ಗ್ರಂಥಾಲಯ ಎಂದರೆ ರಾಷ್ಟ್ರೀಯ ಸಂಪತ್ತು: ಡಾ. ಶೈಲಜ ಹಿರೇಮಠ
ಲೋಕದರ್ಶನ ವರದಿ
ಬಳ್ಳಾರಿ 30: ಡಾ. ಬಿ.ಆರ್. ಅಂಬೇಡ್ಕರ್ ರಂತಹ ಮಹಾ ರಾಷ್ಟ್ರೀಯ ನಾಯಕರು ರೂಪಗೊಂಡಿದ್ದು ಗ್ರಂಥಾಲಯದ ಮೂಲಕ, ಇದರ ಪರಿಕಲ್ಪನೆ ಹಿನ್ನೆಲೆಯಲ್ಲಿ ಗ್ರಾಮಕ್ಕೊಂದು ಗ್ರಂಥಾಲಯದ ಯೋಜನೆಯ ಮೂಲಕ ಜನಸಾಮಾನ್ಯರಿಗೆ ಜ್ಞಾನವನ್ನು ನೀಡುತ್ತದೆ. ಇಂತಹ ಅನುಕೂಲಗಳನ್ನು ವಿದ್ಯಾರ್ಥಿಗಳು ಹೆಚ್ಚು ಉಪಯೋಗಿಸಿಕೊಳ್ಳಬೇಕೆಂದು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಡಾ. ಶೈಲಜ ಎಂ ಹೀರೆಮಠ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯದ ಮೂಲಕ ಆಯೋಜಿಸಿದ ಗ್ರಂಥಾಲಯ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದ ಸಮಾರೋಪ ನುಡಿಗಳನ್ನಾಡಿದವರು ಇನ್ನು ನಮ್ಮ ರಾಷ್ಟ್ರೀಯ ಚಳುವಳಿಗಳು ಹುಟ್ಟಿಕೊಂಡಿರುವುದು ಅಕ್ಷರದಿಂದ, ಇಂತಹ ಅಕ್ಷರದ ಜ್ಞಾನದಿಂದ ನಮ್ಮಲ್ಲಿರುವ ಸಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡಲು ಸಾಧ್ಯ. ಇಂತಹ ಅಕ್ಷರವನ್ನು ನಮ್ಮ ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಅಕ್ಷರ ಎಂದು ಕರೆಯಲಾಗುತ್ತದೆ. ಪ್ರಮುಖವಾಗಿ ವಿದ್ಯಾರ್ಥಿಗಳು ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳಬೇಕೆಂದು ತಿಳಿಸಿದರು. ವಿಶ್ವವಿದ್ಯಾಲಯದ ಶೈಕ್ಷಣಿಕ ದಿನಗಳ ಆರಂಭದಲ್ಲಿ ಹಾಗೂ ಕೋರ್ಸ್ ವರ್ಕ್ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಬಳಕೆಯ ಕುರಿತು ಇಂತಹ ಉಪಯುಕ್ತ ಕೌಶಲ್ಯ ತರಬೇತಿ ಶಿಬಿರಗಳನ್ನು ಆಯೋಜನೆ ಮಾಡಿದ್ದಾರೆ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಗ್ರಂಥಾಲಯದ ನೌಕರರಾದ ಶ್ರೀ ಎಂ ಅಬ್ದುಲ್ ನಬಿ ಅವರಿಗೆ ಬೀಳ್ಕೊಡುಗೆ ನೀಡಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಕ್ಷರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕರಾದ ಡಾ.ಕೆ.ಎಂ.ಮೇತ್ರಿ ಅವರು ಮಾತನಾಡಿ ಸಾಂಪ್ರದಾಯಿಕ ಗ್ರಂಥಾಲಯಗಳು ಆಧುನಿಕ ಸ್ಪರ್ಶ ಕಾಣುತ್ತಿದ್ದು, ಪ್ರಸ್ತುತ ದಿನಗಳಲ್ಲಿ ಗ್ರಂಥಾಲಯ ಡಿಜಿಟಲ್ ರೂಪ ಪಡೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಆಧುನಿಕ ಜಗತ್ತಿಗೆ ಬದಲಾಗಬೇಕು. ನಂತರ ನಾವು ಬಳಸುವ ಮೊಬೈಲ್ ಫೋನ್ಗಳನ್ನು ಡಿಜಿಟಲ್ ಗ್ರಂಥಾಲಯ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸಮಾರೋಪ ಸಮಾರಂಭದಲ್ಲಿ ಉಪಗ್ರಂಥಪಾಲಕರಾದ ಡಾ.ಎಂ.ಸಿ.ಗುಡಿಮನಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಹಾಯಕ ಗ್ರಂಥಪಾಲಕರಾದ ಸುಹಾಸ, ಡಾ.ಯು. ಮಲ್ಲಿಕಾರ್ಜುನ, ಕುಮಾರಿ ಮೇಘಾ, ಪದ್ಮಾವತಿ. ಕೆ, ಲೋಕೇಶ ಎಸ್.ಕೆ, ಗ್ರಂಥಾಲಯದ ಅಧಿಕ್ಷಿತರಾದ, ಗ್ಯಾನಪ್ಪ ಬಡಿಗೇರ್, ಅಕ್ಷರ ಗ್ರಂಥಾಲಯದ ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.