ಬಳ್ಳಾರಿ

ಶಾಸಕ ಪರಮೇಶ್ವರನಾಯ್ಕ ಪುತ್ರನ ಬಂಧನಕ್ಕೆ ಆಗ್ರಹ

ಶಾಸಕ ಪರಮೇಶ್ವರನಾಯ್ಕ ಪುತ್ರನ ಬಂಧನಕ್ಕೆ ಆಗ್ರಹ

ಲೋಕದರ್ಶನ ವರದಿ 

ಹೂವಿನಹಡಗಲಿ 22: ಹರಪನಹಳ್ಳಿ ಆರ್‌ಟಿಐ ಕಾರ‌್ಯಕರ್ತ ಶ್ರೀಧರ ಕೊಲೆ ಪ್ರಕರಣದಲ್ಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಅವರ ಪುತ್ರ ಪಿ.ಟಿ.ಭರತ್ ಆರೋಪಿಯಾಗಿದ್ದು ಕೂಡಲೇ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಬೇಕೆಂದು ಮಾಜಿ ಶಾಸಕ ಬಿ. ಚಂದ್ರನಾಯ್ಕ ಆಗ್ರಹಿಸಿದ್ದಾರೆ. 

ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕರು ಆರೋಪಿಗಳ ರಕ್ಷಣೆಯಲ್ಲಿ ತೊಡಗಿರುವುದರಿಂದ ವಿಧಾನಸಭಾಧ್ಯಕ್ಷರು ಕೂಡಲೇ ಪಿಟಿಪಿ ಶಾಸಕತ್ವವನ್ನು ಅಮಾನತನಲ್ಲಿ ಇರಿಸಬೇಕು ಎಂದು ಒತ್ತಾಯಿಸಿದರು. ಶ್ರೀಧರ ಅವರು ತಂದೆ ಮಕ್ಕಳ ಕಾನೂನು ಬಾಹಿರ ಮತ್ತು ಅನೈತಿಕ ಚಟುವಟಿಕೆಗಳು, ಅವ್ಯವಹಾರಗಳನ್ನು ಬಯಲಿಗೆಳೆಯಲು ಯತ್ನಿಸಿದ್ದರು. ತಮ್ಮ ಬಂಡವಾಳ ಬಹಿರಂಗವಾಗುವ ಭೀತಿಯಲ್ಲಿ ತಮ್ಮ ಬೆಂಬಲಿಗರನ್ನು ಬಿಟ್ಟು ತನ್ನ ಗಂಡನನ್ನು ಹತ್ಯೆ ಮಾಡಿಸಿರುವುದಾಗಿ ಪತ್ನಿ ಶಿಲ್ಪ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಭರತ್‌ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. 

ಈ ಪ್ರಕರಣದಲ್ಲಿ ಪರೋಕ್ಷವಾಗಿ ಶಾಮೀಲಾಗಿರುವ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಪ್ರಭಾವಿಗಳಾಗಿದ್ದು, ಸಾಕ್ಷಾಧಾರಗಳನ್ನು ನಾಶಪಡಿಸುವ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುವ ಶಂಕೆಯಿದೆ. ನಿಸ್ಪಕ್ಷವಾಗಿ ತನಿಖೆ ನಡೆಸುವ ಉದ್ದೇಶದಿಂದ ಶಾಸಕ ಸ್ಥಾನದಿಂದ ಕೂಡಲೇ ಅಮಾನತುಗೊಳಿಸಬೇಕು. ಗಡಿಯಾಚಗಿನ ಕಾರಾಗೃಹದಲ್ಲಿರಿಸಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡುವುದಾಗಿ ಅವರು ತಿಳಿಸಿದ ಅವರು ದುರಹಂಕಾರಿ ದೌರ್ಜನ್ಯದ ರಾಜಕಾರಣಿ ಶಾಸಕರಾಗಿ ವಿಜಯನಗರ ಜಿಲ್ಲೆಗೆ ಕಳಂಕ ತಂದಿದ್ದಾರೆ.ಈಗಾಗಲೇ ಜಿಲ್ಲೆಯಲ್ಲಿ ಮಾಜಿ ಡಿವೈಎಸ್‌ಪಿ ಅನುಪಮ ಪ್ರಕರಣ,ಸಹೋದರರೊಂದಿಗೆ ಬಡಿದಾಟ ಸೇರಿದಂತೆ ಸ್ವಗ್ರಾಮಗಳಲ್ಲಿ ಸಾಕಷ್ಟು ದೌರ್ಜನ್ಯ ನಡೆಸಿರುವುದು ಸಾಮಾನ್ಯವಾಗಿದೆ. ಆದ್ದರಿಂದ ಕೂಡಲೇ ಇಬ್ಬರ ವಿರುದ್ದ ಪ್ರಕರಣ ದಾಖಲಿಸಬೇಕು, ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.  

ಮಂಡಲ ಬಿಜೆಪಿ ಅಧ್ಯಕ್ಷ ಸಂಜೀವರೆಡ್ಡಿ, ತಾ.ಪಂ.ಸದಸ್ಯ ಈ.ಟಿ.ಲಿಂಗರಾಜ, ಮುಖಂಡರಾದ ಸುರೇಶ ಶಿವಪುರ, ಪೂಜಾರ ಮಲ್ಲಿಕಾರ್ಜುನ, ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ನವಲಿ ಶಂಕರ ಇದ್ದರು. 

ಸುದ್ದಿ ಓದಿ