್ದೇಶನ ನೀಡಿದರು. 

*ಬಡಕುಟುಂಬಗಳಿಗೆ ಹಸು ವಿತರಣೆ;ಯೋಜನೆ ರೂಪಿಸಿ: ಜಿಲ್ಲೆಯಲ್ಲಿ ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಬಡಕುಟುಂಬಗಳಿಗೆ ಹಸುವಿತರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಹೊಸಯೋಜನೆಯೊಂದನ್ನು ರೂಪಿಸಲು ಉದ್ದೇಶಿಸಿದ್ದು,ಇದಕ್ಕೆ ಯೋಜನೆ ರೂಪಿಸಿ ಸಲ್ಲಿಸುವಂತೆ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಹನುಮಂತ ಕಾರಬಾರಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಸೂಚನೆ ನೀಡಿದರು. 

ಬಳ್ಳಾರಿಯಲ್ಲಿಯೇ ರಾಬಕೋವಿ ಹಾಲು ಉತ್ಪಾದಕರ ಘಟಕವಿದ್ದರೂ ಜಿಲ್ಲೆಯಲ್ಲಿ ಹಾಲು ಉತ್ಪಾದಕರು ಹಗೂ ಉತ್ಪಾದಕ ಸಹಕಾರ ಸಂಘಗಳ ಸಂಖ್ಯೆ ತೀರಾ ಕಡಿಮೆ ಇದೆ;ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಬಡಕುಟುಂಬಗಳು ಸ್ವಾವಲಂಭಿ ಜೀವನ ನಡೆಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ ಎಂದರು. 

ಸಭೆಗೆ ಗೈರು ಹಾಜರಾದ ರಾಬಕೋವಿ ಹಾಲುಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಲು ಸೂಚನೆ ನೀಡಿದರು. 

*2ತಿಂಗಳೊಳಗೆ 51 ಸಾವಿರ ಜನ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಿ:  

ರಾಜ್ಯ ಸರಕಾರದ ಕಟ್ಟಡ ಕಾರ್ಮಿಕರಿಗೆ ರಾಜ್ಯಾದ್ಯಂತ ಪಯಣಿಸಲು ಉಚಿತ ಬಸ್ ಪಾಸ್ ನೀಡಲು ಉದ್ದೇಶಿಸಿದ್ದು, ಅದರಂತೆ ಬಳ್ಳಾರಿ ಜಿಲ್ಲೆಯಲ್ಲಿ ನೋಂದಾಯಿತ 51 ಸಾವಿರ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್‌ಗಳನ್ನು ಎರಡು ತಿಂಗಳೊಳಗೆ ವಿತರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಕಾರ್ಮಿಕ ಇಲಾಖೆಯ ಅಧಿಕಾರಿ ಕಮಲ್ ಅಲ್ತಾಫ್ ಅಹ್ಮದ್ ಅವರಿಗೆ ಸೂಚನೆ ನೀಡಿದರು. 

ಉಚಿತ ಬಸ್ ನೀಡಿಕೆಗೆ ಸಂಬಂಧಿಸಿದಂತೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಬಳ್ಳಾರಿಯಲ್ಲಿ ಬಹುದೊಡ್ಡ ಕಾರ್ಯಕ್ರಮ ಏರಿ​‍್ಡಸಿ ಕಟ್ಟಡ ಕಾರ್ಮಿಕರಿಗೆ ಬಸ್ ಪಾಸ್ ನೀಡಲು ಕ್ರಮವಹಿಸಬೇಕು ಎಂದರು. 

ಇ-ಶ್ರಮ್ ಕಾರ್ಡ್‌ ಕೂಡ ಒದಗಿಸಲು ಅವರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು ಮತ್ತು ಬಾಲಕಾರ್ಮಿಕರ ತಪಾಸಣೆ ಮತ್ತು ಪತ್ತೆ ಕಾರ್ಯ ಚುರುಕುಗೊಳಿಸುವಂತೆ ನಿರ್ದೇಶನ ನೀಡಿದರು. 

*ನರೇಗಾ ಅಡಿ ಆಸ್ತಿಸೃಜನೆಗೆ ಒತ್ತು ನೀಡಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಅತ್ಯಂತ ವಿಶಿಷ್ಟ ಯೋಜನೆಯಾಗಿದ್ದು,ಅದರಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವುದರ ಮೂಲಕ ಆಸ್ತಿಸೃಜನೆಗೆ ವಿಶೇಷ ಒತ್ತು ನೀಡುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಸೂಚನೆ ನೀಡಿದರು. 

ಜಿಪಂ ಸಿಇಒ ಅವರು ವಿಶೇಷ ಮುತುವರ್ಜಿ ವಹಿಸಿ ಜಿಲ್ಲೆಯಲ್ಲಿ ಗ್ರಾಪಂ,ಕೃಷಿ,ತೋಟಗಾರಿಕೆ,ಅರಣ್ಯ ಇಲಾಖೆಗಳ ಮೂಲಕ ನರೇಗಾ ಅಡಿ ಆಸ್ತಿಸೃಜನೆಗೆ ಆದ್ಯತೆ ನೀಡಬೇಕು ಎಂದರು. 

