ಲೇಖನಗಳು

ಮಹಾದಾಸೋಹಿ ಶರಣ ಬಸವೇಶ್ವರ ಕಲಬುರ್ಗಿ

ಮಹಾದಾಸೋಹಿ ಶರಣ ಬಸವೇಶ್ವರ ಕಲಬುರ್ಗಿ

ನಿಜಾಮರ ಕಾಲದಲ್ಲಿ ಗುಲಬರ್ಗಾ ಪ್ರದೇಶದಲ್ಲಿ ಬ್ರಿಟೀಷರು ಹೆಚ್ಚು ಪ್ರಭಾವಶಾಲಿಗಳಾಗಿದ್ದರು. ನಿಜಾಮರ ಆಳ್ವಿಕೆ ಉರ್ದುಮಯವಾಗಿತ್ತು. ಮರಾಠಿ ಭಾಷೆ ಕಾಲು ಚಾಚಿತ್ತು. ಅರಾಜಕತೆ ತಾಂಡವವಾತಿಡುತ್ತಿತ್ತು. ಇಂಥ ಪರಿಸ್ಥಿತಿಯಲ್ಲಿ ಕಲಬುರ್ಗಿಯ ಶ್ರೀ ಶರಣಬಸವೇಶ್ವರರ ದಾಸೋಹ ಮಹಾಮನೆಯು ಅತ್ಯದ್ಬುತ ಕಾರ್ಯ ಮಾಡಿದೆ. ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರಿಂದ ಕಲ್ಯಾಣವು ಕೈಲಾಸವೆನಿಸಿದಂತೆ ಶ್ರೀ ಶರಣ ಬಸವೇಶ್ವರರಿಂದ ಕಲಬುರ್ಗಿಯೂ ಸಹ ಕಲ್ಯಾಣದ ಹೆಬ್ಬಾಗಿಲೆನಿಸಿರುವುದು.  

ಶ್ರೀ ಶರಣ ಬಸವೇಶ್ವರರು ಮೂಲತಃ ಕಲಬುರ್ಗಿ ಜಿಲ್ಲೆಯ ಜೇವರಗಿ ತಾಲೂಕಿನ ಅರಳಗುಂಡಗಿ ಗ್ರಾಮದವರು. ಇಲ್ಲಿಯೇ ಸುಸಂಸ್ಕೃತ ಲಿಂಗಾಯತ ಸಾಲೋಕ್ಯ ಮನೆತನದ ಮಲಕಪ್ಪ ಸಂಗಮ್ಮ ದಂಪತಿಗಳಿಗೆ ಮಗನಾಗಿ ಕ್ರಿ.ಶ. 1746ರಲ್ಲಿ ಜನಿಸಿದವರು. ತಮಗೆ ಮಕ್ಕಳಿಲ್ಲದಿರುವುದರಿಂದ ಆದಯ್ಯ ಮಡಿಯಮ್ಮ ದಂಪತಿಗಳು ಇವರನ್ನು ತಮ್ಮ ಮಗನಾಗಿ ಸ್ವೀಕರಿಸಿ ಪಾಲನೆ ಪೋಷಣೆ ಮಾಡುತ್ತಾರೆ. ಅಷ್ಟೇ ವಾತ್ಸಲ್ಯದಿಂದ ಬೆಳೆಸುತ್ತಾರೆ. ಶರಣರ ಮನೆತನದ ಉದ್ಯೋಗ ಒಕ್ಕಲುತನ. ಶರಣರೂ ಒಕ್ಕಲುತನ ಮಾಡುತ್ತಾರೆ. ಗುರುಪೂಜೆಗೆ ಒಕ್ಕಲುತನ, ಲಿಂಗಪೂಜೆಗೆ ವ್ಯಾಪಾರ, ಜಂಗಮ ದಾಸೋಹಕ್ಕೆ ಪರಸೇವೆ ಮಾಡುತ್ತಾರೆ. ತಮ್ಮದೆನ್ನುವುದನ್ನು ಗುರುಲಿಂಗ ಜಂಗಮಕ್ಕೆ ಸಮರ​‍್ಿಸಿ ತ್ರಿವಿಧ ದಾಸೋಹ ನಡೆಸುತ್ತಾರೆ.  

