ಬಳ್ಳಾರಿ

ಜನಹಿತ ಚಿಂತನೆಯೇ ಜಾಗರಣೆ: ಎಸ್.ಪಿ. ಹೊಂಬಳ

ಜನಹಿತ ಚಿಂತನೆಯೇ ಜಾಗರಣೆ: ಎಸ್.ಪಿ. ಹೊಂಬಳ
ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸುತ್ತಿರುವ ಚಿತ್ರ.

ಬಳ್ಳಾರಿ, ಮಾ.11: ಸ್ವಾರ್ಥ ದೂರವಾಗಿ ಸ್ವಾಭಿಮಾನದಿಂದ ಬದುಕುವುದೇ ಜೀವನದ ಸಾರ್ಥಕತೆ. ನಿಸ್ವಾರ್ಥ ಸೇವೆಯೇ ನಿತ್ಯ ಶಿವಾರ್ಚನೆ. ಮಂಗಳ, ಶುಭ, ಕಲ್ಯಾಣ ಚಿಂತನೆಯೇ ಶಿವ ಚಿಂತನೆಯೆಂದು ಗುಗ್ಗರಹಟ್ಟಿಯ ಎಸ್.ಯು.ಜೆ.ಎಸ್. ಪ.ಪೂ. ಕಾಲೇಜಿನ ಉಪನ್ಯಾಸಕರಾದ ಶಿವಾನಂದ ಪಿ. ಹೊಂಬಳ ನುಡಿದರು. ಕೌಲ್ಬಜಾರ್ನ ಸಂತ ಜೋಸೆಫರ ಪ್ರೇಮಾಶ್ರಮದಲ್ಲಿ ಏರ್ಪಡಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ 250ನೇ ಮಹಾಮನೆ ಕೋಳೂರು ಮೂಲೆಮಠದ ರುದ್ರಯ್ಯ ಪಾರ್ವತಮ್ಮ ದತ್ತಿ ಮತ್ತು ಸಿ.ಎಂ.ವೀರಭದ್ರಯ್ಯ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ, ನಿತ್ಯ ಸುಖವನ್ನು ನೀಡುವ ಶರಣ ಚಿಂತನೆಗಳಲ್ಲಿ ಅರ್ಚನೆ, ಪೂಜೆಗಳೇ ಪ್ರಮುಖವಲ್ಲ. ತಾನು ಮಾಡುವ ಕೆಲಸವನ್ನೇ ದೇವತಾರ್ಚನೆ ಎಂದು ಭಾವಿಸಿ, ತ್ರಿಕರಣಪೂರ್ವಕವಾಗಿ ಮಾಡುವ ಮೂಲಕ ಕಾಯವನ್ನು ಕಾಯಕದಲ್ಲಿ ಸವೆಸುವುದು. ಅದೇ ಕೈಲಾಸ. ಆ ವಿಚಾರದಲ್ಲಿ ಸದಾ ಜಾಗೃತವಾಗಿರುವುದೇ ಜಾಗರಣೆ. ತತ್ವ ಚಿಂತನೆ ಜೊತೆಗೆ ಸದಾ ಇರುವುದೇ ಉಪವಾಸವೆಂದರು. 

ಸಂತ ಜೋಸೆಫರ ಬಾಲಕಿಯರ ಪ್ರೇಮಾಶ್ರಮದ ಸುಪೀರಿಯರ್ ಸಿಸ್ಟರ್ ಝಾನ್ಸಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಸಿ.ಎಂ.ಮೃತ್ಯುಂಜಯರವರು, ಗುರುಮುಖದಿಂದ ಬಂದ ವಿದ್ಯೆ ಬದುಕನ್ನು ರೂಪಿಸುತ್ತದೆ. ಹೊರಗಿನ ಗುರುವಿಗಿಂತ ಒಳಗಿನ ಅರಿವೇ ಗುರುವಾಗಬೇಕೆಂದರು. ವೇದಿಕೆಯಲ್ಲಿ ಹಿರಿಯ ನಿಲಯ ಪಾಲಕರಾದ ಸಿಸ್ಟರ್ ಫಾತೀಮಾ, ವಿಠ್ಠಲ್ ಗಂಗನಾಳ, ರಾಜಶೇಖರ, ಶೋಭಲತ ಉಪಸ್ಥಿತರಿದ್ದರು. ಪ್ರೇಮಾಶ್ರಮದ ವಿದ್ಯಾಥರ್ಿನಿಯರು ಪ್ರಾರ್ಥನೆ ಮಾಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ.ಸಿದ್ದಲಿಂಗಪ್ಪ ದತ್ತಿ ದಾತೃಗಳನ್ನು ಪರಿಚಯಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾಥರ್ಿನಿಯರಿಗೆ ಪುಸ್ತಕ, ಪೆನ್ನು, ಪೆನ್ಸಿಲ್, ಪೌಚ್, ಮಾಸ್ಕ್ಗಳನ್ನು ವಿತರಣೆ ಮಾಡಲಾಯಿತು. ಮಹಾದಾಸೋಹದೊಂದಿಗೆ ಕಾರ್ಯಕ್ರಮ ಮಂಗಲವಾಯಿತು.

ಸುದ್ದಿ ಓದಿ