ಸನಾತನ ಧರ್ಮದ ಬೇರುಗಳನ್ನು ಗಟ್ಟಿಗೊಳಿಸಿದ ಮಹಾಮಾತೆ ರಾಣಿ ಅಹಲ್ಯಾಬಾಯಿ ಹೋಳ್ಕರ್
ಓರಂಗ ಜೇಬನ 48 ವರ್ಷಗಳ ಆಳ್ವಿಕೆಯಲ್ಲಿ ಭಾರತದ ಸನಾತನ ಧರ್ಮಕ್ಕೆ ಒದಗಿದ ಸಂಕಷ್ಟಗಳು ವರ್ಣಿಸಲಸಾಧ್ಯ. ಹಿಂದುಗಳ ಪರಮ ದೈವ ಸ್ವರೂಪವಾದ ಕಾಶಿ, ಮಥುರಾ, ಅಯೋಧ್ಯೆ ಇನ್ನು ಅನೇಕ ಮಂದಿರಗಳನ್ನು ಕೆಡವಿ ಅಲ್ಲೆಲ್ಲ ಮಸೀದಿಗಳನ್ನು ನಿರ್ಮಿಸಲಾಗಿತ್ತು. ಮತಾಂತರ ಯಥೇಚ್ಛವಾಗಿ ನಡೆದೇ ಇತ್ತು. ಹಿಂದೂ ಧರ್ಮ ಗ್ರಂಥಗಳನ್ನು ಸುಟ್ಟುಹಾಕಲಾಗುತ್ತಿತ್ತು. ಹಿಂದೂ ಧರ್ಮದ ಕರಾಳ ದಿನಗಳವು ಎಂದರೆ ತಪ್ಪಿಲ್ಲ. ಇಂತಹ ಅಧಃಪತನವನ್ನು ಎಸಗಿದವನ ಪಾಠವನ್ನು ನಮ್ಮ ಪಠ್ಯ ಪುಸ್ತಕದಲ್ಲಿ ನಾವೆಲ್ಲ ಓದಬೇಕಾಗುತ್ತದೆ. ಆದರೆ ಯಾರು ಹಾಳು ಗೆಡುವಿದ ಮಂದಿರಗಳನ್ನು ಮತ್ತೆ ಪುನರುತ್ಥಾನ ಮಾಡಿದರೋ, ಹಿಂದೂ ಧರ್ಮಕ್ಕಾಗಿ ಅವಿರತ ಶ್ರಮಿಸಿದರೋ, ಅವರ ಕುರಿತು ಯಾವುದೇ ಮಾಹಿತಿಯು ಇತಿಹಾಸದಲ್ಲಿ ಹುಡುಕಿದರೂ ಸಿಗುವುದಿಲ್ಲ. ಇದೆಂತಹ ಪ್ರಮಾದ! ಮನಸ್ಸು ಕಸಿವಿಸಿಕೊಳ್ಳುತ್ತದೆ, ಸಂಕಟವಾಗುತ್ತದೆ.
ಮಹಾರಾಷ್ಟ್ರದ ಅಹಮದ್ನಗರದ ಬೀಡ್ ಜಿಲ್ಲೆಯ ಚೋಂಡಿ ಎಂಬಲ್ಲಿ ಮೇ 31, 1725ರಲ್ಲಿ ಅಹಲ್ಯಾಬಾಯಿಯ ಜನನವಾಯಿತು. ತಂದೆ ಮಂಕೋಜಿ ಶಿಂಧೇ ಪಾಟೀಲ್, ತಾಯಿ ಸುಶೀಲಾ ಬಾಯಿ. ಚೋಂಡಿ ಎಂಬುದೊಂದು ಹಳ್ಳಿ. ಅಲ್ಲಿನ ಪ್ರಮುಖನಾಗಿದ್ದನವ ಮಂಕೋಜಿ.ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಶಾಲೆ ಕಲಿಯುತ್ತಿರಲಿಲ್ಲ. ಆದರೆ ಈಕೆಯ ತಂದೆ ಮಂಕೋಜಿ ಮಗಳಿಗೆ ಬೇಕಾದ ಶಿಕ್ಷಣವನ್ನು ಮನೆಯಲ್ಲಿಯೇ ಕಲಿಸಿ ಕೊಡುತ್ತಿದ್ದ. ಹೀಗಾಗಿ ಚತುರೆ ಅಹಲ್ಯ ಸರ್ವಗಣ ಸಂಪನ್ನೆಯಾಗಿ ಬೆಳೆಯುತ್ತಿದ್ದಳು.