ಶರಣ ಬಸವೇಶ್ವರರ ಗುರುಗಳು ಕಲಕೇರಿಯ ಮರುಳಾರಾಧ್ಯರು. ಅವರ ಮಾರ್ಗದರ್ಶನದಲ್ಲಿ ಕಾಯಕ-ದಾಸೋಹ ತತ್ವಗಳನ್ನು ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಅವುಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ವಯಸ್ಸಿಗೆ ಬಂದಾಗ ಹಿರಿಯರು ಮಾಸ್ಯಾಳ ಗ್ರಾಮದ ಮಹಾದೇವಿಯೊಂದಿಗೆ ಲಗ್ನ ಮಾಡುತ್ತಾರೆ. ಸತಿ-ಪತಿಗಳೊಂದಾಗಿ ಜೀವನ ಸಾಗಿಸುತ್ತಾರೆ. ಇವರ ಉದಾರ ಗುಣ ಬಂಧುಗಳಿಗೆ ಹಿಡಿಸಲಿಲ್ಲ. ಇವನಿಂದ ಮನೆ ಹಾಳಾಗುತ್ತದೆ. ಅವನ ಪಾಲು ಅವನಿಗೆ ಕೊಟ್ಟು ಬೇರೆ ಇಡುತ್ತಾರೆ. ಪಾಲಿಗೆ ಬಂದದ್ದು ಪಂಚಾಮೃತವೆಂದು ಹಾಸಿಗೆಯಿದ್ದಷ್ಟು ಕಾಲು ಚಾಚುತ್ತಾರೆ. ಶರಣರು ತಮ್ಮ ಹೊಲದ ಬೇಲಿ ಕೀಳಿಸುತ್ತಾರೆ. ದನ ಕರುಗಳು ತಮ್ಮ ಹೊಲ ಮೇಯ್ದಷ್ಟು ಅವರಿಗೆ ಸಂತೋಷ. ಹಕ್ಕಿ-ಪಕ್ಷಿಗಳು ಹೊಸತೆನೆ ತಿಂದಷ್ಟು ಹರ್ಷ. ತಿಂದು ನೀರು ಕುಡಿಯಲೆಂದು ಜೋಳದ ದಂಟಿಗೆ ನೀರಿನ ಮಗಿ ಕಟ್ಟಿಸುತ್ತಾರೆ. ಹರವಿ ತುಂಬಿಸಿಡುತ್ತಾರೆ. ಆದರು ತಮ್ಮ ಬಂಧುಗಳಿಗಿಂತ ಇವರ ರಾಶಿಯೇ ಹೆಚ್ಚಾಗುತ್ತದೆ. ಶಿವ ಕೊಟ್ಟದ್ದು ತನಗೆ ಎಂದು ಉಬ್ಬಿ ಸಂತೋಷದಿಂದ ನಲಿನಲಿದಾಡುತ್ತಾರೆ. ದಾಸೋಹ ಕಾರ್ಯಗಳನ್ನು ಹಚ್ಚಿನ ಉತ್ಸಾಹದಿಂದ ಮುಂದುವರೆಸಿಕೊಂಡು ಹೋಗುತ್ತಾರೆ. ಕಡಿಮೆ ಬಿದ್ದರೆ ಧನಿಕರಿಂದ ಕಡ ತರುತ್ತಿದ್ದರು. ಎಂಥ ಕಷ್ಟ ತಾಪತ್ರಯಗಳು ಎದುರಾದರೂ ಸತ್ಯ ಶುದ್ಧಕಾಯಕ ಮತ್ತು ದಾಸೋಹವನ್ನು ನಡೆಸಿಕೊಂಡು ಬಂದರು. 

