ಮಹರ್ಷಿ ವಾಲ್ಮೀಕಿ ವಿಚಾರಧಾರೆಗಳು ಸಾರ್ವಕಾಲಿಕ: ಡಾ. ಬಸಪ್ಪ
ಲೋಕದರ್ಶನ ವರದಿ
ಬಳ್ಳಾರಿ 09: ಮಹರ್ಷಿ ವಾಲ್ಮೀಕಿಯು ಭಾರತ ದೇಶಕ್ಕೆ ರಾಮಾಯಣ ಎಂಬ ಮಹಾಕಾವ್ಯವನ್ನು ನೀಡಿದ ಮಹಾಕವಿಯಾಗಿದ್ದು, ಇವರು ತಮ್ಮ ಕಾವ್ಯದಲ್ಲಿ ನೀಡಿರುವ ವಿಚಾರಧಾರೆಗಳು, ತತ್ವಗಳು, ಆದರ್ಶಗಳು ಸಾರ್ವಕಾಲಿಕವಾಗಿವೆ ಎಂದು ಸರಳಾದೇವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಕೆ.ಬಸಪ್ಪ ಅವರು ತಿಳಿಸಿದರು.
ಅವರು ಸ್ಥಳೀಯ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿಂದು ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿಯವರ ಜಯಂತಿ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ವಾಲ್ಮೀಕಿಯವರು ತಮ್ಮ ಕಾವ್ಯದ ಮೂಲಕ ಮಾನವೀಯತೆ, ಅಹಿಂಸೆ, ಪ್ರಾಮಾಣಿಕತೆ, ಆದರ್ಶಯುತ ಚಿಂತನೆಗಳನ್ನು ರಾಮನ ಪಾತ್ರವನ್ನು ಸೃಷ್ಟಿಸುವುದರ ಮೂಲಕ ಸಮಾಜಕ್ಕೆ ಸಾರಿದ್ದಾರೆ. ರಾಮಾಯಣಕ್ಕೆ ಸಂಬಂಧಪಟ್ಟಂತೆ ಬಳ್ಳಾರಿಯ ಸುತ್ತಮುತ್ತಲೂ ಅನೇಕ ಐತಿಹ್ಯಗಳಿದ್ದು, ಅವು ರಾಮ ಮತ್ತು ಸೀತೆಯರ ನೆನಪಿಗೆ ಸಾಕ್ಷಿಯಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ದಸ್ತಗೀರ್ಸಾಬ್ ದಿನ್ನಿ ಅವರು, ಮಹರ್ಷಿ ವಾಲ್ಮೀಕಿಯವರ ಜೀವನ ವೃತ್ತಾಂತವನ್ನು ತಿಳಿಸುತ್ತಾ, ಬೇಟೆಗಾರನಾಗಿದ್ದ ವಾಲ್ಮೀಕಿಯು ಮನಃಪರಿವರ್ತನೆ ಹೊಂದಿ, ನಾಯಕ ಸಮುದಾಯದ ಮೊದಲ ಅಕ್ಷರಸ್ಥರಾಗಿ ಇಡೀ ವಿಶ್ವವೇ ಬೆರಗಾಗುವಂತೆ ಮಹಾಕಾವ್ಯ ರಾಮಾಯಣವನ್ನು ಕಟ್ಟಿಕೊಟ್ಟಿದ್ದು ಗಮನಾರ್ಹ ಸಂಗತಿ ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್.ಎಂ.ಶೈಲಜಾ, ಮಹರ್ಷಿ ವಾಲ್ಮೀಕಿಯವರ ವಿಚಾರಗಳು ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ತಲುಪಿಸಬೇಕಾದ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ .ಹೆಚ್.ಕೆ.ಮಂಜುನಾಥರೆಡ್ಡಿ ಅವರು ಮಹರ್ಷಿ ವಾಲ್ಮೀಕಿಯವರ ರಾಜಕೀಯ ಮತ್ತು ಸಾಮಾಜಿಕ ನಿಲುವುಗಳು ಅರ್ಥಪೂರ್ಣವಾಗಿವೆ. ಅವರ ಕಾವ್ಯ ಜನಮಾನಸದಲ್ಲಿ ಇಂದಿಗೂ ಪೂಜ್ಯನೀಯ ಸ್ಥಾನವನ್ನು ಪಡೆದುಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಪಂಚಾಕ್ಷರಿ, ಡಾ.ಕುಂಚಂ ನರಸಿಂಹುಲು, ಡಾ.ಅಣ್ಣಪ್ಪಸ್ವಾಮಿ, ಗುರುಬಸಪ್ಪ, ಡಾ. ಶಶಿಕಾಂತ್, ಲಕ್ಕಣ್ಣ, ಪ್ರವೀಣ್ಕುಮಾರ್ ಮುಂತಾದವರು ಹಾಜರಿದ್ದರು.