ಒಂದು ಸಲ ಪುಣೆಗೆಂದು ಹೋಗಿದ್ದ ಪೇಶ್ವೇಗಳ ಸುಬೇದಾರ ಮಲ್ಹಾರ್ ಹೊಳ್ಕರ್ ಪೇಶ್ವೆ ಬಾಜಿರಾವನ ಜೊತೆಗೆ ಚೋಂಡಿ ಗ್ರಾಮದಿಂದ ಹಾಯ್ದು ಹೋಗುತ್ತಿದ್ದನು. ಸರ್ವಗುಣ ಸಂಪನ್ನೆಯಾದ ಅಹಲ್ಯ ಊರಿನ ಜನರೊಂದಿಗೆ ಸವಿ ಮಾತನಾಡುತ್ತಾ ಅನ್ನದಾನ ಮಾಡುತ್ತಿದ್ದಳು. ಆಕೆಯ ಕಾರುಣ್ಯ ಸೂಸುವ ಕಂಗಳು, ದಿಟ್ಟತನ ಮಲ್ಲಾರ್ ಹೊಳಕರ್ನಿಗೆ ಹಿಡಿಸಿಬಿಟ್ಟಿತು. ತಾನು ಪೇಶ್ವೆಗಳ ಸುಬೇದಾರನಾಗಿದ್ದು, ಸಾಮಾನ್ಯ ಕುಟುಂಬದ ಅಹಲ್ಯಾಬಾಯಿಯನ್ನು ತನ್ನ ಮಗನಿಗೆ ತಂದುಕೊಳ್ಳಬೇಕೆಂದು ನಿರ್ಧರಿಸಿದ. ಆಗ ಅವಳ ವಯಸ್ಸು ಕೇವಲ ಎಂಟು ವರ್ಷ. ಕೇವಲ 12 ವರ್ಷದವನಾಗಿದ್ದ ಖಂಡೇರಾವ್ ಹೋಳ್ಕರ್ ನೊಂದಿಗೆ ಅವಳ ವಿವಾಹವಾಯಿತು. ಹೀಗೆ ಮರಾಠವಾಡಾದ ಅಹಲ್ಯ ಬಾಯಿ, ಮಧ್ಯಪ್ರದೇಶದ ಇಂದೋರ್ ನಲ್ಲಿದ್ದ ಮಾಳ್ವದ ಸೊಸೆಯಾಗುವ ಸೌಭಾಗ್ಯ ಒದಗಿ ಬಂದಿತ್ತು.
ದೊಡ್ಡವನಾದಂತೆ ಖಂಡೇರಾವ್ ಸುಖ ಲೋಲುಪ್ತನಾಗಿ ಆಡಳಿತದಲ್ಲಿ ಆಸಕ್ತಿ ರಹಿತನಾಗಿದ್ದ. ಅಹಲ್ಯಾಬಾಯಿ ತನ್ನ ಮಾತಿನಿಂದ, ಕೃತ್ಯದಿಂದ ಅವನನ್ನು ಬದಲಾಯಿಸಿದಳು. ಅವರಿಬ್ಬರಿಗೂ ಎರಡು ಸಂತಾನಗಳಾದವು. ಮಾಲೇರಾವ್ ಎಂಬ ಪುತ್ರನಾದರೆ ಮುಕ್ತಾಬಾಯಿ ಎಂಬ ಪುತ್ರಿ ಜನ್ಮಿಸಿದರು. ಮಾಲೇರಾವ್ ಬುದ್ಧಿಯಿಂದ ವಿಕ್ಷಿಪ್ತನಾಗಿದ್ದ. ಅನ್ಯರ ನೋವನ್ನು ಕಂಡು ಸಂತೋಷಿಸುತ್ತಿದ್ದ. ಮತ್ತು ಅಷ್ಟೇ ಬಲಹೀನನೂ ಆಗಿದ್ದನು.
