ಲೇಖನಗಳು

ಪಕ್ಷಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ ಮಾಗಡಿ ಸಂರಕ್ಷಿತ ಪಕ್ಷಿಧಾಮ

ಪಕ್ಷಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ ಮಾಗಡಿ ಸಂರಕ್ಷಿತ ಪಕ್ಷಿಧಾಮ

ಚಳಿಗಾಲ ಪ್ರಾರಂಭ : ವಿದೇಶೀ ಅತಿಥಿಗಳ ಆಗಮನ : ಮೆರಗು ಹೆಚ್ಚುತ್ತಿರುವ ಮಾಗಡಿ ವಲಸೆ ಪಕ್ಷಿಗಳ ಪಕ್ಷಿಧಾಮ : ಸ್ವಚ್ಚಂದವಾದ ಕೆರೆಯ ನೀರಿನಲ್ಲಿ ತೇಲಾಡುತ್ತಿರುವ ವಿದೇಶೀ ಬಾನಾಡಿಗಳ ಕಲರವ : ಪ್ರವಾಸಿಗಳನ್ನು ಕೈಬೀಸಿ ಕರೆಯುತ್ತಿದೆ ನಮ್ಮ ಮಾಗಡಿ ಪಕ್ಷಿಧಾಮ 


ಗದಗ ಜಿಲ್ಲೆಯಲ್ಲಿಯೇ ಹೆಸರವಾಸಿಯಾದ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆ ಇದೀಗ ಎಲ್ಲಿಲ್ಲದ ಹೆಸರು ಮಾಡುತ್ತಿದೆ. ಏಕೆಂದರೆ ಪ್ರತೀ ವರ್ಷ ಇಲ್ಲಿಗೆ ತಮ್ಮ ಸಂತಾನೋತ್ಪತ್ತಿಗಾಗಿ ದೇಶ ವಿದೇಶಗಳಿಂದ ಅಪರೂಪದ ಅತಿಥಿಗಳಾಗಿ ನಾನಾ ರೀತಿಯ ಸಾವಿರಾರು ವಿದೇಶೀ ಪಕ್ಷಿಗಳು ಆಗಮಿಸುತ್ತವೆ.  

ಪ್ರತೀ ವರ್ಷ ನವೆಂಬರದಲ್ಲಿ ಪ್ರಾರಂಭವಾಗುವ ಚಳಿಗಾಲಕ್ಕೆ ಸರಿಯಾದ ಸಮಯಕ್ಕೆ ಮಾಗಡಿ ಕೆರೆಗೆ ಈ ವಿದೇಶೀ ಪಕ್ಷಿಗಳು ಆಗಮಿಸುತ್ತವೆ. ಈ ಚಳಿಗಾಲದ ಅತಿಥಿಗಳೆಲ್ಲ ಹಂಸಗಳ ಜಾತಿಗೆ ಸೇರಿದ್ದು, ಇವುಗಳಲ್ಲಿ ಲಾಂಗ ಹೆಡೆಡ್ ಗೂಸ್, ಬ್ರಾಹ್ಮಿಣಿ ಡಕ್, ಪೇಂಟೆಡ್ ಸ್ಪಾರ್ಕ, ಬಾರ ಹೆಡೆಡ್ ಗೂಸ್, ಬ್ಲ್ಯಾಕ ಬಿಸ್, ವೈಟ್ ಬಿಸ್, ಬ್ಲ್ಯಾಕ್ ನೆಕಡ್ ಸ್ಪಾರ್ಕ,  ವೈಟ್ ನೆಕಡ್ ಸ್ಪಾರ್ಕ, ಸ್ಕಾಪ್ ಡಕ್, ಗ್ರೇ ಡಕ್ ಕೂಟ್, ಲಿಟಿಲ್ ಕಾರ್ಮೋರೆಂಟ ಸ್ಪಾಟ್ ಬಿಲ್ ಹಲವಾರು 16 ಜಾತಿಯ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ.  

