ಯುವಜನತೆ ವಿವೇಕಾನಂದರ ಸಂದೇಶಗಳ ಪಾಲನಕರ್ತರಾಗಲಿ: ಕೊಪ್ಪ
ಮುದ್ದೇಬಿಹಾಳ 16: ಮಾನಸಿಕ, ದೈಹಿಕ ಹಾಗೂ ಭೌದ್ಧಿಕ ಶಕ್ತಿಗಳನ್ನೆಲ್ಲ ಒಟ್ಟುಗೂಡಿಸಿ ಕೊಂಡು ದೇಶದ ಅಭಿವೃದ್ಧಿಗೆ ಪೂರಕವಾದ ನಿಸ್ವಾರ್ಥ ಸೇವೆಗೆ ಸಮರ್ಿತರಾಗುವ ಮೂಲಕ ವಿವೇಕಾನಂದರು ಕೊಟ್ಟು ಹೋದ ಜವಾಬ್ದಾರಿಗಳಿಗೆ ಯುವಜನತೆ ಪಾಲನಕರ್ತರಾಗಬೇಕೆಂದು ಚಿಂತಕ ಅರವಿಂದ ಹು. ಕೊಪ್ಪ ಕರೆ ನೀಡಿದರು.
ಪಟ್ಟಣದ ಆಲಮಟ್ಟಿ ರಸ್ತೆ ಪಕ್ಕದ ಅರಿಹಂತ ಗಿರಿಯಲ್ಲಿರುವ ಅರಿಹಂತ ಚಾರಿಟೇಬಲ್ ಟ್ರಸ್ಟ್, ಅರಿಹಂತ ಬಿ.ಎಸ್ ಡಬ್ಲೂ ಕಾಲೇಜಿನ ಎನ್.ಎಸ್.ಎಸ್ ಘಟಕ, ವಿಜಯಪುರ ಜಿಲ್ಲಾಸ್ಪತ್ರೆ, ಜಿಲ್ಲಾ ರಕ್ತನಿಧಿ ಕೇಂದ್ರ ವಿಜಯಪುರ ಪರ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ, ಬಸರಕೋಡ ರಕ್ತದಾನ ಕ್ರಿಯಾ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಏರಿ್ಡಸಲಾಗಿದ್ದ ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನೋತ್ಸವ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು ಶ್ರದ್ಧಾಪೂರ್ಣ ಅಧ್ಯಯನ, ಉತ್ಸಾಹಪೂರ್ಣ ಆಲೋಚನೆ ಹಾಗೂ ಅನನ್ಯದಾಯಕ ಶಕ್ತಿ ಸಾಮರ್ಥ್ಯಗಳಿರುವ ಯುವಜನತೆಯನ್ನು ಎದುರು ನೋಡುತ್ತಿರುವ ಭಾರತಾಂಬೆಗೆ ವಿಶ್ವಮಾನ್ಯತೆ ತಂದು ಕೊಡಲು ವಯಕ್ತಿಕ ಬದುಕಿನ ಸುಖ ಭೋಗಗಳನ್ನು ತಿರಸ್ಕರಿಸಿ ಪರರ ಒಳಿತಿಗೆ ದುಡಿಯಲು ಹಂಬಲಿಸುವ ಮನಗಳಿಗೆ ಸೂಕ್ತ ಸೇವಾ ಕ್ಷೇತ್ರಗಳನ್ನು ನೀಡಿ ಗೌರವಿಸುವ ವ್ಯವಸ್ಥೆಯನ್ನು ರೂಪಿಸುವ ಜವಾಬ್ದಾರಿಯನ್ನು ಹಿರಿಯರು ತೆಗೆದುಕೊಂಡಲ್ಲಿ ಮಾತ್ರ ಯುವಶಕ್ತಿಯ ಸದ್ವಿನಿಯೋಗ ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕಾ ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿ ಮಾತನಾಡಿ ಇಚ್ಚೆ ಮತ್ತು ಬಯಕೆಗಳಿಗೆ ಸರಿಹೊಂದಬಹುದಾದ ಆದರ್ಶಗಳು, ಭಾವನಾತ್ಮಕ ಕ್ರಿಯೆಗಳ ಲಭ್ಯತೆಯಿಂದ ವಂಚಿತರಾಗುವ ಯುವಜನತೆ ಉದ್ವೇಗ, ಹಿಂಸೆ, ಅಸಹಾಯಕತೆ, ನಿರುತ್ಸಾಹಗಳಂತಹ ಮಾರಕ ಭಾವನೆಗಳಿಗೆ ತುತ್ತಾಗಿ ಸಮಾಜ ವಿದ್ರೋಹಿ ಶಕ್ತಿಗಳಾಗಿ ರೂಪುಗೊಳ್ಳುತ್ತಿರುವುದನ್ನು ತಡೆದು ಉತ್ಪಾದಕ ಶಕ್ತಿಯನ್ನಾಗಿಸಲು ವಿವೇಕಾನಂದರ ಚಿಂತನೆಗಳೇ ಚಿಕಿತ್ಸಕ ಸಾಧನಗಳಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಸಗರಿ ಮಾತನಾಡಿ ತ್ಯಾಗ ಮತ್ತು ಸೇವೆಗಳ ಮಹತ್ವವನ್ನು ತಿಳಿಸಿಕೊಟ್ಟು ಪ್ರತಿದಿನ ಕೆಳಗೆ ಕುಸಿಯುತ್ತಿರುವ ಜನರ ಉದ್ದಾರಕ್ಕೆ ಯುವಜನತೆಯೇ ಆಸರೆಯಾಗಿ ನಿಲ್ಲಬೇಕೆಂಬ ದಿವ್ಯ ಸಂದೇಶದೊಂದಿಗೆ ವಿವೇಕಾನಂದರು ನಡೆಸಿದ ಸತ್ಯ ಶೋಧಕ ಆಂದೋಲನ ಇಂದಿನ ಯುವಜನಾಂಗಕ್ಕೆ ದಿಗ್ಜೋತಿಯಾಗಿದೆ ಎಂದರು.
