ಶಿಕ್ಷಣದೊಂದಿಗೆ ಸಂಸ್ಕಾರವೂ ಇರಲಿ: ಶಾಸಕ ರಾಜುಗೌಡ
ಲೋಕದರ್ಶನ ವರದಿ
ವಿಜಯಪುರ 19: ಇಂದಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದ್ದು ಕೇವಲ ಶಾಲಾ ಪಠ್ಯದ ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಮತ್ತು ಸ್ವಾಸ್ಥ್ಯ ಸಾಧ್ಯವಿಲ್ಲ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಅಭಿಪ್ರಾಯಪಟ್ಟರು. ಅವರು ಬಸವನ ಬಾಗೇವಾಡಿಯ ಉತ್ನಾಳ ಗ್ರಾಮದಲ್ಲಿ ನಿನ್ನೆ ಜರುಗಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯದ್ವಾರ ಮತ್ತು ನೂತನ ಕೊಠಡಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಶಾಲಾ ಶಿಕ್ಷಣವು ಜೀವನೋಪಾಯಕ್ಕೆ ಆಧಾರವಾದರೆ ಸಂಸ್ಕಾರದ ಶಿಕ್ಷಣವು ಸಮಾಜಮುಖಿ ಬದುಕಿಗೆ ನೆರವಾಗುತ್ತದೆ ಎಂದರು. ಈ ದೇಶದ ಸರಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡಿದವರೇ ವಿಜ್ಞಾನಿಗಳು, ತಂತ್ರಜ್ಞಾನಿಗಳು, ವೈದ್ಯರು, ಸಮಾಜಸೇವಕರು ಮತ್ತು ರಾಷ್ಟ್ರವನ್ನಾಳುವ ನಾಯಕರಾಗಿ ಹೊರಹೊಮ್ಮಿದ್ದಾರೆ.
ಸರ್. ಎಂ. ವಿಶ್ವೇಶ್ವರಯ್ಯ, ಬಾಬಾಸಾಹೇಬ ಅಂಬೇಡ್ಕರ್, ಅಬ್ದುಲ್ ಕಲಾಂರಂಥವರು. ಅಷ್ಷೇ ಏಕೆ ಲಕ್ಷೊಪಲಕ್ಷ ತಮ್ಮ ದುಡಿಮೆಯ ಹಣವನ್ನು ಖರ್ಚು ಮಾಡಿ ತಾವು ಕಲಿತ ಉತ್ನಾಳದ ಶಾಲೆಯ ಮುಖ್ಯದ್ವಾರ ನಿರ್ಮಾಣಕ್ಕೆ ನೆರವಾದ ವಿಜಯಪುರದ ಪ್ರತಿಷ್ಠಿತ ಎಕ್ಸಲಂಟ್ ಶಿಕ್ಷಣ ಸಂಸ್ಥೆಯ ಚೇರ‌್ಮನ್ ಬಸವರಾಜ ಅವರೆ ಅತ್ತ್ಯುತ್ತಮ ಉದಾಹರಣೆಯೆಂದರು. ಶಾಸಕರ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ಉತ್ನಾಳ ಗ್ರಾಮದ ಧಾರ್ಮಿಕ ಮತ್ತು ಶೈಕ್ಷಣಿಕ ರಂಗದ ಬೆಳವಣಿಗೆಗೆ ಸಾಕಷ್ಷು ನೆರವು ಒದಗಿಲಾಗಿದ್ದು, ಮುಂದೆಯೂ ಇಂಥಹ ಸಹಾಯ-ಸಹಕಾರದ ನಿರಂತರವಾಗಿ ಇರಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕರ್ನಾಟಕ ರಾಜ್ಯ ಸರಕಾರದ ಬಾಲ ವಿಕಾಸ ಅಕಾಡಿಮಿಯ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಮಾತನಾಡಿ ಈ ದೇಶದ ಭವಿಷ್ಯ ಶಾಲಾ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ. ಶಾಲೆಯು ಜೀವಂತ ದೇವರುಗಳ ದೇವಾಲಯವಾಗಿದ್ದು ಇಂಥ ದೇಗುಲಗಳಲ್ಲಿ ಮಾತ್ರ ಮೌಲ್ಯಯುತ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಇತ್ತೀಚಿಗೆ ದೈವಾಧೀನರಾದ ಸಾದ್ವಿ ನೀಲಮ್ಮ ಶಾಂತಪ್ಪ ಕೌಲಗಿ ಅವರ ಸ್ಮರಣಾರ್ಥ ನಿರ್ಮಾಣಗೊಂಡಿರುವ ಈ ಶಾಲೆಯ ಮುಖ್ಯ ದ್ವಾರ ನಿರ್ಮಾಣದ ರೂವಾರಿ ಬಸವರಾಜ ಕೌಲಗಿ ಅಂಥವರೂ ಕೂಡಾ ಉತ್ನಾಳದ ಈ ಪುಟ್ಟ ಊರಿನ ಸರಕಾರಿ ಶಾಲೆಯಲ್ಲೇ ಓದಿದ ಜೀವಂತ ದೇವರಾಗಿದ್ದಾರೆ ಎಂದರು.