ಶರಣರ ದರ್ಶನಕ್ಕೆ ಕಡಕೋಳದ ಮಡಿವಾಳಪ್ಪ ಬರುತ್ತಾರೆ. ಅನುಭಾವಿ ಕವಿಗಳು, ಜ್ಞಾನಾನುಭವಿಗಳು. ತಮ್ಮ ಗುರು ಕಲಕೇರಿ ಮರುಳಾರಾಧ್ಯರಿಂದ ಅವರಿಗೆ ಲಿಂಗದೀಕ್ಷೆ ಕೊಡಿಸುತ್ತಾರೆ. ಇವರಿಬ್ಬರಿಂದ ಅರಳಗುಂಡಿಗೆಯಲ್ಲಿ ಅನ್ನದಾಸೋಹ ಹಾಗೂ ಜ್ಞಾನದಾಸೋಹ ಎರಡೂ ಜೊತೆಜೊತೆಯಾಗಿ ನಡೆಯುತ್ತವೆ, ಹಲವಾರು ಜನರು ಅನುಯಾಯಿಗಳಾಗುತ್ತಾರೆ. ವೈರಾಗ್ಯ ಭಾವ ಮೆರೆಯುತ್ತಾರೆ ಅರಿವು, ಆಚಾರ, ಜ್ಞಾನ, ಕ್ರಿಯೆಗಳ ನಡೆ ನುಡಿಗಳ ಸಮನ್ವಯವನ್ನು ತಮ್ಮ ನಡವಳಿಕೆಯಿಂದ ತೋರಿಸಿಕೊಡುತ್ತಾರೆ. ಮಡಿವಾಳಪ್ಪನವರು “ತನ್ನ ತಾ ತಿಳಿದ ಮೇಲೆ ಇನ್ನೇನಿನ್ನೇನು” ಎಂದು ಹಾಡುತ್ತಾ ತಮಗಾದ ಮಹಾನಭಾವವನ್ನು ಇತರರಿಗೂ ತಿಳಿಯ ಹೇಳುತ್ತಾರೆ. ತತ್ವಪದಗಳನ್ನು ರಚಿಸುತ್ತಾರೆ.  

ಶ್ರೀ ಶರಣಬಸವೇಶ್ವರರ ದಾಸೋಹವೆಂಬ ಹಡಗವು ಅರಳಗುಂಡಿಗೆಯಿಂದ ಕಲಬುರ್ಗಿಯವರೆಗೂ ಸಾಗಿಬಂದಿತು. ಈ ಪ್ರದೇಶದಲ್ಲಿ ಮಳೆ ಆಗಲಿಲ್ಲ, ಬೆಳೆ ಬರಲಿಲ್ಲ. ದನಕರುಗಳಿಗೂ ಮೇವು ದೊರಕದಾಯ್ತು. ಅವು ಕಟುಕರ ಮನೆ ಸೇರತೊಡಗಿದವು. ಜನತೆಯ ಹೊಟ್ಟೆಗೆ ಏನೂ ದೊರಕದಾಯ್ತು. ಜನ ಕೂಲಿನಾಲಿ ಕೆಲಸ ಹುಡುಕುತ್ತ ದೊಡ್ಡ ದೊಡ್ಡ ಪಟ್ಟಣಕ್ಕೆ  

