ರಂಗಭೂಮಿ ವ್ಯಕ್ತಿತ್ವ ವಿಕಾಸಗೊಳಿಸಲು ಸಹಕಾರಿ
ರಾಜಶೇಖರ ಕದಂಬ ಅಭಿಪ್ರಾಯ | ಕರ್ನಾಟಕ ಸಂಘದಲ್ಲಿ ಸಾಹಿತ್ಯ-ರಂಗ ಸಂಭ್ರಮ
ರಾಣೀಬೆನ್ನೂರು 13: ರಂಗಭೂಮಿ ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಾಸಗೊಳಿಸುತ್ತದೆ. ಜೀವನದಲ್ಲಿ ಬರುವ ಏರಿಳಿತಗಳನ್ನು ಅಳವಡಿಸಿಕೊಂಡು ನೈಜ ಬದುಕನ್ನು ಸಾಗಿಸಲು ರಂಗಭೂಮಿ ಅತ್ಯಂತ ಸಹಕಾರಿಯಾಗಿದೆ ಎಂದು ಮೈಸೂರು ಕದಂಬ ರಂಗವೇದಿಕೆಯ ಅಧ್ಯಕ್ಷ, ಚಲನಚಿತ್ರ ನಟ ರಾಜಶೇಖರ ಕದಂಬ ಹೇಳಿದರು.
ಕರ್ನಾಟಕ ಸಂಘದ ಆಲೂರು ವೆಂಕಟರಾವ್ ರಂಗ ಸಜ್ಜಿಕೆಯಲ್ಲಿ ರಂಗ ಕುಸುಮ ಪ್ರಕಾಶನ, ಕರ್ನಾಟಕ ಸಂಘ ಆಯೋಜಿಸಿದ್ದ ಸಾಹಿತ್ಯ ಸಂಗಮ-ರಂಗ ಸಂಭ್ರಮ ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಕಲೆ ಸಾಹಿತ್ಯ ಸಂಗೀತ ವಿಶೇಷವಾಗಿ ನಾಟಕ ಕಲೆಗಳಿಗೆ ವೇದ ಇತಿಹಾಸ ಕಾಲಗಳಿಂದಲೂ ಭವ್ಯ ಇತಿಹಾಸ ಪರಂಪರೆ ಇದೆ ಎಂದು ಇತಿಹಾಸವನ್ನು ಸ್ಮರಿಸಿ ಮಾತನಾಡಿದ ಅವರು ಆಧುನಿಕ ಸಂಸ್ಕೃತಿಯಲ್ಲಿ ಸಾಂಸ್ಕೃತಿಕವಾಗಿ ಎಷ್ಟೆ ಪ್ರಭಾವ ಬಂದರೂ ಸಹ ನೈಜತೆಯನ್ನು ಬಿಂಬಿಸುವ ನಾಟಕ ಕಲೆಗಳಿಗೆ ಎಂದಿಗೂ ಸಾವಿಲ್ಲ. ಅದು ನಿರಂತರ ಜೀವಂತವಾಗಿರಲು ಪೂರಕ ವಾತಾವರಣ ಕಲ್ಪಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೈಸೂರು ಜಯಕವಿ ಡಾ.ಜಯಪ್ಪ ಹೊನ್ನಾಳಿ ಅವರು ಸಮಾಜದಲ್ಲಿ ಸಮಾನತೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಹ ಸಂಘ ಸಂಸ್ಥೆಗಳ ಅವಶ್ಯಕತೆ ಈ ಹಿಂದಿಗಿಂತಲೂ ಇಂದು ಬಹಳಷ್ಟು ಹೊರ ಬರಬೇಕಾಗಿದೆ ಎಂದರು. ವೇದಿಕೆಯಲ್ಲಿ ವಿವಿಧ ಕ್ಷೇತ್ರದ ಗಣ್ಯರಾದ ಮಾರುತಿ ಶಿಡ್ಲಾಪುರ, ಜೀವರಾಜ ಛತ್ರದ, ಎ.ಬಿ.ರತ್ನಮ್ಮ, ಸಂಜೀವ ಶಿರಹಟ್ಟಿ, ಪ್ರಭಾಕರ ಶಿಗ್ಲಿ, ಶಿವಾನಂದ ಸೊಂಡೂರು, ಚಂದ್ರಪ್ಪ ಬಾರಂಗಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸಾಧಕ ಗಣ್ಯರಾದ ಉಮಾದೇವಿ ಐರಣಿ, ಕೆ.ಸಿ.ಕೋಮಲಾಚಾರ್, ಆರ್.ಕೆ.ಹುಬ್ಬಳ್ಳಿ, ಪ್ರಭಾಕರ ನಿ. ಶಿಗ್ಲಿ, ಕೃಷ್ಣಮೂರ್ತಿ ಮುಳಬಾಗಿಲ, ಪ್ರಕಾಶ ಜಿ. ಬಡಿಗೇರ, ಶಾಂತಿವಾಸು ಬೆಂಗಳೂರು, ಪರಮೇಶಪ್ಪ ಹುಲ್ಮನಿ, ಪುರುಷೋತ್ತಮ ತಲವಾಟ ಸೇರಿದಂತೆ 25ಕ್ಕೂ ಸಾಧಕರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ಕವಿಗೋಷ್ಠಿ ನಡೆದು ನಾಡಿನ 60ಕ್ಕೂ ಹೆಚ್ಚು ಹಿರಿಯ ಮತ್ತು ಕಿರಿಯ ಕವಿಗಳು ಪಾಲ್ಗೊಂಡಿದ್ದರು. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಅಭಿನಯ ಕಲಾತಂಡ ಮತ್ತು ಸಂಗಡಿಗರು ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಸೇರಿದ ಸಾವಿರಾರು ನಾಗರಿಕರ ಗಮನ ಸೆಳೆಯಿತು. ಶ್ವೇತಾ ಹರಪನಹಳ್ಳಿ ಸಂಗಡಿಗರು ಪ್ರಾರ್ಥಿಸಿ, ದ್ರಾಕ್ಷಾಯಿಣಿ ಉದಗಟ್ಟಿ ಸ್ವಾಗತಿಸಿ, ಪ್ರಕಾಶನ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಈಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ ಕುಮಾರ ಹನಕೇರಿ ನಿರೂಪಿಸಿ ಆನಂದ ಹಕ್ಕೆನವರ ವಂದಿಸಿದರು.