ಲೇಖನಗಳು

ಮಾನವೀಯತೆಯ ವಿಕಾಸಕ್ಕಾಗಿ ಬೆಳಗಿದ ಮಹಿಮಾ ಪುರುಷರು

ಮಾನವೀಯತೆಯ ವಿಕಾಸಕ್ಕಾಗಿ ಬೆಳಗಿದ ಮಹಿಮಾ ಪುರುಷರು

ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಶ್ರೀ ಪೀಠದ ಧ್ಯೇಯವಾಕ್ಯವನ್ನು ಮಾಡಿದ ಧರ್ಮದ ಮಹಾನುಭಾವ, ಮಾನವತೆಯ ವಿಕಾಸಕ್ಕಾಗಿ, ಧರ್ಮ ಸಂರಕ್ಷಣೆಗಾಗಿ ಶರವೇಗದ ಕಾರ್ಯಮಾಡಿ ಸ್ಫೂರ್ತಿ ತುಂಬಿದ ತ್ರಿಕಾಲ ವಂದನೀಯ ರಂಭಾಪುರಿ ಪೀಠದ ಲಿಂ. ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಸ್ವಾಮಿಗಳ ಪ್ರಭಾವ ನಾಡಿನ ಜನತೆಯ ಮೇಲೆ ಬಹಳ ಇದೆ. ಇಂದು ಅವರ 40ನೇಯ ಪುಣ್ಯಸ್ಮರಣೆ.  

ಶಿವನ ಪ್ರತೀಕವಾಗಿ ಗುರು ರೂಪದಲ್ಲಿ ಜನಿಸಿದ ವೀರಗಂಗಾಧರ ಶಿವಾಚಾರ್ಯರು ಹೊರನೋಟಕ್ಕೆ ವಜ್ರದಂತೆ ಕಠೋರವಾಗಿ ಕಂಡರೂ ಶ್ರೀಗಳ ಹೃದಯ ಕುಸುಮದಂತೆ ಮೃದುವಾಗಿತ್ತು. ಸೋಲರಿಯದ ಜೀವ, ಸಮಾಜಕ್ಕೆ ಜೀವನಕ್ಕೆ ಅಂಟಿಕೊಂಡಿದ್ದ ಅಜ್ಞಾನವನ್ನು ಹೋಗಲಾಡಿಸಲು ಸತತ ಪ್ರಯತ್ನಿಸಿ ಸಮೃದ್ಧ ಸಮಾಜ ರಚನೆಗಾಗಿ ತ್ರಿಕರಣ ಪೂರ್ವಕವಾಗಿ ಶ್ರಮಿಸಿದ್ದಾರೆ. ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಈ ಯುಗದ ಮಹಿಮಾ ಪುರುಷರು. ಅವರು ಬೋಧಿಸಿದ ಮಾನವ ಧರ್ಮದ ಬಗೆಗೆ ಚಿಂತಿಸಿ ಅರ್ಥೈಸಿಕೊಂಡು ನಿತ್ಯ ಆಚರಣೆಯಲ್ಲಿ ತರಬೇಕಾಗಿದೆ. ಸಮಾಜವು ಧರ್ಮದ ತಳಹದಿಯ ಮೇಲೆ ನಿಂತಾಗ ಅದಕ್ಕೆ ಅರ್ಥ ಬರುತ್ತದೆ. ಸುಂದರವಾದ ಸಮಾಜ ನಿರ್ಮಾಣದ ತಳಹದಿಯೇ ಮಾನವಧರ್ಮ. ಸತ್ಯ, ಪ್ರೇಮ, ಕರುಣೆ, ಶಾಂತಿಗಳ ಮೇಲೆ ನಿಲ್ಲುವುದೇ ನಿಜವಾದ ಮಾನವ ಧರ್ಮ. ಧರ್ಮದ ಕವಚ ಪ್ರತಿಯೊಬ್ಬರಿಗೂ ಬೇಕು. ಧರ್ಮದಿಂದ ಇಹಲೋಕ ಗೆಲ್ಲಬಹುದು. ಪರಲೋಕ ಸಾಧಿಸಬಹುದು. ಕಲಿಯುಗದಲ್ಲಿ ನಮ್ಮನ್ನು ದೇವರೆಡೆಗೆ ಕೊಂಡೊಯ್ಯುವುದೇ ಧರ್ಮ.  