ಈ ಬಾರಿ ಕೇವಲ ಕೆಲವೇ ಜಾತಿಯ ಪಕ್ಷಿಗಳು ಮಾತ್ರ ಆಗಮಿಸಿದ್ದು ಇವುಗಳಲ್ಲಿ ಬಾರ ಹೆಡೆಡ್ ಗೂಸ್, ಬ್ರಾಹ್ಮಿಣಿ ಡಕ್ ಹೆಚ್ಚಿನ ಸಂಖ್ಯೆಗಳಲ್ಲಿ ಆಗಮಿಸಿವೆ. ಪ್ರತೀ ವರ್ಷ ಜಮ್ಮು ಕಾಶ್ಮೀರದ ಲಡಾಕ, ಲೇಹ್, ವಿದೇಶಗಳಾದ ಮಲೇಷಿಯಾ, ರಶಿಯಾ, ಆಸ್ಟ್ರೇಲಿಯಾ, ಟಿಬೇಟ್, ಸೈಬಿರಿಯಾಗಳಿಂದಾ ವಲಸೆ ಬರುತ್ತವೆ. ಲಡಾಕ, ಲೇಹ್, ಟಿಬೇಟ್‌ಗಳಲ್ಲಿ ವಿಪರೀತ ಚಳಿಗಾಲವಿರುವದರಿಂದ ನವೆಂಬರದಿಂದಾ ಮಾರ್ಚವರೆಗೆ ಅಲ್ಲಿನ ಸರೋವರಗಳು ಹೆಪ್ಪುಗಟ್ಟುವುದರಿಂದ ಅಲ್ಲಿನ ಪಕ್ಷಿಗಳು ತಮಗೆ ವಾಸಕ್ಕೆ ಹವಾಮಾನ ಸರಿ ಹೊಂದದೇ ಇರುವುದರಿಂದ ನವೆಂಬರದಿಂದ ಫೆಬ್ರುವರಿವರೆಗೆ ಈ ಮಾಗಡಿ ಕೆರೆಗೆ ಬಂದು ತಮ್ಮ ವಂಶೋದ್ದಾರ ಮಾಡಿಕೊಂಡು ಮರಳುತ್ತವೆ. 

ಈ ಅಪರೂಪದ ವಿದೇಶಿ ಅತಿಥಿಗಳು ಈ ಕೆರೆಗೆ ನವ್ಹಂಬರ ತಿಂಗಳಿನಲ್ಲಿ ಬಂದಿಳಿದು ಫೆಬ್ರುವರಿ ತಿಂಗಳಲ್ಲಿ ತಮ್ಮ ದೇಶಗಳಿಗೆ ಮರಳುತ್ತವೆ. ಒಟ್ಟು ನಾಲ್ಕು ತಿಂಗಳುಗಳ ಕಾಲ ಈ ಕೆರೆಯಲ್ಲಿ ಬೀಡು ಬಿಡುವ ಈ ಪಕ್ಷಿಗಳು ಮುಂಜಾವಿನಲ್ಲಿ ನೆರೆಯ ಹಾವೇರಿ, ಧಾರವಾಡ, ಬಳ್ಳಾರಿ ಹಾಗೂ ಗದಗ ಜಿಲ್ಲೆಗಳ ಅನೇಕ ದೂರದ ಹೊಲಗಳಿಗೆ ಆಹಾರ ಅರಸಿ ಹೋಗುತ್ತವೆ.  

ಇವುಗಳು ಮುಖ್ಯ ಆಹಾರ, ಭತ್ತ, ಕಡಲೆ ಮತ್ತು ಶೇಂಗಾ. ಬೆಳ್ಳಂಬೆಳಿಗ್ಗೆನೇ ಆಹಾರ ಅರಸಿ ಹೋಗಿ ಮತ್ತೇ 3 ಘಂಟೆಗಳಲ್ಲೇ ಕೆರೆಗೆ ವಾಪಸ್ಸಾಗುತ್ತವೆ. ಸಾಯಂಕಾಲದವೆರೆಗೆ ನೀರಲ್ಲಿ ವಿಶ್ರಮಿಸಿ ಸೂರ್ಯಾಸ್ತದ ಸಮಯದಲ್ಲಿ ಮತ್ತೇ ಹಾರಿ ಹೋಗಿ ಹೊಟ್ಟೆ ತುಂಬಿಸಿಕೊಂಡು ಬರುತ್ತವೆ. ಇದು ದಿನನಿತ್ಯದ ವಲಸೆ ಪಕ್ಷಿಗಳ ಆಹಾರ ಹಾಗೂ ವಲಸೆ ದಿನಚರಿ. 