ಹೋಗತೊಡಗಿದರು. ಭೀಕರ ಬರಗಾಲವದು. ಈ ಸಂದರ್ಭದಲ್ಲಿ ಶ್ರೀ ಶರಣಬಸವೇಶ್ವರರು ಮನೆ ಮಾರು ತೊರೆದರು ತಮ್ಮಲ್ಲಿದ್ದುದನ್ನೆಲ್ಲ ದಾಸೋಹ ಸೇವೆಗೆ ಸವೆಸಿದರು. ಧನಿಕರಿಂದ ಕಾಳುಕಡಿ ದುಡ್ಡು ಕೂಡಿಸತೊಡಗಿದರು. ಕಡ ಕೊಡುವವರಿಂದಲೂ ತಂದು ದಾಸೋಹ ನಡೆಸತೊಡಗಿದರು. ದಾಸೋಹ ಒಂದು ದಿನವೂ ನಿಲ್ಲಲಿಲ್ಲ. ದಾಸೋಹಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡರು. ಜನ ಬದುಕಿದರು. ಶರಣಬಸವೇಶ್ವರರನ್ನು ಕಂಡು ಜನ ಹಾಡಿ ಹರಸತೊಡಗಿದರು. ಶರಣಬಸವೇಶ್ವರರು ಮಹಾಮಹಿಮರೆಂದು ತಿಳಿದು ತಮ್ಮ ತಮ್ಮ ಊರುಗಳಿಗೆ ಕರೆದುಕೊಂಡು ಹೋಗತೊಡಗಿದರು. ಹೋದ ಹೋದಲ್ಲೆಲ್ಲಾ ದಾಸೋಹ ನಡೆಯುತ್ತಲೇ ಇತ್ತು. 

ಶ್ರೀ ಶರಣಬಸವೇಶ್ವರರ ಮಗ ಗುರುಲಿಂಗ ಜಂಗಮ ನಿಧನ ಹೊಂದಿದನು. ಹೆಂಡತಿ ಮಹಾದೇವಿಯೂ ಸಹ ಶಿವಾಧೀನಳಾದಳು. ಇನ್ನೇನು? ಎಂದು ಶರಣರು ಯೋಚಿಸತ್ತ ಬಸವಣ್ಣನವರ ಕಲ್ಯಾಣಕ್ಕೆ ತೆರಳಲು ಬಯಸಿದರು. ಮುಂದೆ ಹೋಗುವಾಗ ಭೀಮಾನದಿ ಅಡ್ಡ್ಟಗಟ್ಟಿತು. ಮಹಾಪೂರವನ್ನು ಧೈರ್ಯದಿಂದ ದಾಟಿದರು. ಮುಂದೆ ಅವರಾದಿಗೆ ನಡೆದರು.  

ಅವರಾದಿಗೆ ಬಂದಾಗ ಧಾರಾಕಾರವಾಗಿ ಮಳೆ ಸುರಿಯತೊಡಗಿತು. ದಾಸೋಹಕ್ಕೆ ಬೇಕಾದ ಕಟ್ಟಿಗೆಯೆಲ್ಲಾ ತೋಯ್ದುಹೋಯಿತು. ಆಗ ತ್ಯಾಗ ಮೂರ್ತಿಗಳಾದ ಆಲೂರ ದಂಡರಾಯ ಗೌಡರು ದಾಸೋಹ ನಿಲ್ಲಬಾರದೆಂದು ತಮ್ಮ ಮನೆಯ ತೊಲೆ ಜಂತಿಗಳನ್ನೇ ಹಿರಿದು ಕೊಟ್ಟರು. ಎರಡು ವರುಷಗಳವರೆಗೆ ಈ ಗ್ರಾಮದಲ್ಲಿ ಅನ್ನ ಸಂತರೆ​‍್ಣ ನಡೆಯಿತು. ಮುಂದೆ ಬೆಳಗುಂಪಿ ಮಾರ್ಗವಾಗಿ ಫರ್ತಾಬಾದಿಗೆ ತೆರಳಿದರು. ಫರ್ತಾಬಾದಿನ ಜನರು ಅತ್ಯಂತ ಉತ್ಸಾಹದಿಂದ ಶರಣರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋದರು. ಶರಣರ ಮಾರ್ಗದರ್ಶನದಲ್ಲಿ ಅಲ್ಲಿಯೂ ನಿತ್ಯ ಜಂಗಮಮೂರ್ತಿಗೆ ಲಿಂಗಪೂಜೆ, ದಾಸೋಹ ಕಾರ್ಯಗಳು ಸಹ ಎಡಬಿಡದೆ ನಡೆದವು. ಪರೀಕ್ಷೆಯ ಕಾಲ ಎನ್ನಬೇಕು, ಮಳೆ ಹೋಯಿತು. ಬೆಳೆ ಬರಲಿಲ್ಲ ಬರಗಾಲ ಬಿದ್ದಿತು. ಜನರ ಗೋಳು ಹೇಳತೀರದಾಯಿತು. ದಾಸೋಹ ನಿಲ್ಲುವ ಸ್ಥಿತಿಯಲ್ಲಿತ್ತು. ಜನರು, ಮಕ್ಕಳು-ಮರಿಗಳನ್ನು ಮಾರತೊಡಗಿದರು. ಎಲ್ಲಿ ನೋಡಿದರಲ್ಲಿ ಹೆಣಗಳ ರಾಶಿ ಬೀಳಹತ್ತಿದವು. ಈ ಡೋಗಿ ಬರದಲಿ ಭೀಕರ ದೃಶ್ಯವನ್ನು ಕಣ್ಣಾರೆ ಕಂಡ ಶರಣರು ಮಮ್ಮಲನೆ ಮರುಗಿದರು. ಧನಿಕರಿಂದ ಕಾಳು-ಕಡಿ, ಧನ ಸಂಗ್ರಹಿಸಿ ದಾಸೋಹ ಮುಂದುವರಿಸಿದರು. ಜನ ಮತ್ತೆ ಅಷ್ಟಿಷ್ಟು ಬದುಕಿತು. ಆಗ ಶ್ರೀ ಶರಣಬಸವೇಶ್ವರ ಮಹಿಮೆಯು ದಿಗ್‌ದಿಗಂತಗಳಲ್ಲಿ ಹರಡಿತು.  