21 ವರ್ಷದ ಸಂಸಾರ ಕುಂಬೇರ್ ಯುದ್ಧದಲ್ಲಿ ಅಹಲ್ಯಾಬಾಯಿಯ ಪತಿ ಖಂಡೇರಾವ್ ಸಾವನ್ನಪ್ಪುವ ಮೂಲಕ ಕೊನೆಗೊಂಡಿತು. ಆಗಿನ ಪದ್ಧತಿಯಂತೆ ಸತಿ ಸಹಗಮನ ಹೊಂದಬೇಕೆಂದು ಅಹಲ್ಯಾಬಾಯಿ ಇಚ್ಛೆಪಟ್ಟಳು. ಆದರೆ ತನ್ನ ಮಗನನ್ನು ಕಳೆದುಕೊಂಡ ಮಲ್ಹಾರಿರಾವ್ ದುಃಖ ತಪ್ತನಾಗಿ ಹಾಗೆ ಮಾಡದಿರಲು ವಿನಂತಿಸಿದ. "ಮಗನನ್ನು ಕಳೆದುಕೊಂಡ ನಾನು ನಿನ್ನನ್ನೂ ಕಳೆದುಕೊಳ್ಳಲೇ? ಈಗ ನೀನೇ ನನ್ನ ಮಗನಿದ್ದಂತೆ. ರಾಜ್ಯ ಕಾರ್ಯವನ್ನು ನೀನೆ ಮಾಡು" ಎಂದು ಒತ್ತಾಯಿಸಿದ. ಹೀಗಾಗಿ ಅಹಲ್ಯಾ ಬಾಯಿ ತನ್ನ ಮಗ ಮಾಲೇರಾವ್ ನನ್ನು ಪಟ್ಟಕ್ಕೆ ಕೂಡಿಸಿ ತಾನು ಆಡಳಿತ ಮಾಡಲಾರಂಭಿಸಿದಳು. ಆದರೆ ಈಕೆಯ ದುರಾದೃಷ್ಟದಂತೆ 1766ರಲ್ಲಿ ತಂದೆಯಂತಿರುವ ಮಾವ ಮಲ್ಲಾರಿ ರಾವ್ ನಿಧನ ಹೊಂದುತ್ತಾರೆ. ಒಂದೇ ವರ್ಷದಲ್ಲಿಯೇ ಅಂದರೆ 1767ರಲ್ಲಿ ಮಗ ಮಾಲೇರಾವ್ ಕೂಡ ನಿಧನ ಹೊಂದುತ್ತಾನೆ. ಇಡಿ ಗುಡ್ಡವೇ ಕಡಿದುಕೊಂಡು ಬಿದ್ದಂತಹ ಪರಿಸ್ಥಿತಿ ಅಹಲ್ಯಾಬಾಯಿಯ ದಾಗುತ್ತದೆ. ಅದೇ ಸಮಯದಲ್ಲಿ ಗಂಗಾಧರ್ ಯಶವಂತರಾವ್ ಎನ್ನುವವನಿಗೆ ಗಂಡ, ಮಗ, ಮಾವನನ್ನು ಕಳೆದುಕೊಂಡ ಅಹಲ್ಯಾಬಾಯಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವುದನ್ನು ನೋಡಲಾಗದೆ ಅವನಲ್ಲಿ ಅಸೂಯೆ ಮನೆ ಮಾಡಿರುತ್ತದೆ. ಹೀಗಾಗಿ ಒಂದು ದಿನ," ನಿಮಗೆ ಓರ್ವ ಮಹಿಳೆಯಾಗಿ ಈ ರಾಜ್ಯಭಾರ ಮಾಡುವುದು ಕಠಿಣವಾಗಲಿದೆ. ಹಾಗಾಗಿ ಯಾರಾದರೂ ಬಾಲಕನನ್ನು ದತ್ತು ಪಡೆಯಿರಿ. ಆತ ದೊಡ್ಡವನಾಗುವರೆಗೂ ನಾನು ಆಡಳಿತ ನೋಡಿಕೊಳ್ಳುವೆ" ಎಂದು ಹೇಳುತ್ತಾನೆ. ಆದರೆ ಅಹಲ್ಯಾಬಾಯಿ ಇದನ್ನು ನಯವಾಗಿಯೇ ನಿರಾಕರಿಸಿದಳು.
