ಅಭಿವೃದ್ಧಿ ಹಣ ವ್ಯರ್ಥವಾಗದಂತೆ ನೋಡಿಕೊಳ್ಳಿ: ಸಂಸದ ದೇವೇಂದ್ರಪ್ಪ
ಬಳ್ಳಾರಿ 28: ಪರಿಶಿಷ್ಟ ವರ್ಗಗಳ ಕಾಲೋನಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಅನುದಾನವನ್ನು ನಿಗದಿಪಡಿಸಿದ ಅವಧಿಯೊಳಗೆ ಯಾವ ಉದ್ದೇಶಕ್ಕೆ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಖರ್ಚು ಮಾಡಬೇಕು ಯಾವುದೇ ರೀತಿಯಲ್ಲಿ ಹಣ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಂಸದ ವೈ.ದೇವೇಂದ್ರ್ಪ ಅವರು ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಹಿಂದಿನ ಸಂಸದರಾಗಿದ್ದ ಬಿ.ಶ್ರೀರಾಮುಲು ಮತ್ತು ವಿ.ಎಸ್.ಉಗ್ರ್ಪ ಅವರ ಅವಧಿಯಲ್ಲಿನ ಅನುದಾನದಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಪ್ರಧಾನಮಂತ್ರಿ ಆದರ್ಶ ಗ್ರಾಪಂ ಯೋಜನೆ ಅಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಪರೀಶೀಲನೆಗೆ ಸಮಯ ನಿಗದಿಪಡಿಸುವಂತೆ ಸಂಸದರಾದ ದೇವೇಂದ್ರ್ಪ,ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್ ಅಧಿಕಾರಿಗಳಿಗೆ ತಿಳಿಸಿದ ಅವರು ಸರಕಾರದ ಕಾರ್ಯಕ್ರಮಗಳ ಉದ್ಘಾಟನೆ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಕಡೆಗಣಿಸದಂತೆ ಅವರು ಸೂಚನೆ ನೀಡಿದರು.