ಕಲಬುರ್ಗಿಯ ದೊಡ್ಡಪ್ಪಗೌಡರು ವ್ಯಾಪಾರಕ್ಕೆಂದು ಫಾರ್ತಾಬಾದಿಗೆ ಬಂದಿದ್ದರು. ಅಲ್ಲಿ ದಾಸೋಹಮೂರ್ತಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದು ಧನ್ಯರಾದರು. ಶರಣರನ್ನು ಕಲಬುರ್ಗಿಗೆ ದಯಮಾಡಿಸಬೇಕೆಂದು ದೊಡ್ಡಪ್ಪಗೌಡರು ಆಮಂತ್ರಿಸಿದರು. ಶರಣರು ದಾಸೋಹಕ್ಕೆ ಅಲ್ಲಿ ಇಲ್ಲಿ ಕಡ ತಂದಿದ್ದ ಕಾಳು-ಕಡಿ, ಧನವನ್ನು ದೊಡ್ಡಪ್ಪಗೌಡರೇ ತೀರಿಸಿದರು. ಶರಣರು ಸಂತೋಷಭರಿತರಾಗಿ ಕಲಬುರ್ಗಿಗೆ ದಯಮಾಡಿಸಿದರು. ಕಲಬುರ್ಗಿಯ ದೊಡ್ಡಪ್ಪಗೌಡರು ಶರಣರಿಗೆ ತಮ್ಮ ಮನೆಯನ್ನೇ ಕೊಟ್ಟರು. ಅಲ್ಲಿಯೇ ನಿತ್ಯ ಲಿಂಗಾರ್ಚನೆ, ಜಂಗಮಾರ್ಚನೆ ದಾಸೋಹ ನಡೆಸತೊಡಗಿದರು. ತಮ್ಮ ಆಸ್ತಿಯನ್ನೆಲ್ಲಾ ದಾಸೋಹಕ್ಕಾಗಿ ದೊಡ್ಡಪ್ಪಗೌಡರು ಮೀಸಲಿಟ್ಟರು. ಅಂದು ಹೊತ್ತಿಸಿದ ನಂದಾದೀಪ ಇಂದಿಗೂ ಪ್ರಜ್ವಲಿಸುತ್ತಿರುವುದು. 

