ಆರೋಗ್ಯ ಸೇವೆ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ಶಾಸಕ ರಾಜುಗೌಡ
May 31, 2026 07:53 PM | By Admin
Make good use of health service facilities: MLA Rajugowda
- ದೇವರಹಿಪ್ಪರಗಿ 31 : ಮತಕ್ಷೇತ್ರದ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒಗಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ 5 ಆಯುಷ್ಮಾನ್ ಆರೋಗ್ಯ ಮಂದಿರ ಕಟ್ಟಡಗಳ ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನ ತರಲಾಗಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು. ತಾಲ್ಲೂಕಿನ ಹರನಾಳ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಆಯುಷ್ಮಾನ್ ಸ್ವಾಸ್ಥ್ಯ ಯೋಜನೆ ವತಿಯಿಂದ ಸುಮಾರು 65 ಲಕ್ಷ ವೆಚ್ಚದ ಆರೋಗ್ಯ ಉಪ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ರವಿವಾರದಂದು ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸಲು ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಲಾಗುತ್ತಿದೆ,
- ಅದರಂತೆ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡ, ಸುಮಾರು 50ಲಕ್ಷ ರೂ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ, ಶೀಘ್ರದಲ್ಲಿ ಸುಸಜ್ಜಿತ ಕಟ್ಟಡ, ಸಿ.ಸಿ.ರಸ್ತೆ ನಿರ್ಮಾಣವಾಗಲಿದೆ. ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಈಡೇರಲಿದೆ, ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಮುಳಸಾವಳಗಿ ಪಿಕೆಪಿಎಸ್ ಅಧ್ಯಕ್ಷರಾದ ಸಂಗನಗೌಡ ಬಿರಾದಾರ, ಅವರು ಮಾತನಾಡಿ ಶಾಸಕರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿಪಡಿಸುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಸಹಕಾರ ನೀಡೋಣ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಶೇಖರಗೌಡ ಪಾಟೀಲ, ಸಂಗನಗೌಡ ಬಿರಾದಾರ, ಡಾ.ಅಶೋಕ ಚೌಧರಿ, ಇಲಾಖೆಯ ಎಇ ಮಹೇಶ ಜಾದವ, ಕೆ.ಆರ್.ಐ.ಡಿ.ಎಲ್ ಎಇ ಪ್ರಫುಲಕುಮಾರ, ಗುತ್ತಿಗೆದಾರ ಇರ್ಷದ ಪಾಟೀಲ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.