ಇದರಿಂದ ಸಿಟ್ಟಿಗೆದ್ದ ಯಶವಂತರಾವ್ ರಾಣಿಗೆ ಸರಿಯಾದ ಪಾಠ ಕಲಿಸಬೇಕೆಂದು ಮರಾಠಾ ಪೇಶ್ವೆ ಮಾಧವರಾಯನ ತಮ್ಮ, ಪಾಳೆಗಾರ ರಘುನಾಥನಿಗೆ ಪತ್ರ ಬರೆದು" ಹೋಳ್ಕರ್ ಸಾಮ್ರಾಜ್ಯಕ್ಕೆ ಈಗ ಗಂಡು ದಿಕ್ಕಿಲ್ಲದಂತಾಗಿದೆ. ನೀವೇನಾದರೂ ಸೇನೆ ಸಮೇತವಾಗಿ ಬಂದದ್ದಾದರೆ ಇದನ್ನು ಸುಲಭವಾಗಿ ವಶ ಮಾಡಿಕೊಳ್ಳಬಹುದು". ಎಂದು ಪತ್ರ ಬರೆಯುತ್ತಾನೆ. ಆಗ ರಘುನಾಥನಿಗೆ ಆಸೆ ಹುಟ್ಟಿ ತನ್ನ ಸೈನ್ಯದೊಂದಿಗೆ ಇಂದೋರದ ಮೇಲೆ ಆಕ್ರಮಣ ಮಾಡುತ್ತಾನೆ. ಆದರೆ ರಾಣಿ ಅಹಲ್ಯಾಬಾಯಿ ಎದೆಗುಂದುವುದಿಲ್ಲ. ಆಕೆಯು ಸೇನೆಯನ್ನು ಹೋರಾಟಕ್ಕೆ ಅಣಿಮಾಡುತ್ತಾಳೆ. ಹಾಗೆ ಮಹಿಳಾ ಸೈನ್ಯವನ್ನು ತಯಾರಿಯಲ್ಲಿಡುತ್ತಾಳೆ. ಅಲ್ಲದೆ ನೆರೆಹೊರೆಯ ಬೋಸ್ಲೇ, ಗಾಯಕ್ವಾಡ, ದಾಬಾಡೆ ಮೊದಲಾದವರ ಸಹಾಯ ಯಾಚಿಸಿ ಪತ್ರ ಬರೆಯುತ್ತಾಳೆ. ಅಹಲ್ಯಾಬಾಯಿ ಯುದ್ಧಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರೂ, ತಾನಾಗಿ ಯುದ್ಧಕ್ಕೆ ಮುಂದಾಗುವುದಿಲ್ಲ. ಮತ್ತು ರಘುನಾಥನಿಗೆ ಪತ್ರವೊಂದನ್ನು ಬರೆಯುತ್ತಾಳೆ.