ಕಲಬುರ್ಗಿಯ ಶರಣರ ವಾಸ್ತವದಿಂದ ದಾಸೋಹದ ತವನಿಧಿಯಾಯ್ತು. ಕಲಬುರ್ಗಿಯ ಹಾರೋಗೇರಿ(ಬ್ರಹ್ಮಪುರ)ಯಲ್ಲಿನ ದೊಡ್ಡಪ್ಪಗೌಡರ ಮನೆಯು ಪವಿತ್ರ ಕ್ಷೇತ್ರವಾಯಿತು. ಸುತ್ತಮುತ್ತಲಿನ ಗ್ರಾಮಗಳ ಜನರು ರೈತರು ಈ ದಾಸೋಹಕ್ಕೆ ತಾವು ಬೆಳೆದ ಕಾಳುಕಡಿಗಳನ್ನು ಬಂಡಿ ತುಂಬಿಕೊಂಡು ತಂದು ಅರ​‍್ಿಸಿದರು. ಅನ್ನದಾಸೋಹ, ಜ್ಞಾನದಾಸೋಹ ನಿರಂತರ ನಡೆಯಿತು. ಶರಣರನ್ನು ತಮ್ಮ ಪಾಲಿನ ದೇವರೆಂದು ಭಯ-ಭಕ್ತಿಯಿಂದ ಗೌರವಿಸಿದರು. ಎಲ್ಲ ಮತ, ಪಂಥದ ಕೋಮಿನವರು ಶರಣರ ಶಿಷ್ಯರಾಗಿ ದಾಸೋಹಕ್ಕೆ ಹೆಗಲು ಕೊಟ್ಟರು. ಸಂಪ್ರದಾಯಕ್ಕಂಟಿದ ಕುರುಡು ನಂಬಿಕೆ ದೂರಮಾಡಿ ಎಲ್ಲರಲ್ಲೂ ಪ್ರೀತಿ, ವಿಶ್ವಾಸ ಮೂಡಿದ್ದು ಅಲ್ಲದೇ ಕಾಯಕ ಮತ್ತು ಶಿವಶರಣರ ತತ್ವಸಿದ್ಧಾಂತವನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಲು ತಿಳಿಸಿ ಇತರರಿಗೂ ಅಳವಡಿಸಿಕೊಳ್ಳಲು ಪ್ರೇರೇಪಿಸಿದರು, ಶ್ರದ್ಧೆ ಗಟ್ಟಿಗೊಂಡಿತು. 

ಶರಣಬಸವೇಶ್ವರರು ದಾಸೋಹ ಸೇವೆ ಮುಂದುವರೆಸಿಕೊಂಡು ಹೋಗಲು ಉತ್ತರಾಧಿಕಾರಿಯನ್ನಾಗಿ ದೊಡ್ಡಪ್ಪಗೌಡರಿಗೆ ನೇಮಿಸಿದರು. ನಂತರ ಎಲ್ಲರನ್ನು ಸಂತೋಷದಿಂದ ಕಣ್ತುಂಬಿ ನೋಡಿದ ಶರಣರು ಲೋಕದ ನಂಜನ್ನು ತಾವೇ ಸ್ವೀಕರಿಸಿದ್ದರು. ಕ್ರಿ. ಶ. 1822ರಲ್ಲಿ ಸಮಾಧಿಗೆ ಜಾರಿದರು. ಕ್ರಿ.ಶ. 1746 ರಿಂದ 1822ರ ಪರ‌್ಯಂತ 76 ವರ್ಷ ಬಾಳಿದರು. (ಸದ್ಯ 1822ರಿಂದ 2023ಕ್ಕೆ 201ನೇ ಜಾತ್ರಾಮಹೋತ್ಸವ ಮಾರ್ಚ ತಿಂಗಳ 19 ರಂದು ರಂಗಪಂಚಮಿಯಂದು ರಥೋತ್ಸವ ನೆರವೇರುತ್ತದೆ.)  

