ಧರ್ಮವಿಲ್ಲದ ಬದುಕು ಪಶುಗೆ ಸಮಾನ: ಶ್ರೀಶೈಲ ಜಗದ್ಗುರುಗಳು
ತಾಳಿಕೋಟಿ: ಸಕಲ ಜೀವರಾಶಿಯಲ್ಲಿ ಮಾನವ ಜನ್ಮ ಶ್ರೇಷ್ಠವಾದದ್ದು. ಮನುಷ್ಯ ಹಾಗೂ ಪ್ರಾಣಿಗಳಲ್ಲಿ ವ್ಯತ್ಯಾಸವಿದೆ. ಮನುಷ್ಯನಿಗೆ ವಿವೇಚನಾ ಶಕ್ತಿ ಇದೆ. ಇದರಿಂದ ಅವನು ಧರ್ಮವನ್ನು ಅಳವಡಿಸಿಕೊಂಡು ಬಾಳಲು ಸಾಧ್ಯವಿದೆ. ಧರ್ಮವಿಲ್ಲದ ಮನುಷ್ಯ ಪಶುಗೆ ಸಮಾನನಾಗಿದ್ದಾನೆ. ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಬ. ಸಾಲವಾಡಗಿ ಗ್ರಾಮದಲ್ಲಿ ಧರ್ಮ ಜಾಗೃತಿ ಪ್ರಯುಕ್ತ ನಡೆಯುತ್ತಿರುವ ಪಾದಯಾತ್ರೆಯ ಅಂಗವಾಗಿ ಹಮ್ಮಿಕೊಂಡ “ಧರ್ಮಸಭೆ”ಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಧರ್ಮ ಅಂದರೆ ಪರೋಪಕಾರ ಹಾಗೂ ಮಾನವೀಯ ಮೌಲ್ಯಗಳಾಗಿವೆ. ವೀರಶೈವ ಧರ್ಮ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಧರ್ಮವಾಗಿದೆ. ನೀವೆಲ್ಲರೂ ಧರ್ಮವಂತರಾಗಬೇಕೆಂಬ ಉದ್ದೇಶಕ್ಕಾಗಿಯೇ ನಾವು ಈ ಪಾದಯಾತ್ರೆ ನಡೆಸುತ್ತಿದ್ದೇವೆ. ಇದರ ಜೊತೆಗೆ ವ್ಯಸನಮುಕ್ತ ಸಮಾಜ ಹಾಗೂ ಪರಿಸರದ ಕುರಿತು ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದರು.
ಈ ಸಮಯದಲ್ಲಿ ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ನಾವದಗಿ ಬ್ರಹನ್ಮಠದ ರಾಜೇಂದ್ರ ಒಡೆಯರ ಶ್ರೀಗಳು, ಕರಭಂಟನಾಳದ ಶ್ರೀ ಶಿವಕುಮಾರ ಸ್ವಾಮಿಗಳು, ಕೊಡೇಕಲ್ದ ಪೂಜ್ಯರು, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎ.ಎಸ್. ಪಾಟೀಲ (ನಡಹಳ್ಳಿ), ಸುರೇಶಗೌಡ ಪಾಟೀಲ (ಸಾಸನೂರ), ಸಂತೋಷಗೌಡ ದೊಡಮನಿ, ರಾಜುಗೌಡ ಪಾಟೀಲ (ಕೋಳೂರ), ಮಲ್ಲನಗೌಡ ಪೊಲೀಸಪಾಟೀಲ, ಸುರೇಶ ಬಾಬುಗೌಡ ಬಿರಾದಾರ, ರಾಜುಗೌಡ ಗುಂಡಕನಾಳ, ಗುರುಗೌಡ ಗುರಡ್ಡಿ, ಸಾಹೇಬಗೌಡ ರಾರಡ್ಡಿ, ಸಂಗನಗೌಡ ಹೆಗರಡ್ಡಿ, ಮುತ್ತುಗೌಡ ಮಾಳಿ ಸೇರಿದಂತೆ ಇತರರಿದ್ದರು.