ಬಳ್ಳಾರಿ ಜಿಲ್ಲೆಯಲ್ಲಿ 1.67ಲಕ್ಷ ಉದ್ಯೋಗ ಚೀಟಿಗಳು(4.75ಲಕ್ಷ ಕಾರ್ಮಿಕರು) ವಿತರಿಸಲಾಗಿದ್ದು,1.14ಲಕ್ಷ ಉದ್ಯೋಗ ಚೀಟಿಗಳು(2.59 ಲಕ್ಷ ಕಾರ್ಮಿಕರು) ಮಾತ್ರ ಕ್ರಿಯಾಶೀಲವಾಗಿವೆ.ಉಳಿದವರು ಎಲ್ಲಿ ಹೋದರು ಎಂಬುದನ್ನು ಪತ್ತೆಹಚ್ಚಿ ಅವರಿಗೂ ಉದ್ಯೋಗ ಒದಗಿಸಿಕೊಡಿ ಎಂದರು. 

ಅಧಿಕಾರಿಗಳು ನರೇಗಾ ಕೆಲಸದಲ್ಲಿ ಗಂಭೀರವಾಗಿ ತೊಡಗಿಸಿಕೊಂಡರೇ ಬಹುದೊಡ್ಡ ಆಸ್ತಿಯಾಗಲಿದೆ ಮತ್ತು ಸ್ಥಳೀಯ ಸಣ್ಣಪುಟ್ಟ ಸಮಸ್ಯೆಗಳಿಗೆ ಅದರಡಿಯೇ ಪರಿಹಾರ ದೊರಕಿದಂತಾಗಲಿದೆ ಎಂದು ಸಂಡೂರು ಶಾಸಕ ಈ.ತುಕಾರಾಂ ಅವರು ಅಭಿಪ್ರಾಯಪಟ್ಟರು. ಎಲ್ಲರೂ ಹಳ್ಳದಲ್ಲಿ ಹೂಳು ತೆಗೆಯುವುದನ್ನು ಬಿಟ್ಟು ಏನು ಮಾಡುತ್ತಿಲ್ಲ ಎಂದು ಅವರು ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. 

ಕಳೆದ ವರ್ಷ ನರೇಗಾ ಅಡಿ ಜಿಲ್ಲೆಗೆ 46.23ಲಕ್ಷ ಮಾನವ ದಿನಗಳ ಸೃಜನೆ ಗುರಿನಿಗದಿಪಡಿಸಲಾಗಿತ್ತು;48.66ಲಕ್ಷ ಮಾನವ ದಿನಗಳ ಸೃಜನೆ ಮಾಡುವುದರ ಮೂಲಕ ಶೇ.105ರಷ್ಟು ಸಾಧನೆ ಮಾಡಲಾಗಿದೆ. ಈ ವರ್ಷ 42ಲಕ್ಷ ಮಾನವ ದಿನಗಳ ಸೃಜನೆ ಗುರಿ ನೀಡಲಾಗಿದ್ದು,ಈಗಾಗಲೇ 17ಲಕ್ಷ ಮಾನವ ದಿನಗಳ ಸೃಜನೆ ಮಾಡುವುದರ ಮೂಲಕ ಶೇ.38ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಪಂ ಸಹಾಯಕ ಕಾರ್ಯದರ್ಶಿ ಶ್ರೀಕುಮಾರ್ ಅವರು ಸಭೆಗೆ ವಿವರಿಸಿದರು. 

ಬಿಸಲಹಳ್ಳಿಯಿಂದ ಹಗರಿವರೆಗೆ ರಸ್ತೆಬದಿ ಮತ್ತು ರಸ್ತೆಮೇಲೆಯೇ ತಿಪ್ಪೆಗುಂಡಿಗಳನ್ನು ಹಾಕಲಾಗಿದೆ ಮತ್ತು ರಸ್ತೆಗಳನ್ನು ಅತಿಕ್ರಮಿಸಲಾಗಿದ್ದು,ಇದರಿಂದ ಸಂಚಾರ ಸಮಸ್ಯೆ ಹಾಗೂ ಅವಘಡಗಳು ಉಂಟಾಗುತ್ತಿದ್ದು,ಕೂಡಲೇ ಅತಿಕ್ರಮಿಸಿಕೊಂಡಿರುವ ತಿಪ್ಪೆಗಳನ್ನು ತೆಗೆಸಬೇಕು ಮತ್ತು ಯಾರಾದರೂ ರಸ್ತೆ ಅತಿಕ್ರಮಿಸಿಕೊಂಡಲ್ಲಿ ಅದನ್ನು ತೆರವುಗೊಳಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಸಭೆಯಲ್ಲಿ ತಿಳಿಸಿದರು. 

ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಬಳ್ಳಾರಿ ತಾಪಂ ಇಒ ಅವರಿಗೆ ಕೂಡಲೇ ಪರೀಶೀಲನೆ ನಡೆಸಿ ಕ್ರಮಕೈಗೊಳ್ಳಲು ಸೂಚನೆ ನೀಡಿದರು. 

ಎನ್‌ಆರ್‌ಎಲ್‌ಎಂ ಅಡಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳ ಕುರಿತು ವಿವರಣೆ ನೀಡುತ್ತಿದ್ದ ಜಿಪಂ ಸಹಾಯಕ ಕಾರ್ಯದರ್ಶಿಗಳಿಗೆ ಗ್ರಾಮೀಣ ಬಡತನ ನಿವಾರಣೆ ಮಾಡುವ ನಿಟ್ಟಿನಲ್ಲಿ ಗುರಿ ಮತ್ತು ಸಾಧನೆಗಳ ಬಗ್ಗೆ ಹೇಳಿದರೇ ಸಾಲದು;ಅದರಿಂದ ಬಡತನ ಪ್ರಮಾಣ ಎಷ್ಟು ನಿವಾರಣೆಯಾಗಿದೆ ಮತ್ತು ಎಷ್ಟು ಜನರ ಬದುಕು ಬದಲಾಗಿದೆ ಎಂಬುದು ಮುಖ್ಯ;ಅದರ ಮಾಹಿತಿ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಸೂಚನೆ ನೀಡಿದರು. 

ಪ್ರತಿ ತಾಲೂಕಿನಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಸೂಪರ್ ಬಜಾರ್ ಆರಂಭಿಸುವ ನಿಟ್ಟಿನಲ್ಲಿ ಕ್ರಮವಹಿಸಿ ಎಂದರು. 

ವಿವಿಧ ನಿಗಮಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿರುವ ಕೊಳವೆಬಾವಿ ಕೊರೆಸುವಿಕೆಗೆ ಸಂಬಧಿಸಿದಂತೆ ಅನೇಕ ದೂರುಗಳು ಕೇಳಿಬರುತ್ತಿದ್ದು,ಅವುಗಳನ್ನು ಬಗೆಹರಿಸಲಾಗುವುದು ಮತ್ತು ನಿಗದಿಪಡಿಸಿದ ಗುರಿಗಳನ್ನು ಹೆಚ್ಚಿಸಲು ಕ್ರಮವಹಿಸಲಾಗುವುದು ಎಂದರು. 

ಸಭೆಯಲ್ಲಿ ನೀರಾವರಿ,ಕೈಗಾರಿಕೆ, ಮೀನುಗಾರಿಕೆ, ನೀರು ಸರಬರಾಜು,ಆರೋಗ್ಯ ಇಲಾಖೆ,ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಆಹಾರ ಇಲಾಖೆ,ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕುರಿತು ಸಚಿವರು ಸುದೀರ್ಘವಾಗಿ ಚರ್ಚಿಸಿದರು ಮತ್ತು ಅಧಿಕಾರಿಗಳಿಗೆ ಅಗತ್ಯ-ಸಲಹೆ ಸೂಚನೆಗಳನ್ನು ನೀಡಿದರು. 

ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರ​‍್ಪ,ಶಾಸಕರಾದ ಈ.ತುಕಾರಾಂ,ಸೋಮಶೇಖರರೆಡ್ಡಿ,ಬಿ.ನಾಗೇಂದ್ರ,ವೈ.ಎಂ.ಸತೀಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಗಿರುವ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್,ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಜಿಪಂ ಸಿಇಒ ಜೆ.ಲಿಂಗಮೂರ್ತಿ,ಎಎಸ್ಪಿ ಗುರುನಾಥ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು. 

ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಚಾನಾಳ್ ಗ್ರಾಮದ ಎಚ್‌.ನರಸಿಂಹರೆಡ್ಡಿ(ನರಸನಗೌಡ) ತಂದೆ ಪಂಪಾರೆಡ್ಡಿ ,ಕುಂಟನಾಳದ ಬಿ.ವೀರೇಶ ತಂದೆ ಲೇಟ ಚನ್ನಪ್ಪ ಅವರ ವಾರಸುದಾರರಿಗೆ ತಲಾ 5ಲಕ್ಷ ರೂ.ಗಳ ಪರಿಹಾರ ಹಾಗೂ ಆಕಸ್ಮಿಕ ಹಾವುಕಡಿತದಿಂದ ಮೃತಪಟ್ಟ ರೈತರಾದ ಕರ್ಚೇಡು ಗ್ರಾಮದ ನಾಗೇಂದ್ರಮ್ಮ ಗಂಡ ಶಂಕರ್ ಮತ್ತು ಬಳ್ಳಾರಿ(ಆಲದಹಳ್ಳಿ)ಯ ಸಂತೋಷ ಕೆ. ಅವರ ವಾರಸುದಾರರಿಗೆ ತಲಾ 2ಲಕ್ಷ ರೂ.ಗಳ ಪರಿಹಾರದ ಮೊತ್ತವನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ವಿತರಿಸಿದರು. 

ಸುದ್ದಿ ಓದಿ