ಡಾ.ಅಂಬೇಡ್ಕರ್ ಕನಸು ನನಸಾಗಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ: ಶಿವರಾಮ ಹೆಬ್ಬಾರ
ಲೋಕದರ್ಶನ ವರದಿ
ಮುಂಡಗೋಡ:ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಕನಸು ನನಸಾಗಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಪುಣ್ಯ ಕೆಲಸವನ್ನು ಪಾಲಕರು ಮಾಡಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ದಲಿತ ಸಂಘರ್ಷ ಸಮಿತಿ(ರಿ.) ಸಮನ್ವಯ ಸಮ್ಮಿಲನದ ಅಹಿಂದ ವರ್ಗಗಳ ಸಂವಿಧಾನಾತ್ಮಕ ಆಶಯಗಳ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರೂ ಸಮಾನತೆಯಿಂದ ಬಾಳಬೇಕು ಎಂಬ ಸಂದೇಶ ಸಾರುವ ಪವಿತ್ರ ಸಂವಿಧಾನವನ್ನು ಇಡೀ ವಿಶ್ವಕ್ಕೆ ನೀಡಿದ್ದಾರೆ. ಅಂಬೇಡ್ಕರ್, ಶಿವಾಜಿ ಅವರಂತಹ ಅನೇಕ ಮಹಾತ್ಮರು ಕೇವಲ ಒಂದೇ ಜಾತಿಗೆ ಸೀಮಿತರಾದವರಲ್ಲ. ಸಮಾಜದಲ್ಲಿ ಮೇಲು-ಕೀಳು ಭಾವನೆ ಇರಬಾರದು ಎಂಬ ಧ್ಯೇಯದಿಂದ ಬರೆದ ಸಂವಿಧಾನದಿಂದ ಸುಶಿಕ್ಷಿತ ಸಮಾಜ ಕಾಣುತ್ತಿದ್ದೇವೆ. ಜಾತಿ ರಾಜಕಾರಣ ಮಾಡಬಾರದು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಎಲ್ಲ ಜಾತಿಗಳ ಬಗ್ಗೆ ಗೌರವವಿರಬೇಕು ಎಂದರು.
ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿ ಅಂಬೇಡ್ಕರ್ ಅವರು ಬರೆದ ಸಂವಿಧಾನ ಸುಧಾರಣೆ ಆಗಲು 20-30 ವರ್ಷಗಳು ಬೇಕಾಯಿತು. ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಿದರೆ ಮಾತ್ರ ಜಾತಿ-ಭೇದ ಹೋಗಲಾಡಿಸಲು ಸಾಧ್ಯ. ಸಂವಿಧಾನಕ್ಕಿಂತ ಮಾನವೀಯತೆ ದೃಷ್ಟಿಯಿಂದ ಹೆಣ್ಣು-ಗಂಡು ಎಂಬ ಭೇದ ಮಾಡದೆ ಜೀವನ ನಡೆಸಿದರೆ ಬದುಕು ಸಾರ್ಥಕ. ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು ಎಂದರು.
ರಾಜ್ಯ ಸಂಚಾಲಕ ಎಮ್.ಗುರುಮೂರ್ತಿ ಮಾತನಾಡಿ ಇಂದು ಸರ್ಕಾರ ಆಳುವವರು ಸಂವಿಧಾನದ ಮೂಲಕ ಆಳ್ವಿಕೆ ಮಾಡುತ್ತಿಲ್ಲ. ಒಬ್ಬ ಮಂತ್ರಿ ಟೀಪುಗೆ ಹೊಡೆದು ಹಾಕುವ ರೀತಿಯಲ್ಲಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎನ್ನುತ್ತಾರೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸಂವಿಧಾನದ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಅಂತಹ ರಾಜಕಾರಣಿಗಳನ್ನು ಮನೆಗೆ ಕಳಿಸುವ ಶಕ್ತಿ ನಮಗೆ ಇದೆ. ಸಂವಿಧಾನ ಅಪಾಯ ಸ್ಥಿತಿಯಲ್ಲಿದ್ದು ಸಂವಿಧಾನವನ್ನು ರಕ್ಷಣೆ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಎಸ್.ಫಕ್ಕೀರ್ಪ ಪ್ರಾಸ್ತಾವಿಕ ಮಾತನಾಡಿದರು. ಮರಿಯೋಜಿರಾವ್, ಟಿಬೆಟಿಯನ್ ಕಾಲನಿಯ ಹಿರಿಯ ಬೌದ್ಧ ಸನ್ಯಾಸಿಗಳಾದ ಜಂಗ್ ಚುಪ್ ಸಾಂಗೆ, ಲೊಬಸಂಗ್ ತೆಂಪಾ, ಜಂಪಾ ಲಾಮಾ, ವಾಸು ದಾವಣಗೇರಿ, ಮಹಮ್ಮದ್ ರಫೀಕ್ ಇನಾಮದಾರ, ದೇವು ಪಾಟೀಲ, ಬಸವರಾಜ ನಡುವಿನಮನಿ ಎಮ್.ಎಚ್.ಕಲಾಲ, ಅಶೋಕ ಗಾಣಿಗೇರ, ಕೆ.ಸಿ.ಥಾಮಸ್, ಎಚ್.ಕೆ.ಶಿವಾನಂದ, ಗೋಪಾಲ ನಡಕಿನಮನಿ, ಮಂಜುನಾಥ ಹಳ್ಳೇರ ಮುಂತಾದವರು ಉಪಸ್ಥಿತರಿದ್ದರು. ಎಸ್.ಡಿ.ಮುಡೆಣ್ಣವರ ಸ್ವಾಗತಿಸಿದರು. ನಾಗೇಂದ್ರ ಪಿ. ನಿರೂಪಿಸಿದರು. ಮುತ್ತುರಾಜ ಹೊನ್ನಣ್ಣವರ ವಂದಿಸಿದರು.