ಕೆರೆಯ ಒಟ್ಟು 134 ಎಕರೆ ವಿಸ್ತೀರ್ಣತೆಯನ್ನು ಹೊಂದಿರುತ್ತದೆ. ಈ ವರ್ಷವೀಡೀ ಆದ ಮಳೆಯಿಂದ ಕೆರೆಯು ಸಂಪೂರ್ಣ ತುಂಬಿಕೊಂಡು ನೋಡುಗರಿಗೆ ಎರಡು ಕಣ್ಣು ಸಾಲದು ಅನ್ನು ಹಾಗೆ ಅನ್ನಿಸುತ್ತದೆ.  

ಕೆರೆಯ ಸುತ್ತಲೂ ಇಂಟರಾ​‍್ಲಕ್ ಸಿಸ್ಟಮ ಇಟ್ಟಿಗೆಗಳನ್ನು ಜೋಡಿಸಿ, ಅಲ್ಲಲ್ಲಿ ಪಕ್ಷಿ ಪ್ರಿಯರಿಗೆ ಕುಳಿತುಕೊಂಡು ನೋಡಲು ಸಿಮೆಂಟ್ ಮಂಚಗಳ ವ್ಯವಸ್ಥೆ, ದನಕರುಗಳ ಹಾಗೂ ಪುಂಡಪೋಕರಿಗಳ ಹಾವಳಿ ತಪ್ಪಿಸಲು ತಂತಿ ಬೇಲಿಯ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.  

ದೂರದಿಂದ ನೋಡಲು ಟವರ್ ವ್ಯವಸ್ಥೆ, ಬೈನಾಕ್ಯೂಲರ್ ವ್ಯವಸ್ಥೆ, ಕೆರೆಯನ್ನು ಸ್ವಚ್ಚವಾಗಿರಿಸಿಕೊಳ್ಳಲು ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಚತೆಗೆ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದ್ದು ನೋಡಿದರೆ ಈ ಪಕ್ಷಿಧಾಮ ನಿಜವಾಗಲೂ ನಮ್ಮ ಉತ್ತರ ಕರ್ನಾಟಕದ ಒಂದು ಹೆಮ್ಮೆಯ ಪಕ್ಷಿಧಾಮವೆಂದರೆ ಸಾಲದು.  

ಒಟ್ಟಾರೆ ಇಲ್ಲಿಗೆ ಬೆಂಗಳೂರು, ಮೈಸೂರು, ಬಾಗಲಕೋಟೆ ಹಾಗೂ ರಾಜ್ಯದ ಹಲವಾರು ದೂರದ ಜಿಲ್ಲೆಗಳಿಂದ ಪಕ್ಷಿಪ್ರಿಯರು ನಮ್ಮ ಕೆರೆಗೆ ಬರುತ್ತಿರುವುದು ನಮ್ಮ ತಾಲೂಕಿನ ಪುಣ್ಯವಾಗಿದೆ.   

ನೋವಿನ ಸಂಗತಿ: ಈ ಮಾಗಡಿ ಪಕ್ಷಿಧಾಮವನ್ನು ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದಾಗ ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ ಶ್ರಮವಹಿಸಿ ನನ್ನ ಮತ ಕ್ಷೇತ್ರದಲ್ಲಿರುವ ಮಾಗಡಿಕೆರೆ ರಾಜ್ಯಮಟ್ಟ ರಾಷ್ಟ್ರ ಮಟ್ಟದಲ್ಲಿ ವಲಸೆ ಪಕ್ಷಿಗಳ ಧಾಮವೆಂದು ಘೋಷಿಸುವಲ್ಲಿ ಹಾಗೂ ಸರ್ಕಾರವು ಸಂರಕ್ಷಿತ ಪಕ್ಷಿಧಾಮವೆಂದು ಘೋಷಣೆ ಮಾಡುವಲ್ಲಿ ಶ್ರಮಿಸಿದ್ದಲ್ಲದೆ ಈಕಿರೆ ಸಂರಕ್ಷಿತ ಕೆರೆಯೆಂದು ಘೋಷಣೆ ಮಾಡಿಸಿ ನೂರಾರು ಲಕ್ಷ ರೂಪಾಯಿಗಳ ಖರ್ಚು ಮಾಡಿಸಿ ಕೆರೆಯ ಸುತ್ತಲೂ ಕೆರೆಯ ಸಂರಕ್ಷಣೆಗಾಗಿ ತಂತಿ ಬೇಲಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು,  