ಆಧ್ಯಾತ್ಮಿಕ ಬೆಳಗಲು ಅವತರಿಸಿದ ಪೂಜ್ಯರು ಹುಬ್ಬಳ್ಳಿ ತಾಲೂಕ ಪಾಲಿಕೊಪ್ಪ ಗ್ರಾಮದಲ್ಲಿ ಕೃಷಿ ಕಾಯಕದ, ಸನ್ನಡತೆಯ ಧಣಿ ಎನ್ನಿಸಿಕೊಂಡಿದ್ದ ವೇ.ಮೂ.ಅಡಿವೆಯ್ಯಸ್ವಾಮಿ ಹಾಗೂ ವಿನಯ, ಕರುಣೆ, ಪ್ರೀತಿ, ಮಮತೆಗಳನ್ನು ಆಭರಣಗಳನ್ನಾಗಿ ಮಾಡಿಕೊಂಡಿದ್ದ ಮಾತೋಶ್ರೀ ಸಿದ್ಧಮ್ಮನವರ ಕಂದನಾಗಿ 1903 ಏಪ್ರೀಲ್ 8 ರಂದು ಜನಿಸಿದರು. ಪಾಲಿಕೊಪ್ಪದ ಹಿರೇಮಠ ಗುರುಮಠವಾಗಿತ್ತು. ಅವರ ಸಂಸ್ಕಾರಕ್ಕೆ ಅದೇ ಬುನಾದಿಯಾಯಿತು. ಎಂಟನೇ ವರುಷಕ್ಕೆ ವೀರಮಾಹೇಶ್ವರ ದೀಕ್ಷೆಯನ್ನು ಪಡೆದುಕೊಳ್ಳುತ್ತಾರೆ. ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳ ಜೊತೆಗೆ ಮರಾಠಿ ಭಾಷೆಯಲ್ಲೂ ಪ್ರಭುತ್ವ ಸಾಧಿಸುವುದರ ಜೊತೆಗೆ ಯೋಗ, ಶಿವಪೂಜೆ, ಜಪ-ತಪ ಅನುಷ್ಠಾನಗಳನ್ನು ವೃದ್ಧಿಸಿಕೊಂಡು ಮನೋನಿಗ್ರಹ ಸಾಧಿಸಿ, ಪರಿಪಕ್ವವಾಗುತ್ತಾರೆ. 1926ರಲ್ಲಿ ಶಾಸ್ತ್ರೋಕ್ತ, ವಿಧಿವತ್ತಾಗಿ ಪಾಲಿಕೊಪ್ಪ ಹಿರೇಮಠಕ್ಕೆ ಶ್ರೀ ಷ.ಬ್ರ.ಗಂಗಾಧರ ಶಿವಾಚಾರ್ಯ ಸ್ವಾಮಿಗಳು ಎಂಬ ನಾಮದಿಂದ ಗುರು ಪಟ್ಟಾಧಿಕಾರವನ್ನು ಮಾಡುತ್ತಾರೆ. 

