ಸಮ ಸಮಾಜದ ನಿರ್ಮಾಣಕ್ಕಾಗಿ ಮಡಿವಾಳ ಮಾಚಿದೇವ
ಬಳ್ಳಾರಿ 01: ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಮಡಿವಾಳ ಮಾಚಿದೇವರ ಜಯಂತಿಯನ್ನು ಸೋಮವಾರ ಸರಳವಾಗಿ ಆಚರಿಸಲಾಯಿತು.
ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಕನ್ನಡ ಮತ್ತು ಸಂಸ್ಕ್ರೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣನವರ್ ಅವರು 12ನೇ ಶತಮಾನದಲ್ಲಿ ಸಮಾನತೆಯ ಕ್ರಾಂತಿಗೆ, ಸಮ ಸಮಾಜದ ನಿರ್ಮಾಣಕ್ಕಾಗಿ ದುಡಿದವರಲ್ಲಿ ಮಡಿವಾಳ ಮಾಚಿದೇವ ಶರಣರು ಕೂಡ ಒಬ್ಬರು. ಮೇಲು-ಕೀಳು ಎನ್ನುವುದನ್ನು ಜನರಲ್ಲಿ ಕಿತ್ತು ಹಾಕುವ ಕಾರ್ಯವನ್ನು ಮಡಿವಾಳ ಮಾಚಿದೇವರು ಮಾಡಿದ್ದಾರೆ. ಅವರ ಕಾಯಕ , ಅವರ ವಚನಗಳು ಇತರರಿಗೆ ಮಾದರಿ, ಇಂದಿನ ಯುವ ಜನತೆ ಶರಣರ ಬದುಕಿನ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರು.
ಜಯಂತಿಯಲ್ಲಿ ಸಮುದಾಯದ ಮುಖಂಡರಾದ ಧನಂಜಯ, ಹೊನ್ನೂರಪ್ಪ, ಸಮುದಾಯದ ಇತರರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.