ಶಾಲಾ, ಕಾಲೇಜುಗಳು ಅಪರಾಧ ಮುಕ್ತವಾಗಿ ಒಳ್ಳೆಯ ವಾತಾವರಣವಿರಲಿ
ಡಿವೈಎಸ್ಪಿ ಶಾಂತವೀರ ಅಭಿಪ್ರಾಯ: ಶಾಲಾ, ಕಾಲೇಜುಗಳ ಸಮಸ್ಯೆಗಳ ಕಡೆ ಪೊಲೀಸರ ನಡೆ ಜನಸ್ನೇಹಿ ಪೊಲೀಸ್ ಕಾರ್ಯಕ್ರಮ
ಜಮಖಂಡಿ 06: ಶಾಲಾ, ಕಾಲೇಜುಗಳು ಅಪರಾಧ ಮುಕ್ತವಾಗಿ ವಿದ್ಯಾರ್ಥಿಗಳು ಒಳ್ಳೆಯ ವಾತಾವರಣದಲ್ಲಿ ಕಲಿಯಬೇಕು. ಯಾವುದೇ ಅಪರಾಧ ಸಮಸ್ಯೆಗಳಿಗೆ ಪೊಲೀಸ್ ಇಲಾಖೆ ಕೂಡಲೇ ಸ್ಪಂದಿಸುತ್ತದೆ ಎಂದು ಡಿವೈಎಸ್ಪಿ ಶಾಂತವೀರ ಈ ಹೇಳಿದರು.
ನಗರದ ದರ್ಬಾರ್ ಹಾಲ್ನಲ್ಲಿ ನಡೆದ ಪೊಲೀಸ್ ಇಲಾಖೆಯ ಜಮಖಂಡಿ ವೃತ್ತದ ವತಿಯಿಂದ ಶಾಲಾ, ಕಾಲೇಜುಗಳ ಸಮಸ್ಯೆಗಳ ಕಡೆ ಪೊಲೀಸರ ನಡೆ ಕುರಿತ ಜನಸ್ನೇಹಿ ಪೊಲೀಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ, ಕಾಲೇಜುಗಳ ಆವರಣದಲ್ಲಿ ಪುಂಡರ ಹಾವಳಿ ತಪ್ಪಿಸುವುದು ಹಾಗೂ ಧೂಮಪಾನ, ಮದ್ಯಪಾನ ತಡೆಗಟ್ಟುವುದು ಮತ್ತು ಸಂಚಾರ ಸಮಸ್ಯೆಗಳನ್ನು ಬಗೆಹರಿಸುವುದು ಜನಸ್ನೇಹಿ ಪೊಲೀಸ್ ಕಾರ್ಯಕ್ರಮದ ಉದ್ಧೇಶವಾಗಿದೆ. ಶಾಲಾ, ಕಾಲೇಜುಗಳ ಮುಖ್ಯಸ್ಥರು, ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ವಾಟ್ಸ್ಆ್ಯಪ್ ಗ್ರುಪ್ ರಚಿಸಲಾಗುವುದು. ಯಾವುದೇ ಸಮಸ್ಯೆಗಳಿದ್ದರೂ ವಾಟ್ಸ್ಆ್ಯಪ್ ಮೂಲಕ ತಿಳಿಸಿದರೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಧಾವಿಸಿ ಸಮಸ್ಯೆಗೆ ಪರಿಹಾರ ನೀಡುವರು ಎಂದರು.
ಸಾವಳಗಿ ಪೊಲೀಸ್ ಠಾಣೆಯ ಪಿಎಸ್ಐ ಜಿ.ಎಂ. ಪೂಜೆರಿ ಮಾತನಾಡಿ, ಜಮಖಂಡಿ ನಗರ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ 112 ನಂಬರಗೆ ಕರೆ ಮಾಡಿ ತಿಳಿಸಿದರೆ 10 ನಿಮಿಷಗಳಲ್ಲಿ ಪೊಲೀಸ್ ಗಸ್ತು ವಾಹನ ಘಟನಾ ಸ್ಥಳಕ್ಕೆ ಬಂದು ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣನವರ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಡಿ. ಬಾಗವಾನ, ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅತಿಥಿಗಳಾಗಿ ಮಾತನಾಡಿದರು. ಬಿಎಲ್ಡಿಇ ಪಪೂ ಕಾಲೇಜು ಪ್ರಾಚಾರ್ಯ ಎಂ.ಎಂ. ಪುಟ್ಟಣ್ಣವರ ವೇದಿಕೆಯಲ್ಲಿದ್ದರು.
ಮುಖ್ಯ ಶಿಕ್ಷಕರಾದ ಎಸ್.ಎಂ. ಹರಗೆ, ಎಚ್.ವೈ. ಜರಾಳೆ, ಹನಮಂತ ಅರಕೇರಿ, ನಾರಾಯಣ ಶಾಸ್ತ್ರೀ ಕಾರ್ಯಕ್ರಮ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.
ಕ್ಷೇತ್ರ ಸಮನ್ವಯಾಧಿಕಾರಿ ಆರ್.ಎಸ್. ಅವಟಿ ಸ್ವಾಗತಿಸಿದರು. ಶಹರ ಪೊಲೀಸ್ ಠಾಣೆಯ ಪಿಎಸ್ಐ ಎನ್.ಆರ್. ಖಿಲಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶಿವು ಯಾದವಾಡ ನಿರೂಪಿಸಿ, ವಂದಿಸಿದರು.