ಸರ್ಕಾರಿ ನೌಕರರು ಜೀನ್ಸ್, ಟೀ ಶರ್ಟ್, ಚಪ್ಪಲಿ ಧರಿಸುವಂತಿಲ್ಲ; ಮಹಾರಾಷ್ಟ್ರ ಸರ್ಕಾರ ಆದೇಶ
ಮುಂಬೈ, ಡಿ. 12 : ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಎಲ್ಲ ಉದ್ಯೋಗಿಗಳಿಗೆ ವಸ್ತ್ರಸಂಹಿತೆ ಜಾರಿ ಮಾಡಲಾಗಿದ್ದು, ಸರ್ಕಾರಿ ನೌಕರರಿಗೆ ಜೀನ್ಸ್, ಟೀ ಶರ್ಟ್ ಮತ್ತು ಚಪ್ಪಲಿಗಳನ್ನು ನಿಷೇಧಿಸಲಾಗಿದೆ. ವಾರಕ್ಕೊಮ್ಮೆ ಖಾದಿ ಧರಿಸಲು ಸಿಬ್ಬಂದಿಗೆ ಸಲಹೆ ನೀಡಲಾಗಿದೆ.ಅನೇಕ ಉದ್ಯೋಗಿಗಳು, ವಿಶೇಷವಾಗಿ ಗುತ್ತಿಗೆ ನೌಕರರು ಮತ್ತು ಸರ್ಕಾರದಿಂದ ನೇಮಕಗೊಂಡ ಸಲಹೆಗಾರರು ಸರ್ಕಾರಿ ನೌಕರನಿಗೆ ಸೂಕ್ತವಲ್ಲವೆಂದು ಪರಿಗಣಿಸುವ ರೀತಿಯಲ್ಲಿ ವಸ್ತ್ರ ಧರಿಸುತ್ತಿದ್ದಾರೆ. ಇದರಿಂದ ಸರ್ಕಾರಿ ನೌಕರರ ಬಗ್ಗೆ ಜನರ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಉಂಟಾಗುತ್ತಿದೆ ಎಂದು ಸಾಮಾನ್ಯ ಆಡಳಿತ ಇಲಾಖೆ ಡಿಸೆಂಬರ್ 8 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ನೌಕರರಿಗೆ ವಸ್ತ್ರಸಂಹಿತೆ ರೂಪಿಸಲಾಗಿದೆ. ಮಹಿಳೆಯರು ಸೀರೆ, ಸಲ್ವಾರ್, ಚೂಡಿದಾರ್-ಕುರ್ತಾ, ಕುರ್ತಾ ಅಥವಾ ಶರ್ಟ್ ಹೊಂದಿರುವ ಪ್ಯಾಂಟ್ ಮತ್ತು ಅಗತ್ಯವಿದ್ದರೆ ದುಪಟ್ಟಾ ಧರಿಸಬೇಕು; ಪುರುಷರು ಪ್ಯಾಂಟ್ ಮತ್ತು ಶರ್ಟ್ ಧರಿಸಬೇಕು ಎಂದು ಸೂಚಿಸಲಾಗಿದೆ.ತೀವ್ರವಾದ ಬಣ್ಣಗಳು ಮತ್ತು ವಿಚಿತ್ರವಾದ ಕಸೂತಿ ಮಾದರಿಗಳು ಅಥವಾ ಚಿತ್ರಗಳನ್ನು ಹೊಂದಿರುವ ಬಟ್ಟೆಗಳನ್ನು ನೌಕರರು ಧರಿಸುವಂತಿಲ್ಲ. ಪುರುಷರು ಕಚೇರಿಗಳಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಧರಿಸಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
“ಅಲ್ಲದೆ, ಮಹಿಳಾ ಉದ್ಯೋಗಿಗಳು ಚಪ್ಪಲಿ, ಸ್ಯಾಂಡಲ್ ಅಥವಾ ಬೂಟುಗಳನ್ನು ಧರಿಸಬಹುದು. ಪುರುಷರು ಶೂ ಅಥವಾ ಸ್ಯಾಂಡಲ್ ಧರಿಸಬೇಕು. ಸ್ಲಿಪ್ಪರ್ಸ್ ಅಥವಾ ಚಪ್ಪಲಿಗಳನ್ನು ಕಚೇರಿಯಲ್ಲಿ ಧರಿಸಬಾರದು ಎಂದು ಆದೇಶದಲ್ಲಿ ಸೇರಿಸಲಾಗಿದೆ. ಖಾದಿಯನ್ನು ಉತ್ತೇಜಿಸುವ ಉದ್ದೇಶದಿಂದ, ನೌಕರರು ಶುಕ್ರವಾರ ಖಾದಿ ಧರಿಸುವ ಅವಶ್ಯಕತೆಯಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಧಿಕಾರಿಗಳು ಮತ್ತು ನೌಕರರ ಉಡುಪು ಸೂಕ್ತವಲ್ಲ ಮತ್ತು ಅಶುದ್ಧವಾಗಿದ್ದರೆ, ಅದು ಅವರ ಕೆಲಸದ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.