"ನೀವು ಗಂಡಸರು, ಹೆಣ್ಣೊಬ್ಬಳೊಂದಿಗೆ ಯುದ್ಧ ಮಾಡಿ ಸೋತರೆ ಜೀವಮಾನವೀಡೀ ಅಪಮಾನವಾಗುವುದಲ್ಲದೇ ನಿಮ್ಮ ಹೆಸರಿಗೆ ಕಳಂಕ ಬರುತ್ತದೆ. ಯೋಚಿಸಿ ಮುಂದೆ ಬನ್ನಿ" ಎಂದು ಪತ್ರ ಬರೆಯುತ್ತಾಳೆ. ರಘುನಾಥ ತನ್ನ ಗೂಢಚಾರರಿಂದ ಆಕೆಯು ಪಕ್ಕಾಯುದ್ಧ ಸನ್ನದ್ಧಳಾಗಿರುವುದು ತಿಳಿಯುತ್ತದೆ. ನೆರೆಹೊರೆಯವರ ಸಹಾಯದಿಂದ ಆಕೆ ಯುದ್ಧಕ್ಕೆ ಸಿದ್ದಳಾಗಿದ್ದಾಳೆ ಎಂಬುದು ತಿಳಿದು ಬರುತ್ತದೆ. ನಾನೊಂದು ವೇಳೆ ಸೋತರೆ ಎಂಬ ಭೀತಿಯಿಂದ ಆತ ಹಿಂದೆ ಹೆಜ್ಜೆ ಇಡುತ್ತಾನೆ. ಮತ್ತು ತಾನೊಂದು ಪತ್ರ ಬರೆದು ಅವಳ ಪತಿ, ಮಾವ, ಮಗ ತೀರಿಕೊಂಡಿದ್ದಕ್ಕೆ ತಾನು ಸೌಜನ್ಯದ ಮಾತನಾಡಿಸಲು ಬಂದಿದ್ದು ಅಷ್ಟೇ" ಎಂದು ಬರೆಯುತ್ತಾನೆ. ಆಗ ಅಹಲ್ಯಾಬಾಯಿ" ಹಾಗಾದರೆ "ಸೈನ್ಯ ವನ್ನೇಕೆ ಕಟ್ಟಿಕೊಂಡು ಬಂದಿರುವೆ "ಎಂದು ಕೇಳಿದಾಗ ನಾಚಿಕೆಯಿಂದ ಕುಗ್ಗಿ ಹೋಗುತ್ತಾನೆ. ಮುಂದಿಟ್ಟ ಹೆಜ್ಜೆ ಹಿಂದಿಡಬೇಕಾಗುತ್ತದೆ. ರಘುನಾಥನ ಈ ಶರಣಾಗತಿಯಿಂದ ರಾಣಿ ಅಹಲ್ಯಾಬಾಯಿಯ ಕೀರ್ತಿಯು ಮೂರು ಪಟ್ಟು ಹೆಚ್ಚಾಗುತ್ತದೆ. ಯುದ್ಧ ಮಾಡದೇ ವೈರಿಸೈನ್ಯವನ್ನು ಹಿಂದಿರುಗಿಸುವ ತಂತ್ರಗಾರಿಕೆ ಎಲ್ಲೆಡೆ ಮೆಚ್ಚುಗೆ ಪಡೆಯುತ್ತದೆಮುಂದೆ ಪೇಶ್ವೆಗಳ ಹಥ್ತಿರದವಿದ್ದ ಆಡಳಿತದ ಚುಕ್ಕಾಣಿಯನ್ನು ತಾನೇ ಪಡೆದು ಗದ್ದುಗೆ ಏರುತ್ತಾಳೆ. ಅದು 1767 ರಂದು. ಇಂದೋರದ ರಾಣಿಯಾಗಿ ಪಟ್ಟಾಭಿಷಕ್ತಳಾಗುತ್ತಾಳೆ.