ಕಳ್ಳ ಪುಡಾರಿಗಳು ಆ ಸಂರಕ್ಷಣಾ ತಂತಿಯನ್ನು ದೋಚಿಕೊಂಡು ಹೋಗಿದ್ದಾರೆ. ಕೆರೆಯ ಸುತ್ತಲೂ ಇಂರಾ​‍್ಲಕ್ ಸಿಸ್ಟಮ ಇಟ್ಟಿಗೆಗಳನ್ನು ಜೋಡಿಸಿ ಪಾದಚಾರಿಗಳಿಗೆ ಸುಗಮವಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ, ಆದರೆ ಆ ರಸ್ತೆಯಲ್ಲಿ ಉಡಾಳ ಪುಂಡಪೋಕರಿಗಳು ಕೆರೆಯ ಪಕ್ಕಕ್ಕೆ ಡಬಲ್ ರಸ್ತೆಯಿದ್ದರೂ ಕೂಡ ಶಿರಹಟ್ಟಿ ಕಡೆಗೆ ತಂತಿ ಬೇಲಿಯನ್ನು ಮುರಿದು, ತಮ್ಮ ಬೈಕ್‌ಗಳನ್ನು ಕೆರೆಯ ದಂಡೆಯ ಮೇಲೆಯೇ ಸಂಚಾರ ಮಾಡಿ ಕೆರೆಯಲ್ಲಿ ತಮ್ಮ ಬಟ್ಟೆಗಳನ್ನು ಸ್ವಚ್ಚಗೊಳಿಸಲು ಬಂದಂತಹ ಮಹಿಳೆಯರಿಗೆ ತೊಂದರೆ ನೀಡುತ್ತಾರೆ ಎನ್ನುವುದು ಸ್ಥಳೀಯರ ಆಪಾದನೆಯಾಗಿದೆ.  

ಕೆರೆಯ ಬೇಲಿಗೆ ಅಂಟಿಕೊಂಡು ರಸ್ತೆಯ ಸುತ್ತಲೂ ಬೆಳೆದ ಜಾಲಿ ಕಂಟಿಗಳು ವಾಹನ ಸವಾರರಿಗೆ ಅಫಘಾತಗಳನ್ನು ಒದಗಿಸಲು ಆವ್ಹಾನ ನೀಡುತ್ತಿದ್ದನ್ನು ಗಮನಿಸಿದ ಪಕ್ಷಿ ಪ್ರೇಯರು ಹಾಗೂ ಗ್ರಾಮ ಪಂಚಾಯಿತಿಯವರು ಅಲ್ಲಲ್ಲಿ ಅಲ್ಪ ಸ್ವಲ್ಪ ಸ್ವಚ್ಛತೆಗೆ ಮುಂದಾಗಿರುವುದು ಶ್ಲಾಗನೀಯ. ಆದರೂ ಕೂಡ ದೂರದಿಂದ ಬರುವ ಪಕ್ಷಿಪ್ರಿಯರಿಗೆ ಸ್ವಚ್ಛತೆ ಮರಿಚಿಕೆಯಾಗಿದೆ ಇಲ್ಲಿ ಹಾಳಾದ ವ್ಯವಸ್ಥೆಯನ್ನು ನೋಡಿ ಹಿಡಿ ಶಾಪ ಹಾಕುವಂತಾಗಿದೆ. ನೂರಾರು ಲಕ್ಷ ರೂಪಾಯಿಗಳ ಸರ್ಕಾರದ ಅನುದಾನ ಬಳಿಕೆಯಾದರೂ ಕೂಡ ಈ ಕೆರೆಯಲ್ಲಿ ಸ್ವಚ್ಛತೆಗೆ ಕಿಮ್ಮತ್ತಿಲ್ಲ, ಪಕ್ಷಪ್ರಿಯರಿಗೆ ನೋಡಲು ಬಂದಾಗ ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆ ಇಲ್ಲ,  

ಈಗಲಾದರೂ ಕೆರೆಯ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿ ಕೆರೆಯ ಅಂದವನ್ನು ಹೆಚ್ಚಿಸಿ ಹೆಚ್ಚಿನ ಪ್ರವಾಸಿಗರನ್ನು ಇತ್ತ ಬರುವಂತೆ ಮಾಡುವಲ್ಲಿ ಸ್ಥಳೀಯ ಮಾಗಡಿ ಗ್ರಾಮ ಪಂಚಾಯಿತಿಯವರು ಕ್ರಮ ವಹಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. 

- ಶಶಿಧರ ಶಿರಸಂಗಿ 

- * * * - 



ಸುದ್ದಿ ಓದಿ