ನಂತರ ಕಠಿಣವಾದ ವೃತನಿಯಮಗಳನ್ನು ತಾವೇ ಹಾಕಿಕೊಂಡು, ತಾವು ಸ್ವಾಮಿಗಳು ಆಗಿರುವುದು ಜಗತ್ತಿಗೆ ಮೂಲಕಾರಣನಾದ ಶಿವನನ್ನು ಹಾಗೂ ಆದಿಗುರು ರೇಣುಕರನ್ನು ಒಲಿಸಿಕೊಳ್ಳುವ ಹಠದಿಂದ ಅಖಂಡ ಅನುಷ್ಠಾನಗೈಯಲು ಮಠವನ್ನು ಬಿಟ್ಟು ನಿರ್ಜನವಾದ, ಪ್ರಶಾಂತವಾದ ಗುಡ್ಡದಲ್ಲಿ ಕುಳಿತು ಮೌನಾಚರಣೆಯೊಂದಿಗೆ ತಪಸ್ಸನ್ನು ಮಾಡುತ್ತಾರೆ. ಮಿತ ಆಹಾರದೊಂದಿಗೆ ಬೇವಿನ ರಸವನ್ನು ಸೇವಿಸಿ ದೇಹವನ್ನು ದಂಡಿಸುತ್ತಾರೆ. ಶಿವನನ್ನು ಆರಾಧಿಸಿ ಆತನ ಅನುಗ್ರಹ ಪಡೆದ ಶಿವಯೋಗಿಗಳಾಗುತ್ತಾರೆ. ಅನುಷ್ಠಾನ ಮುಗಿಸಿ ಮರಳಿ ಪಾಲಿಕೊಪ್ಪಕ್ಕೆ ಬಂದು ಮಠದ ಭಕ್ತರನ್ನು, ಸರ್ವಮತದವರನ್ನು ಸಮಾನ ದೃಷ್ಟಿಯಿಂದ ಸನ್ಮಾರ್ಗದತ್ತ ಹೋಗುವ ದಾರಿಯನ್ನು ತೋರುತ್ತಾರೆ. 