ದೇಶದ ಮೂಲೆಯಲ್ಲಿರುವ ಬುಡಕಟ್ಟು ಜನಾಂಗಗಳು ಪ್ರವಾಸಿಗರ ಮೇಲೆ ಎರಗಿ ದರೋಡೆ ಮಾಡುತ್ತಿದ್ದವು. ಒಂದು ಉಪಾಯವನ್ನು ಮಾಡಿ ಅಹಲ್ಯಾಬಾಯಿ "ಯಾರು ಆ ಬಂಡುಕೋರರನ್ನು ಹೆಡೆಮುರಿ ಕಟ್ಟುತ್ತಿರೋ ಅಂತಹ ವೀರನಿಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡುತ್ತೇನೆ" ಎನ್ನುತ್ತಾಳೆ. ಆ ಪ್ರಕಾರ ಯಶವಂತರಾವ್ ಎಂಬ ಯುವಕನೊಬ್ಬ ಬಂಡುಕೋರರನ್ನು ಸದೆ ಬಡಿದು ಅಹಲ್ಯಾಬಾಯಿಯ ಮಗಳಾದ ಮುಕ್ತಾಬಾಯಿಯನ್ನು ವಿವಾಹವಾಗುತ್ತಾನೆ. ಅವರಿಗೆ ಒಂದೇ ಗಂಡು ಸಂತಾನವಿರುತ್ತದೆ. ಯಾವುದೋ ಕಾರಣಕ್ಕೆ ಮುಕ್ತಾಭಾಯಿಯ ಮಗ ಮರಣವನ್ನು ಹೊಂದುತ್ತಾನೆ. ಅದೇ ದುಃಖದಲ್ಲಿ ಯಶವಂತರಾವ್ ಕೂಡ ಮರಣವನ್ನು ಹೊಂದುತ್ತಾನೆ. ಹಾಗೆ ಮಗಳು ಮುಕ್ತಾಬಾಯಿಯೂ ಕೂಡ ದುಃಖದಿಂದ ನಿಧನ ಹೊಂದುತ್ತಾಳೆ. ಎಲ್ಲರನ್ನೂ ಕಳೆದುಕೊಂಡ ಅಹಲ್ಯಾಬಾಯಿ ಅಧೀರಳಾಗದೇ ದೇಶದ ಅಭ್ಯುದಯಕ್ಕೆ ಮುನ್ನುಡಿ ಬರೆಯುತ್ತಾಳೆ.
ಅಹಲ್ಯಾಬಾಯಿ ಹೋಳ್ಕರಳನ್ನು ನಾವೇಕೆ ನೆನೆಸಬೇಕು? ಉತ್ತರದಲ್ಲಿ ಮೊಘಲ್ ಅರಸರಿಂದ, ದಕ್ಷಿಣದಲ್ಲಿ ಆದಿಶ್ಶಾಹಿಗಳಿಂದ ನಾಶಗೊಂಡ ನಮ್ಮ ಪುರಾತನ ಮಂದಿರಗಳನ್ನೆಲ್ಲ ಪುನರುಜ್ಜೀವನಗೊಳಿಸಿದಳು. ಕಾಶಿ, ಗಯಾ, ದ್ವಾರಕಾ, ಅಯೋಧ್ಯಾ, ರಾಮೇಶ್ವರ, ಬದರಿನಾಥ, ಮಥುರಾ, ಕಂಚಿ ಮುಂತಾದ ಮಂದಿರಗಳು ಈಕೆಯ ಕಾಲಕೀರ್ತಿಯಲ್ಲೇ ಪುನರುತ್ಥಾನಗೊಂಡವು.ಇಡೀ ದೇಶ ಪರ್ಯಟನೆ ಮಾಡಿ, ಎಲ್ಲೆಲ್ಲಿ ಹಿಂದೂ ದೇವಾಲಯಗಳು ಕ್ಷತಿಗೊಂಡಿವೆಯೋ ಅವುಗಳನ್ನೆಲ್ಲ ಮತ್ತೆ ಪುನರ್ ಸ್ಥಾಪಿಸಿದಳು. ಅನೇಕ ಆಣೆಕಟ್ಟು, ಕೆರೆಕಟ್ಟೆಗಳು ಧರ್ಮಛತ್ರ, ಸ್ನಾನಘಟ್ಟಗಳನ್ನು ಅಲ್ಲದೇ ಅಸಂಖ್ಯ ನಿರ್ಮಿತಿಗಳನ್ನು ಅಂದರೆ ಸಾವಿರಕ್ಕೂ ಅಧಿಕ ತನ್ನ ಜೀವಿತಾವಧಿಯಲ್ಲಿ ಮಾಡಿದ್ದಳೆಂದರೆ ನಂಬುವುದು ಅಸಾಧ್ಯ. ದಕ್ಷಿಣ ಭಾರತದ ಕರ್ನಾಟಕದ ಬೇಲೂರಿನಲ್ಲೂ ಕೂಡ ಗಣಪತಿ, ವಿಠೋಬಾ, ಖಂಡೋಬಾ ಮತ್ತಿತರ ಮಂದಿರಗಳನ್ನು ಪುನರುಜ್ಜೀವನಗೊಳಿಸಿದ್ದಾಳೆ. ಅದಕ್ಕಾಗಿ ಆಕೆ ಆಗಿನಕಾಲದಲ್ಲಿ ತನ್ನ ಸ್ವಂತ ಬೊಕ್ಕಸದಿಂದ
