ಬಳ್ಳಾರಿ

ಆಸ್ಪತ್ರೆಗಳಲ್ಲಿ ಮೂಲಭೂತ ಆಕ್ಸಿಜನ್ ಸೌಕರ್ಯ ಎಲ್ಲರಿಗೂ ದೊರಕಲಿ

ಆಸ್ಪತ್ರೆಗಳಲ್ಲಿ ಮೂಲಭೂತ ಆಕ್ಸಿಜನ್ ಸೌಕರ್ಯ ಎಲ್ಲರಿಗೂ ದೊರಕಲಿ

ಬಳ್ಳಾರಿ 25: ಕೊರೊನಾಯಿಂದ ಬಳಲುತ್ತಿರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆಯಿಲ್ಲದೇ ಸಾಯುತ್ತಿರುವುದು ಅತ್ಯಂತ ದುರಂತರವೇ ಸರಿ. ಕೆಲವೋ ದಿನದ ಹಿಂದೆ ದೇಶದ ಎರಡು ಆಸ್ಪತ್ರೆಗಳಲ್ಲಿ 30ಜನರು ಆಕ್ಸಿಜನ್ ಇಲ್ಲದೇ ಅಸುನೀಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಗಳಲ್ಲಿ ಮೂಲಭೂತವಾಗಿ ಆಕ್ಸಿಜನ್ ಸೌಕರ್ಯ ಎಲ್ಲರಿಗೂ ದೊರಕಬೇಕು. ಆದರೆ ಈ ಮಟ್ಟಿಗಿನ ಕೊರತೆ ಹಾಗೂ ಆಕ್ಸಿಜನ್‌ಗಾಗಿ ಜನ ಬೀದಿ ಬೀದಿ ಅಲೆಯುತ್ತಿರುವ ಧಾರುಣ ಪರಿಸ್ಥಿತಿ ಏಕೆ? ಇದಕ್ಕೆ ಸರ್ಕಾರದ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಧೋರಣೆಯೇ ಮುಖ್ಯ ಕಾರಣವಾಗಿದೆ. 

ಕೋವಿಡ್ -19ರ ಎರಡನೇ ಅಲೆಗೆ ಒಂದೆಡೆ ಇಡೀ ದೇಶವೇ ನಲುಗಿದೆ. ಎಲ್ಲೆಡೆ ಸಾವು ನೋವುಗಳ ಆಕ್ರಂದನ, ಜೀವನದ ಮೇಲೆ ಹತಾಶೆಯು ಮನೆ ಮಾಡಿದೆ. ದಿನೇ ದಿನೇ ಏರುತ್ತಿರುವ ಪ್ರಕರಣಗಳು ಮೈ ನಡುಗಿಸಿದೆ. ತನ್ನನ್ನು,  ತನ್ನವರನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಅದೆಷ್ಟೋ ಜೀವಗಳು ಚೀರುತ್ತಿರುವ ಘಟನೆಗಳು ಹೃದಯವಿದ್ರಾವಕವಾಗಿವೆ. ದಿನವೂ ಸಾವಿರಾರು ಜನ ಸಾಯುತ್ತಾ, ಕುಟುಂಬದವರು ಚಿತಾಗಾರದಲ್ಲಿ, ಸಿಕ್ಕಸಿಕ್ಕಲ್ಲಿ ಶವಗಳನ್ನು ಸುಡಲು ಕ್ಯೂ ನಿಂತಿದ್ದಾರೆ. ಈ ನಡುವೆಯು ಪ್ರಧಾನ ಮಂತ್ರಿಗಳು ಚುನಾವಣಾ ರೋಡ್‌ಶೋ ಮತ್ತು ರಾ​‍್ಯಲಿಗಳಲ್ಲಿ ಇಷ್ಟು ಜನರನ್ನು ನೋಡಿರಲಿಲ್ಲ ಎಂದು ಭಾಷಣಗಳನ್ನು ಬಿಗಿಯುತ್ತಾರೆ.!! ಎಂತಹ ನಾಚಿಕೆಗೇಡಿನ ಸಂಗತಿ. 

ಚುನಾವಣೆಗೆ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವವರಿಗೆ ಜನರಿಗೆ ಆಸ್ಪತ್ರೆಗಳಲ್ಲಿ ಆಕ್ಸಿಜನ್, ಉಚಿತ ಲಸಿಕೆ, ವೆಂಟಿಲೇಟರ್  ಪೂರೈಕೆ ಸಾಧ್ಯವಾಗುವುದಿಲ್ಲವೇ? ಜನರ ಅಮೂಲ್ಯ ಜೀವಗಳನ್ನು ಉಳಿಸುವ ಮಾತಾನಾಡುವ ಬದಲು ಚಿತಾಗಾರಗಳನ್ನು ಹೆಚ್ಚಿಸುವ ಬಗ್ಗೆ ಮಾತಾನಾಡುತ್ತಾರೆ ನಮ್ಮ ಆಳ್ವಿಕರು. ಜನರ ಜೀವಕ್ಕೆ ಬೆಲೆ ಕೊಡದ ಸರ್ಕಾರ ಇನ್ನೇನೂ ತಾನೇ ಕೊಟ್ಟೀತು..!? ಈ ಪ್ರಕ್ಷುಬ್ಧ ಪರಿಸ್ಥಿತಿಗೆ  ನಮ್ಮ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆಯೇ ಕಾರಣವಾಗಿದೆ. 

ಈ ಹಿನ್ನೆಲೆ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲ ಪಡಿಸುವಂತೆ, ಎಲ್ಲರಿಗೂ ಉಚಿತ ಆರೋಗ್ಯ ಸೇವೆ ಮತ್ತು ಉಚಿತ ಲಸಿಕೆ ನೀಡುವಂತೆ ಒತ್ತಾಯಿಸಲು ಏಪ್ರಿಲ್ 25ರಿಂದ ಮೇ 1ರವರೆಗೆ ಅಖಿಲ ಭಾರತ ಸಪ್ತಾಹಕ್ಕೆ ಕರೆಕೊಟ್ಟಿದೆ. ಬಳ್ಳಾರಿ ಜಿಲ್ಲೆಯಲ್ಲೂ ಇದರ ಅಂಗವಾಗಿ ಪ್ರತಿದಿನವೂ ವಿಭಿನ್ನ ರೀತಿಯಲ್ಲಿ ಆನ್ಲೈನ್ ಚಳುವಳಿಯನ್ನು ಸಂಘಟಿಸುತ್ತಿದ್ದು, ವಿದ್ಯಾರ್ಥಿಗಳು, ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಐಡಿಎಸ್‌ಓ ಬಳ್ಳಾರಿ ಜಿಲ್ಲಾ ಸಮಿತಿ ಕರೆ ನೀಡುತ್ತದೆ. 


ಸುದ್ದಿ ಓದಿ