ಶಿಗ್ಗಾಂವ ತಾಲೂಕ ಗಂಗೀಭಾವಿ ಕ್ಷೇತ್ರದಲ್ಲಿಯೂ ಕೂಡಾ ಅನುಷ್ಠಾನವನ್ನು ಮಾಡುತ್ತಾರೆ. ಇವರ ಆಚಾರ-ವಿಚಾರ, ಪೂಜಾ ವೈಖರಿ, ಉಪನ್ಯಾಸ ಪಾಂಡಿತ್ಯ ಪ್ರತಿಭೆಯನ್ನು ಕಂಡು ರಂಭಾಪುರಿ ಪೀಠದ ಜಗದ್ಗುರುಗಳಾದ ಶ್ರೀ ಶಿವಾನಂದ ಶಿವಾಚಾರ್ಯರು 1931ರಲ್ಲಿ ವಿಧಿವತ್ತಾಗಿ ಇವರನ್ನು ಬೆಂಗಳೂರಿನ ಮಹಾಂತರ ಮಠದ ಪಟ್ಟಾಧಿಕಾರಿಗಳನ್ನಾಗಿ ಮಾಡುತ್ತಾರೆ. ಶ್ರೀ ರೇಣುಕರೇ ಈ ಕಾರ್ಯಕ್ಷೇತ್ರವನ್ನು ಜಗದ್ಗುರುಗಳ ಮೂಲಕ ನಮಗೆ ದಯಪಾಲಿಸಿದ್ದಾರೆ ಎಂದು ಕಾರ್ಯಸನ್ನದ್ಧರಾಗುತ್ತಾರೆ. ತ್ರಿಭಾಷಾ ಪಂಡಿತರಾದ ಪೂಜ್ಯರ ಸಿದ್ಧಾಂತ ಶಿಖಾಮಣಿಯ ಉಪನ್ಯಾಸ ಸರ್ವ ಭಕ್ತರ ಮನೆಯ ಮಾತಾಗಿ ಪ್ರಭಾವವನ್ನು ಬೀರುತ್ತಾರೆ. ಪಾಲಿಕೊಪ್ಪದ ಭಕ್ತರು ಪೂಜ್ಯರು ದೂರದ ಬೆಂಗಳೂರಿಗೆ ಹೋದರು. ಅವರನ್ನು ಕರೆತರುವ ವಿಚಾರದಿಂದ ಅವರನ್ನು ಬೆಂಗಳೂರಿಗೆ ಹೋಗಿ ಆಹ್ವಾನಿಸಿ ಶಿವಲಿಂಗ ಪೂಜಾ ಅನುಷ್ಠಾನ, ಧರ್ಮೋಪದೇಶಕ್ಕಾಗಿ ಬಿನ್ನಹ ಮಾಡಿಕೊಂಡು ಬರುತ್ತಾರೆ. ಪೂಜ್ಯರು ಪಾಲಿಕೊಪ್ಪಕ್ಕೆ ದಯಮಾಡಿಸುತ್ತಾರೆ. ನಂತರ ಇಲ್ಲೇ ಇರಬೇಕು ಎನ್ನುವ ಭಕ್ತರ ಅಪೇಕ್ಷೆಯಂತೆ ಶರೀಫ ಸಾಹೇಬರ ಗುರಗಳಾದ ಕಳಸದ ಗುರು ಗೋವಿಂದ ಭಟ್ಟರು ಕುಳಿತು ಆಧ್ಯಾತ್ಮಿಕ ವಿಷಯಗಳನ್ನು ಚಿಂತನೆ ಮಾಡಿದ ಲಕ್ಷ್ಮೇಶ್ವರದಿಂದ 4 ಕಿ.ಮೀ.ದೂರದಲ್ಲಿ ಇರುವ ಗುಡ್ಡದ ಸ್ಥಳವನ್ನು ಆಯ್ಕೆ ಮಾಡಿಕೊಂಡು 1937ರಲ್ಲಿ ಮುಕ್ತಿಮಂದಿರ ಎಂಬ ನಾಮಕರಣ ಮಾಡಿ ಅಲ್ಲಿಯೂ ಕೂಡಾ ಅನುಷ್ಠಾನವನ್ನು ಮಾಡಿ ತಪೋಬಲವನ್ನು ಪಡೆದುಕೊಳ್ಳುತ್ತಾರೆ. ನಂತರ ಶಿವ-ಪಾರ್ವತಿ ಮಂದಿರ ನಿರ್ಮಾಣ ಮಾಡುತ್ತಾರೆ.  

18ನೇ ಶತಮಾನದಲ್ಲಿ ಗುರು ಮಹತಿಯನ್ನು ಸಾರಿದ ಶರಣರ ಹೇಳಿಕೆಯಂತೆ, ಹಲವು ಮಾತೇನು ನೀನೊಲಿದು ಪಾದವಿಟ್ಟ, ನೆಲವೇ ಸುಕ್ಷೇತ್ರ, ಜಲವೇ ಪಾವನ ತೀರ್ಥ, ಸುಲಭ ಶ್ರೀ ಗುರುವೇ ಕೃಪೆಯಾಗು ಎಂಬಂತೆ ಹಿಂದೆ ಸಂತ ಕವಿ ಶಿಶುನಾಳ ಶರೀಫರು ನುಡಿದಂತೆ, ಶ್ರೀಗುರು ಗುರುಗೋವಿಂದ ಭಟ್ಟರು ಹೇಳಿದಂತೆ, ಶ್ರೀ ಗುರು ಗಂಗಾಧರ ಶಿವಾಚಾರ್ಯ ಸ್ವಾಮೀಜಿಯವರು ಪಾದವಿಟ್ಟು ಅದನ್ನು ಮುಕ್ತಿಮಂದಿರ ಎನ್ನುವ ಪವಿತ್ರ ಕ್ಷೇತ್ರವನ್ನಾಗಿಸಿದರು. ಮುಂದೆ ಅಲ್ಲಿ ಸಂಗೀತ ಪಾಠಶಾಲೆ, ಗೋಶಾಲೆ ನಿರ್ಮಾಣ ಮಾಡಿ ಭಕ್ತರಿಗೆ ಅನುಕೂಲ ಕಲ್ಪಿಸಿದರು.  