ಸುಮಾರು 16 ಕೋಟಿ ರೂಪಾಯಿಗಳನ್ನು ವ್ಯಯಿಸಿದ್ದಾಳೆ. ಎಂದರೆ ಅವಳ ಕಾರ್ಯ ಮತ್ತು ಹಿಂದೂ ಧರ್ಮದ ಕುರಿತಾಗಿ ತುಡಿತ ಎಂತಹ ಅಗಾಧವಾದದ್ದು ಎಂದು ತೋರಿಸುತ್ತದೆ. ಅನೇಕಮಂದಿರಗಳಿಗೆ ಸಾಕಷ್ಟು ಉಂಬಳಿಗಳನ್ನು ನೀಡಿದ್ದಾಳೆ. ಹಿಂದೂಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿ ಅವರ ಆರಾಧ್ಯ ದೈವಗಳನ್ನು ಪುನರುತ್ಥಾನಗೈದಿದ್ದಾಳೆ.ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಿಂದ ಬರೆದಿಡಬೇಕಾದ ಹೆಸರು ಅಹಲ್ಯಾಬಾಯಿ ಯದು. ಆದರೆ ಧರ್ಮಾಂಧ
ಸರ್ಕಾರಗಳು ಇವಳ ಬಗ್ಗೆ ತೋರಿಸಿದ ಅಸಡ್ಡೆ ಅಕ್ಷಮ್ಯ. ಇವಳ ಬಗ್ಗೆಅರಿವು ಮೂಡಿಸುವ ಮಕ್ಕಳಿಗಾಗಿ ಕಲಿಯಲು ಒಂದು ಪಾಠವನ್ನು ಮಾಡಿಲ್ಲ ಎಂಬುದು ಖೇದದ ಸಂಗತಿ.
ಆಕೆಯು ಎಂತಹ ದಾನ ಶೂರ ಕರ್ಣಳಾಗಿದ್ದಳೆಂದರೆ ತನ್ನ ಅಂತಿಮ ಕಾಲ ಸಮೀಪಿಸುತ್ತದೆ ಎಂದಾಗ 12 ಸಾವಿರ ಜನರಿಗೆ ಅನ್ನದಾನ ಮಾಡಿ, ದಕ್ಷಿಣೆಯನ್ನಿತ್ತು ಧ್ಯಾನ ಮಾಡುತ್ತಾ ಜೀವ ತ್ಯಜಿಸಿದಳು. ಅಂದು ಅಗಸ್ಟ 13, 1795. ಯಾವ ರಾಜರ ಮೇಲೂ ದಂಡೆತ್ತಿ ಹೋಗದೇ, ರಾಜ್ಯದ ಅಭಿವೃದ್ಧಿಯನ್ನೇ ಮೂಲ ಮಂತ್ರವನ್ನಾಗಿಸಿದ್ದಳು. ಇಂದೋರ್ ಶಹರವನ್ನು ಮಾರ್ಕೆಟಿಂಗ್ ಸೆಂಟರ್ನ್ನಾಗಿ ಮಾಡಿದ್ದಳು. ಅಲ್ಲಿ ನೇಯ್ಗೆಯಲ್ಲಿ ವಿಶೇಷ ಪರಿಣಿತರನ್ನು ಕರೆದು ಅವರಿಗೆಲ್ಲ ಸೀರೆ ತಯಾರಿಸಲು ಅನುವು ಮಾಡಿ ಕೊಟ್ಟಿದ್ದಳು. ಇವತ್ತಿಗೂ ಇಂದೋರ್ ಸೀರೆ ಪ್ರಸಿದ್ಧಿಯನ್ನು ಪಡೆದಿವೆ.
- ದೀಪಿಕಾ ಚಾಟೆ
ಬೆಳಗಾವಿ
- * * * -