ಗದಗ

ಆಯುರ್ವೇದದ ಶ್ರೀಮಂತ ಪರಂಪರೆಯನ್ನು ಸಂಶೋಧನೆಯೊಂದಿಗೆ ಬೆಳೆಸೋಣ: ಮುಕುಲ್ ಜೈನ್‌

ಆಯುರ್ವೇದದ ಶ್ರೀಮಂತ ಪರಂಪರೆಯನ್ನು ಸಂಶೋಧನೆಯೊಂದಿಗೆ ಬೆಳೆಸೋಣ: ಮುಕುಲ್ ಜೈನ್‌


ಗದಗ   23: ಯುರ್ವೇದದ ಮೂಲ ತತ್ತ್ವಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ನಿರಂತರ ಸಂಶೋಧನೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ನಮ್ಮ ಸಾಂಪ್ರದಾಯಿಕ ವೈದ್ಯಕೀಯ ಜ್ಞಾನ ಮತ್ತು ಆಯುರ್ವೇದ ಕ್ಷೇತ್ರವು ಮತ್ತಷ್ಟು ಬೆಳೆಯಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಕುಲ್ ಜೈನ್ ಹೇಳಿದರು.ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಸೆಪ್ಟೆಂಬರ್ 23ರಂದು ಆಯೋಜಿಸಿದ್ದ ಧನ್ವಂತರಿ ಜಯಂತಿ ಅಂಗವಾಗಿ 11ನೇ ಆಯುರ್ವೇದ ದಿನಾಚರಣೆ,

ಉಪನ್ಯಾಸ ಮಾಲಿಕೆ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ದೇಶವು ಆಯುರ್ವೇದ ಮತ್ತು ವೈದ್ಯಕೀಯ ವಿಜ್ಞಾನದಲ್ಲಿ ಅತ್ಯಂತ ಸುದೀರ್ಘ ಹಾಗೂ ಶ್ರೀಮಂತ ಪರಂಪರೆಯನ್ನು ಹೊಂದಿದೆ. ನಮ್ಮ ವೈದಿಕ ತತ್ತ್ವಚಿಂತನೆಗಳು ಹಾಗೂ ಪ್ರಾಚೀನ ಗ್ರಂಥಗಳು ಧನ್ವಂತರಿ, ಸುಶ್ರುತ ಹಾಗೂ ಚರಕರಂತಹ ಮಹಾನ್ ಋಷಿ-ಮುನಿಗಳ ಮಹತ್ವದ ಕೊಡುಗೆಯನ್ನು ತಿಳಿಸುತ್ತವೆ ಎಂದರು.ಭಗವಾನ್ ಧನ್ವಂತರಿಯವರನ್ನು ಆಯುರ್ವೇದ ವಿಜ್ಞಾನದ ದೇವರೆಂದು ಕರೆಯಲಾಗುತ್ತದೆ.  

ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ   ಸುಶ್ರುತರು ‘ಸುಶ್ರುತ ಸಂಹಿತೆ’ ಎಂಬ ಗ್ರಂಥವನ್ನು ರಚಿಸಿದ್ದಾರೆ ಎಂದು ಹೇಳಿದರು.ಇಂದಿನ ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ಸಾಂಪ್ರದಾಯಿಕ ಆಯುರ್ವೇದದ ನಡುವೆ ದಿನದಿಂದ ದಿನಕ್ಕೆ ಅಂತರ ಹೆಚ್ಚಾಗುತ್ತಿದ್ದು, ಇದಕ್ಕೆ ಸೂಕ್ತ ಸಂಶೋಧನೆಯ ಕೊರತೆಯೂ ಒಂದು ಪ್ರಮುಖ ಕಾರಣವಾಗಿದೆ. ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿದಿನವೂ ಹೊಸ ತಂತ್ರಜ್ಞಾನಗಳು ಹಾಗೂ ಸಂಶೋಧನೆಗಳು ಹೊರಬರುತ್ತಿವೆ. ಅದೇ ರೀತಿಯಲ್ಲಿ ನಮ್ಮ ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದಲ್ಲೂ ಹೊಸ ಹೊಸ ಸಂಶೋಧನೆಗಳು ನಡೆಯಬೇಕು ಎಂದರು.