ಶ್ರೀ ಗಂಗಾಧರ ಶಿವಾಚಾರ್ಯರು ಮೂರು ಮಠಗಳ ನಿರ್ವಹಣೆ ಮಾಡುವುದನ್ನು ಹಾಗೂ ಅವರ ಶಿವಪೂಜಾ ವೈಖರಿ, ಕಾರ್ಯಸಿದ್ಧಿ ಲೀಲೆಗಳನ್ನು ಕಂಡು ರಂಭಾಪುರಿ ಪೀಠದ ಶ್ರೀ ಜಗದ್ಗುರು ಶಿವಾನಂದ ಶಿವಾಚಾರ್ಯರು ಇಂತಹ ಅಪರೂಪದ ಜ್ಞಾನ ರತ್ನವನ್ನು ರಂಭಾಪುರಿ ಪೀಠದ ಉತ್ತರಾಧಿಕಾರಿಯನ್ನಾಗಿ ಮಾಡುವ ಸಂಕಲ್ಪವನ್ನು ಹೊಂದಿ ಅವರ ಹೆಸರಿನಿಂದ ಮೃತ್ಯುಪತ್ರವನ್ನು ಬರೆಯುತ್ತಾರೆ. 1946ರಲ್ಲಿ ಅವರು ಲಿಂಗೈಕ್ಯರಾದ ಮೇಲೆ ಅವರ ಸಂಕಲ್ಪದಂತೆ 1947 ಮೇ 15 ರಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರುಗಳಾಗಿ ವೈಭವದಿಂದ ಪಟ್ಟಾಧಿಕಾರ ಜರುಗಿತು. 119ನೇ ಜಗದ್ಗುರುಗಳಾಗಿ ಪೀಠಾರೋಹಣ ಮಾಡಿದ್ದನ್ನು ಸ್ಮರಿಸಿದಾಗ ಅವರ ಸಾಧನೆ ಸಿದ್ಧಿ ಸಣ್ಣದಲ್ಲ ಎಂದೇ ಎನಿಸುತ್ತದೆ. ಅನೇಕ ಅನುಭಾವಿ ಹಾಗೂ ವಿಚಾರಪೂರಿತ ತಪೋವಾಣಿಯನ್ನು ಈ ರಾಷ್ಟ್ರಕ್ಕೆ ಕೊಟ್ಟಿದ್ದಾರೆ. ಇಂದಿಗೂ ಕೂಡ ಅವು ಪ್ರಸ್ತುತ.  