ಕಲಬುರ್ಗಿಯಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪಾ ಅವರು ಏಳನೇ ಪೀಠಾಧಿಕಾರಿಗಳಾಗಿದ್ದಾರೆ. ಕಿ.ಶ. 1918ರಲ್ಲಿ ಶ್ರೀ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘ ಸ್ಥಾಪಿಸಿದರು. ಇದರ ಆಶ್ರಯದಲ್ಲಿ ಶಿಶುವಿಹಾರ, ಪ್ರಾಥಮಿಕ, ಪ್ರೌಢಶಾಲೆ, ಕಲಾ, ವಾಣಿಜ್ಯ ಪದವಿ ಕಾಲೇಜು, ಇಂಜನೀಯರಿಂಗ್ ಕಾಲೇಜು ತೆರೆದು ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅದು ಅಲ್ಲದೇ ಎಲ್ಲಾ ಬಡಮಕ್ಕಳು ಕಲಿತು ಮುಂದೆ ಬರುವಂತೆ ಶ್ರೀಮಠದ ದಾಸೋಹದಲ್ಲಿ ಉಂಡು ಎಲ್ಲಾ ಬಡಮಕ್ಕಳು ನಾಡಿನಲ್ಲೆಡಿ ಹೆಸರು ಮಾಡಿದ್ದಾರೆ. ಇದು ಶರಣರ ಶಿಕ್ಷಣದ ಬಗ್ಗೆ ಇರುವ ಬಗ್ಗೆ ಕಾಳಜಿ ತೋರಿಸುತ್ತಿದೆ. ಇದು ಶರಣರ ಅತ್ಯದ್ಭುತ ಕೊಡುಗೆ  

ಪೂಜ್ಯ ದೊಡ್ಡಪ್ಪ ಅಪ್ಪಾ ಅವರು ಉತ್ತರಾಧಿಕಾರಿಯನ್ನಾಗಿ ಅವರ ಜೇಷ್ಠ ಪುತ್ರ ಪೂಜ್ಯ ಶರಣಬಸಪ್ಪ ಅಪ್ಪಾ ಅವರನ್ನು ಆಯ್ಕೆ ಮಾಡಿದರು. ಅವರು ದಿ. 19-6-1983ರಂದು 8ನೇಯವರಾಗಿ ಪೀಠವನ್ನು ಅಲಂಕರಿಸಿದರು. ಪೂಜ್ಯ ದೊಡ್ಡಪ್ಪ ಅಪ್ಪಾ ಅವರು  ಗೋದುಬಾಯಿ ಅವರ ಸುಪುತ್ರರಾಗಿ 14-11-1935ರಂದು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ (ತತ್ವಜ್ಞಾನ) ಪದವಿಯನ್ನು ಉಚ್ಛಶ್ರೇಣಿಯಲ್ಲಿ ಪಡೆದಿದ್ದಾರೆ. ಅದು ಅಲ್ಲದೇ ಹೈದ್ರಾಬಾದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜ್ಞಾನರತ್ನ ಪತ್ರಿಕೆ ತೆರೆದು ಪುರಾಣ, ದಾಸೋಹಕ್ಕೆ ಒತ್ತುಕೊಟ್ಟು ಅಂದು ವಿವಿಧ ಪುರುಣ ಮಂಗಲೋತ್ಸವ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಇಂತಹ ಪುರಾಣ ಪ್ರವಚನಗಳ ಮೂಲಕ ಕರುನಾಡಿಗೆ ಹೆಮ್ಮೆಯನ್ನು ತರುತ್ತವೆ. ಅಂತಹ ಮಹಾತ್ಮರನ್ನು ನಾವೆಲ್ಲ ನೆನೆದು ಪಾವನರಾಗೋಣ. 

- ಚಿದಾನಂದಯ್ಯ ಶ್ರೀಶಾಂತಯ್ಯನಮಠ 

ಗದಗ   

- * * * - 


ಸುದ್ದಿ ಓದಿ