ಜಗತ್ತಿಗೆ ವೈದ್ಯಕೀಯ ಕ್ಷೇತ್ರದ ಕುರಿತು ಹೆಚ್ಚಿನ ತಿಳಿವಳಿಕೆ ಇಲ್ಲದ ಕಾಲದಲ್ಲಿಯೇ ಭಾರತದಲ್ಲಿ ಶಸ್ತ್ರಚಿಕಿತ್ಸಾ ಉಪಕರಣಗಳು ಹಾಗೂ ಪ್ಲಾಸ್ಟಿಕ್ ಸರ್ಜರಿಯಂತಹ ಮುಂದುವರಿದ ಚಿಕಿತ್ಸಾ ಪದ್ಧತಿಗಳು ಅಸ್ತಿತ್ವದಲ್ಲಿದ್ದವು. ನಮ್ಮ ಪ್ರಾಚೀನ ಜ್ಞಾನವು ವೈಜ್ಞಾನಿಕ ಹಾಗೂ ಸಮೃದ್ಧವಾಗಿತ್ತು ಎಂಬುದಕ್ಕೆ ಇದು ನಿದರ್ಶನವಾಗಿದೆ ಎಂದು ಮುಕುಲ್ ಜೈನ್ ತಿಳಿಸಿದರು.ಜಿಲ್ಲಾ ಆಯುಷ್ ಅಧಿಕಾರಿ ಡಾ. ಜುಬೇದಾ ತಿಗಳೆರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆಯುರ್ವೇದದ ಪೌರಾಣಿಕ ಹಿನ್ನೆಲೆಯನ್ನು ವಿವರಿಸಿದರು. ಸಮುದ್ರ ಮಂಥನದ ಸಂದರ್ಭದಲ್ಲಿ ಭಗವಾನ್ ಧನ್ವಂತರಿಯವರು ಅಮೃತ ಕಲಶ ಹಾಗೂ ಆಯುರ್ವೇದ ಜ್ಞಾನದೊಂದಿಗೆ ಅವತರಿಸಿದರು ಎಂಬ ನಂಬಿಕೆಯಿದೆ.

ತದನಂತರ ಅಶ್ವಿನಿ ಕುಮಾರರು, ಇಂದ್ರ, ಚರಕ, ಸುಶ್ರುತ ಹಾಗೂ ವಾಗ್ಭಟರಂತಹ ಮಹನೀಯರ ಮೂಲಕ ಕಾಯಚಿಕಿತ್ಸೆ ಮತ್ತು ಶಲ್ಯಚಿಕಿತ್ಸೆಯ ಮಹತ್ವದ ಜ್ಞಾನವು ಜಗತ್ತಿಗೆ ಲಭಿಸಿದೆ ಎಂದರು.ಪ್ರಸ್ತುತ ರಾಸಾಯನಿಕಯುಕ್ತ ಆಹಾರ ಪದ್ಧತಿಯಿಂದ ಹಲವು ದುಷ್ಪರಿಣಾಮಗಳು ಎದುರಾಗುತ್ತಿದ್ದು, ಸೂಕ್ತ ಆಹಾರ-ವಿಹಾರ ಹಾಗೂ ಸಾತ್ವಿಕ ಆಹಾರ ಸೇವನೆಯ ಮೂಲಕ ದೇಹದ ದೋಷಗಳನ್ನು ನಿಯಂತ್ರಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು. ಇಂದಿನ ವೇಗದ ಜೀವನದಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗೂ ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ಜಯಿಸಿ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.

ಅಸೂಯೆ ಹಾಗೂ ಅಹಂಕಾರಗಳನ್ನು ತೊರೆದು ಪ್ರೀತಿಯಿಂದ ಕೂಡಿ ಬಾಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.ದೇವರಿಂದ ದೊರೆತ ಈ ಜೀವನದಲ್ಲಿ ಸದ್ಗುಣಗಳನ್ನು ಬೆಳೆಸಿಕೊಂಡು, ಪರೋಪಕಾರ ಹಾಗೂ ಸಮಾಜಕ್ಕೆ ನಿಸ್ವಾರ್ಥ ಕೊಡುಗೆ ನೀಡುವ ಮೂಲಕ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.ಆಯುರ್ವೇದ ಶಾಸ್ತ್ರವು ಬೋಧಿಸುವ ಈ ಜೀವನ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಸಮಾಜದಲ್ಲಿ ಶಾಂತಿ ಮತ್ತು ಆರೋಗ್ಯವನ್ನು ನೆಲೆಗೊಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಡಾ. ಜುಬೇದಾ ತಿಗಳೆರಿ ಹೇಳಿದರು.ಕಾರ್ಯಕ್ರಮದಲ್ಲಿ    ಡಾ.ಸಂಜೀವ ನರ​‍್ಪನವರ, ಡಾ.ಎಂ.ಎ. ಹದಿಮನಿ, ಡಾ.ಸಾಯಿಪ್ರಕಾಶ ಮಡಿವಾಳರ, ಸಹಾಯಕ ಆಡಳಿತ ಅಧಿಕಾರಿ ಸುಧಾ ಜಾಳಿಹಾಲ್, ಡಾ. ಪವನ್, ಡಾ. ಆನಂದ್ ಕರಿಯವರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಡಾ.ಬಿ.ಎಂ. ಲೋಕಾಪುರಿ ಅವರು ನಿರೂಪಿಸಿದರು, ಡಾ.ಕುಶಾಲ ಕೋರೆ ವಂದಿಸಿದರು. 


ಸುದ್ದಿ ಓದಿ