ಅವುಗಳಲ್ಲಿ ವಿಜ್ಞಾನ, ನಾಗರಿಕತೆ, ಪ್ರಬಲ ರಾಜಕೀಯ ಸಂಘರ್ಷದಲ್ಲಿ ಎಂದೂ ಎಲ್ಲಿಯೂ ಧರ್ಮದ ಕೊಲೆಯಾಗದಿರಲಿ. ಮತ್ತು ವಿಚಾರ ಕ್ರಾಂತಿಯ ನೆವದಲ್ಲಿ ವಿಕಾರ ಕ್ರಾಂತಿ ಆಗಬಾರದು. ಧೇರ್ಮಕ್ಕಾಗಿ ಏಳಿರಿ, ಧರ್ಮಕ್ಕಾಗಿ ಬಾಳಿರಿ, ಧರ್ಮಕ್ಕಾಗಿ ಆಳಿರಿ, ಧರ್ಮಕ್ಕಾಗಿ ತಾಳಿರಿ ಹೀಗೆ ಅನೇಕ ತಾತ್ವಿಕ ತೇಜಸ್ಸಿನ ವಿಚಾರಗಳನ್ನು ಹೊಂದಿದ್ದ ಜಗದ್ಗುರುಗಳು ಜ್ಞಾನದಲ್ಲಿ ಪರಮಾನಂದರು. ಗೋಣಿ ತೊಟ್ಟು ಮೈತುಂಬ ವಿಭೂತಿ, ರುದ್ರಾಕ್ಷಿ ಕೀರೀಟ ಧರಿಸಿ ಪರಶಿವನಂತೆ ಕಾಣುವ ವೀರಗಂಗಾಧರ ಜಗದ್ಗುರುಗಳವರು ಸರ್ವ ಮತೀಯರ ಪ್ರೀತಿಗೆ, ಭಕ್ತಿಗೆ ಪಾತ್ರರಾಗಿದ್ದರು. ಭಕ್ತರ ಮನಸ್ಸಿಗೆ ಮುಟ್ಟುವಂತೆ ಅನೇಕ ಕಿರು ಹೊತ್ತಿಗೆಗಳನ್ನು ಬರೆದು ಪ್ರಕಟಿಸಿದ್ದಾರೆ. ‘ಸರ್ವಾನುಕೂಲ ಶಿವಪೂಜಾ ವಿಧಿ’ ‘ವಿಭೂತಿ’ ‘ತ್ರಿದಳ’ ನಿಂದಕರು ನಿತ್ಯ ಸುಖದಾಯಕರೇ ಅಲ್ಲದೇ ಗೋರಕ್ಷ ಗರ್ವಹರಣ ಎಂಬ ನಾಟಕವು ಬುದ್ಧಿಜೀವಿಗಳನ್ನು ವಿಸ್ಮಯಗೊಳಿಸಿತು. ಅನುಭಾವಿಕ ಗೀತೆಯಾದ ‘ಧರ್ಮಗೀತೆ’ಯಲ್ಲಿಯ ವಿಚಾರಶಕ್ತಿ, ಸಾಹಿತ್ಯಶಕ್ತಿ ಅಗಾಧವಾಗಿದೆ. ಹೀಗೆ ಅನೇಕ ಮೌಲ್ಯಯುತ ಕೃತಿಗಳನ್ನು, ಗ್ರಂಥಗಳನ್ನು ಬರೆದು ಪ್ರಕಟಿಸಿದ್ದಾರೆ. 

ಪೂಜ್ಯರ ಜನಜಾಗೃತಿಯ ಧರ್ಮಸಭೆ ಮತ್ತು ಅಡ್ಡಪಲ್ಲಕ್ಕಿ ಉತ್ಸವಗಳು ಸ್ಮರಣಾರ್ಹವಾದದ್ದು. ಶ್ರೀ ರಂಭಾಪುರಿ ಪೀಠದ ಮೇಲೆ ಅಪಾರ ಭಕ್ತಿ ವಿಶ್ವಾಸವನ್ನು ಹೊಂದಿದ್ದ ಅನೇಕ ರಾಷ್ಟ್ರ ನಾಯಕರು, ರಾಜ್ಯದ ಮುಖ್ಯಮಂತ್ರಿಗಳು, ಮಂತ್ರಿಗಳು, ರಾಜ್ಯಪಾಲರು, ಶ್ರೀ ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಭಗವತ್ಪಾದಂಗಳವರ ಆಶೀರ್ವಾದ ಪಡೆದು ಧನ್ಯರಾದರು ಎನ್ನುವುದು ಸ್ಮರಣೀಯ. 