ಜಿಲ್ಲಾ ರಕ್ತನಿಧಿ ಕೇಂದ್ರದ ಕಾರ್ಯನಿರತ ವೈಧ್ಯ ಡಾ. ನಕ್ಷ ರಕ್ತದಾನದ ಮಹತ್ವ, ರಕ್ತದಾನಿಗೆ ಆಗುವ ಆರೋಗ್ಯವರ್ಧಕ ಲಾಭಗಳು, ರಕ್ತದಾನಿಗಿರಬೇಕಾದ ಅರ್ಹತೆಗಳು ಇತ್ಯಾದಿಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹೆಚ್ಚುಬಾರಿ ರಕ್ತದಾನ ಮಾಡಿದ ಕೀರ್ತಿಗೆ ಪಾತ್ರರಾದ ಅರವಿಂದ ಕೊಪ್ಪರವರನ್ನು ತಾಲೂಕು ಆಸ್ಪತ್ರೆಯ ವತಿಯಿಂದ ಸನ್ಮಾನಿಸಿದರು.ವೇದಿಕೆಯ ಮೇಲೆ ಅರಿಹಂತ ಬಿ.ಎಸ್.ಡಬ್ಲೂ ಕಾಲೇಜು ಪ್ರಾಚಾರ್ಯ ವಿಫುಲ ಸಗರಿ, ನ್ಯಾಯವಾದಿ ರಶ್ಮಿ ಕುಲಕರ್ಣಿ, ತಾಲ್ಲೂಕು ಆಸ್ಪತ್ರೆ ಪ್ರಯೋಗಾಲಯದ ಹಿರಿಯ ತಾಂತ್ರಿಕ ಅಧಿಕಾರಿ ವ್ಹಿ.ವ್ಹಿ ಪವಾಡಶೆಟ್ಟಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ವಲಯ ಅರಣ್ಯ ಇಲಾಖೆಯ ಅಧಿಕಾರಿ ಸಿದ್ಲಿಂಗಪ್ಪ ಸಂಗಲಕ ಸೇರಿದಂತೆ 27 ಜನರು ಸ್ವಯಂ ರಕ್ತ ದಾನ ಮಾಡಿದರು. ಶಿಬಿರವನ್ನು ನಸಿಂರ್ಗ್ ಆಫೀಸರಗಳಾದ ಎಂ. ಆರ್ ಹವಾಲ್ದಾರ, ನಬಿ ಬೀಳಗಿ, ಪ್ರಯೋಗಾಲಯ ತಜ್ಞೆ ಸುನೇನಾ ತಳವಾರ, ಪ್ರಯೋಗಾಲಯ ಸಹಾಯಕರಾದ ಐಶ್ವರ್ಯ ಪ್ಯಾಟಿಗೌಡರ,ನಿಖಿಲ್ ಯಶಸ್ವಿಯಾಗಿ ನಡೆಸಿಕೊಟ್ಟರು.
ಉಪನ್ಯಾಸಕ ಅಶೋಕ ಹಡಪದ ಸ್ವಾಗತಿಸಿದರು. ಇಂಗ್ಲೀಷ ಉಪನ್ಯಾಸ ರಾಜು ನಲವಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.ನ್ಯಾಯವಾದಿ ಬಸವರಾಜ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಬಿ.ಕೆ ಕಟ್ಟಿ ವಂದಿಸಿದರು.