ಸಮಾಜ ಕಾರ್ಯಗಳಲ್ಲಿ ಮಹಿಳೆಯರು ಮುಂದೆ ಬರಲಿ: ರಾಮಲಿಂಗಯ್ಯ ಶ್ರೀಗಳು
ತಾಳಿಕೋಟಿ: ತಾಲೂಕಾ ಬೇಡ ಜಂಗಮ ಸಮಾಜವು ಇಂದು ಸಂಘಟಿತವಾದ ಅದರ ಅಭಿವೃದ್ಧಿಯಲ್ಲಿ ಕೇವಲ ಪುರುಷರಷ್ಟೇ ಕೆಲಸ ಮಾಡಿದರೆ ಸಾಲದು ನಮ್ಮ ಮಹಿಳೆಯರೂ ಮುಂದೆ ಬಂದು ಕೆಲಸಮಾಡುವ ಅಗತ್ಯ ಇದೆ ಎಂದು ಚಬನೂರು ಹಿರೇಮಠದ ಪೀಠಾಧಿಪತಿ ಹಾಗೂ ತಾಲೂಕಾ ಬೇಡಜಂಗಮ ಸಮಾಜದ ಗೌರವ ಅಧ್ಯಕ್ಷರೂ ಆದ ಪರಮಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ತಾಲೂಕಾ ಬೇಡಜಂಗಮ ಸಮಾಜದ ವತಿಯಿಂದ ಹಮ್ಮಿಕೊಂಡ ಮಹಿಳಾ ಘಟಕದ ಮುಖ್ಯಸ್ಥರ ಆಯ್ಕೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಆಶಿರ್ವಚನ ನೀಡಿದರು.
ಕಳೆದ ಎರಡು ತಿಂಗಳುಗಳಿಂದ ನಮ್ಮ ಪದಾಧಿಕಾರಿಗಳು ನನ್ನ ನೇತೃತ್ವದಲ್ಲಿ ತಾಲೂಕಿನಾದ್ಯಂತ ಪ್ರವಾಸ ಮಾಡಿ ಶೇ.90 ರಷ್ಟು ಗ್ರಾಮಗಳಲ್ಲಿ ಸಭೆಗಳನ್ನು ನಡೆಸಿ ಗ್ರಾಮಘಟಕಗಳ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಇದು ಕೇವಲ ಸಮಾಜದ ಉದ್ಧಾರಕ್ಕಾಗಿ ಮಾಡಿದ ಸಂಘಟನೆ ಆಗಿದ್ದು ಇದರಲ್ಲಿ ಯಾವುದೇ ರಾಜಕೀಯ ಸ್ವಾರ್ಥವಿಲ್ಲ. ಈಗ ಸಮಾಜದ ತಾಯಂದಿರನ್ನು ಈ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತಾಗಲು ಅವರ ಘಟಕದ ಜವಾಬ್ದಾರಿಯನನ್ನು ಆಯ್ಕೆ ಮಾಡಿದ್ದೇವೆ. ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜ್ಯೋತಿಷ್ಯರತ್ನ ರಾಮಲಿಂಗಯ್ಯ ಶ್ರೀಗಳ ನೇತೃತ್ವದಲ್ಲಿ ಬೇಡಜಂಗಮ ತಾಳಿಕೋಟಿ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷರಾಗಿ ಸುಜಾತಾ ಶರಣಯ್ಯ ರಾಮಗಿರಿಮಠ ಇವರನ್ನು ಆಯ್ಕೆ ಮಾಡಿ ನಂತರ ಗೌರವಿಸಲಾಯಿತು.
ಈ ಸಮಯದಲ್ಲಿ ತಾಳಿಕೋಟಿ ತಾಲೂಕಾ ಬೇಡಜಂಗಮ ಸಂಘದ ಪದಾಧಿಕಾರಿಗಳು ಸಮಾಜದ ಗಣ್ಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.