ಧರ್ಮ ಸಾಮ್ರಾಜ್ಯದ ಚಕ್ರವರ್ತಿಗಳಾದ ಪೀಠಾಧೀಶ್ವರರು ಶಿಷ್ಯನ ಅಜ್ಞಾನ ಮೋಹವನ್ನು ತಮ್ಮ ಹರಿತವಾದ ನಾಲಿಗೆಯಿಂದ ಬೋಧಿಸುವ ಶಕ್ತಿ ಪಡೆದುಕೊಂಡಿದ್ದರು. ಬಾಗಿ ಬಂದವನ ಪಾಪ-ತಾಪಗಳನ್ನು ಕಳೆಯುವ ತಪಸ್ಸಿನ ಶಕ್ತಿ ಗಳಿಸಿಕೊಂಡಿದ್ದ ಶ್ರೀಗಳು ತಮ್ಮ ದಿವ್ಯಶಕ್ತಿಯನ್ನು ಜನಕಲ್ಯಾಣಕ್ಕಾಗಿ ವಿನಿಯೋಗಿಸಿ ಗುರುಸಾರ್ವಭೌಮರಾಗಿದ್ದರು. ಆದರೆ ಭಕ್ತರ ಅಪೇಕ್ಷೆಯಂತೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು ಇಂದು ರಾಜ್ಯದಲ್ಲಿಯೇ ಅವು ಹೆಮ್ಮೆಯ ವಿದ್ಯಾ ಸಂಸ್ಥೆಗಳಾಗಿವೆ. 

ನಾಡಿನಲ್ಲಿ ಧರ್ಮ ಧ್ವಜ ಎತ್ತಿ ಹಿಡಿದು, ಭಕ್ತಯರಲ್ಲಿ ಭಕ್ತಿಯ ಹೊಳೆಯನ್ನೇ ಹರಿಸಿ ನಾಡನ್ನು ಸಾಂಸ್ಕೃತಿಕವಾಗಿ ಬೆಳೆಸಿ, ಭಕ್ತಿಯ ಮಾರ್ಗದಲ್ಲಿ ಜನತೆಯ ಹೃದಯ ಹೊಳೆಯನ್ನೇ ಹರಿಸಿ ನಾಡನ್ನು ಸಾಂಸ್ಕೃತಿಕವಾಗಿ ಬೆಳೆಸಿ, ಭಕ್ತಿಯ ಮಾರ್ಗದಲ್ಲಿ ಜನತೆಯ ಹೃದಯ ಪರಿವರ್ತನೆ ಮಾಡಿದ ಮಹಾನ್ ದಾರ್ಶನಿಕರು. ಲೋಕಕಲ್ಯಾಣಕ್ಕಾಗಿ ಸಾಧಿಸಿದ ಮಹಾದೇವರು. ವೈರಾಗ್ಯದ ಶಿಖರ, ತಪಸ್ಸಿನ ಭಂಡಾರವಾಗಿದ್ದ ಜಗದ್ಗುರುಗಳು ಲಿಂಗೈಕ್ಯರಾಗಿ 40 ವರ್ಷಗಳಾದವು. ಆದರೆ ಸದಾ ಚೈತನ್ಯ ಸ್ವರೂಪರಾದ ಇವರು ಸಂಜೀವಿನಿಯಾಗಿದ್ದಾರೆ. ಅವರ ಸ್ಮರಣೆಯೇ ನಮಗೆ ದಿವ್ಯ ಚೇತನವಾಗಿದೆ. ನಮ್ಮ ಬಾಳಿನ ಉಜ್ವಲ ಭವಿಷ್ಯಕ್ಕೆ ಪ್ರೇರಕ. ಶ್ರೀ ಜಗದ್ಗುರುಗಳ ಕೃಪಾಶೀರ್ವಾದ ದಿವ್ಯ ಸಂದೇಶಗಳು ಭವಿಷ್ಯತ್ತಿಗೆ ದಾರೀದೀಪವಾಗಿವೆ ಎಂದು ಭಕ್ತಿಯಿಂದ ಸ್ಮರಿಸಿಕೊಳ್ಳುತ್ತೇವೆ.  

- ಚಂದ್ರು ಬಾಳಿಹಳ್ಳಿಮಠ 


ಸುದ್ದಿ ಓದಿ