ಮಹಾತ್ಮರ ಜೀವನ ದರ್ಶನ ಪ್ರವಚನ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ ಸಂಭ್ರಮ
ಮುಂಡರಗಿ,02 : ಶ್ರಾವಣ ಮಾಸದ ಪ್ರಯುಕ್ತ ಆ.10 ರಿಂದ ಒಂದು ತಿಂಗಳ ಪರ್ಯಂತ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಜರುಗಿದ ಮಹಾತ್ಮರ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಇಂದು ಮಂಗಲಗೊಳ್ಳುವ ನಿಮಿತ್ಯ ಶ್ರೀಮಠದ ಮೂಲಪುರುಷರಾದ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳವರ ಭಾವಚಿತ್ರದ ಪಲ್ಲಕ್ಕಿ ಉತ್ಸವವನ್ನು ಸಂಗೀತ ಹಾಗೂ ವಾದ್ಯಮೇಳದೊಂದಿಗೆ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಜರುಗಿತು.
ಉತ್ಸವಕ್ಕೆ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳವರು ಚಾಲನೆ ನೀಡಿ ಕಳೆದ ಒಂದು ತಿಂಗಳು ಪರ್ಯಂತ ಜರುಗಿದ ಮಹಾತ್ಮರ ಜೀವನ ದರ್ಶನದಲ್ಲಿ ಬಸವಣ್ಣನವರು, ಪ್ರಭುದೇವರು, ಹಡಪದ ಅಪ್ಪಣ್ಣ, ಸಿದ್ದರಾಮೇಶ್ವರ, ಅಕ್ಕಮಹಾದೇವಿ, ಚೆನ್ನಬಸವಣ್ಣ ಮತ್ತು ಶ್ರೀಮಠದ ಮೂಲ ಪುರುಷರು, ಸೊರಟೂರ ಅಜ್ಜನವರು, ಬಳ್ಳೊಳ್ಳಿ ಅಜ್ಜನವರು, ವೆಂಕಟಾಪೂರ ಅಜ್ಜನವರ ಜೀವನ ದರ್ಶನವನ್ನು ಪ್ರವಚನದಲ್ಲಿ ಚೆನ್ನಾಗಿ ತಿಳಿಸಲಾಗಿದೆ. ಮಹಾತ್ಮರ ಜೀವನ ದರ್ಶನದಿಂದ ಎಲ್ಲರ ಜೀವನ ಪಾವನವಾಗಿದೆ ಎಂದು ಹೇಳಿದರು.
ಈ ವೇಳೆ ಪ್ರವಚನಕಾರರಾದ ನಾಗಭೂಷಣ ಸ್ವಾಮಿಗಳು, ಕರಬಸಪ್ಪ ಹಂಚಿನಾಳ, ಎಂ.ಎಸ್.ಶಿವಶೆಟ್ಟಿ, ಡಾ.ಬಿ.ಜಿ.ಜವಳಿ, ಬಸವರಾಜ ಬನ್ನಿಕೊಪ್ಪ, ಗುಡದೀರ್ಪ ಲಿಂಬಿಕಾಯಿ, ಕುಮಾರ ಬನ್ನಿಕೊಪ್ಪ, ಮಂಜುನಾಥ ಮುಧೋಳ, ಮಂಜುನಾಥ ಶಿವಶೆಟ್ಟಿ, ನಾಗರಾಜ ಮುಖ್ಯೆ, ಎಸ್.ಸಿ.ಚಕ್ಕಡಿಮಠ, ಡಾ.ಡಿ.ಸಿ.ಮಠ, ಮುತ್ತು ಬಳ್ಳಾರಿ, ಹಾಲಯ್ಯ ಹಿರೇಮಠ, ಮಹಾಲಿಂಗಯ್ಯ ಹಿರೇಮಠ ಮುಂತಾದವರಿದ್ದರು. ಉತ್ಸವದಲ್ಲಿ ಜಂತ್ಲಿಶಿರೂರಿನ ಕೋಲಾಟದ ಮೇಳ ಮುಂತಾದ ವಾಧ್ಯಮೇಳಗಳು ಉತ್ಸವಕ್ಕೆ ಮೆರಗು ನೀಡಿದ್ದವು.