ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿ: ತಿಪ್ಪೇಸ್ವಾಮಿ
ಬಳ್ಳಾರಿ 29: ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಯೋಗದಲ್ಲಿ ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದ ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ ‘ಸಾಂಸ್ಕೃತಿಕ ಸಂಭ್ರಮ-2021-22' ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಬಯಲಾಟ ನಿರ್ದೇಶಕ ತಿಪ್ಪೇಸ್ವಾಮಿ ಮುದ್ದಟನೂರು ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯ ವೈಶಿಷ್ಟ್ಯ ಹಾಗೂ ಜಿಲ್ಲೆಯ ರಂಗಪರಂಪರೆ ಕುರಿತು ಮಾತನಾಡಿದರಲ್ಲದೆ ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ರಂಗ ನಿರ್ದೇಶಕ ಕೆ.ಜಗದೀಶ್ ಅವರು ರಂಗಭೂಮಿ ಕಲಾವಿದನ ಪ್ರತಿಭೆಯನ್ನು ನೈಜವಾಗಿ ಅನಾವಣಗೊಳಿಸುವ ಏಕೈಕ ಮಾಧ್ಯಮ ಎಂದು ಹೇಳಿದರು. ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ನ ಅಧ್ಯಕ್ಷೆ ಹಾಗೂ ಹಿರಿಯ ರಂಗಭೂಮಿ ಕಲಾವಿದೆ ಸುಜಾತಮ್ಮ, ಹಡಪದ ಅಪ್ಪಣ್ಣ ಸಂಘದ ಜಿಲ್ಲಾ ಸಂಚಾಲಕ ಎಚ್.ಮಹಾಂತೇಶ್, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಜಿಲ್ಲಾಧ್ಯಕ್ಷ ಸಿದ್ಧರಾಮಪ್ಪ ಸಿರಿಗೇರಿ, ಅಖಿಲ ಕರ್ನಾಟಕ ಬಯಲಾಟ ಪರಿಷತ್ತಿನ ಅಧ್ಯಕ್ಷ ಜಿ.ನಾಗನಗೌಡ, ಜಾಲಿಹಾಳ್ ದೊಡ್ಡಬಸವನಗೌಡ, ಪಾಲಿಕೆ ಸದಸ್ಯ ಕೆ. ಹನುಮಂತಪ್ಪ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪತ್ರಕರ್ತ ಕೆ.ಎಂ.ಮಂಜುನಾಥ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ನ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ಪ್ರಾಸ್ತಾವಿಕ ಮಾತನಾಡಿ, ಟ್ರಸ್ಟ್ನ ಉದ್ದೇಶಗಳ ಕುರಿತು ತಿಳಿಸಿಕೊಟ್ಟರು.
ಬಳಿಕ ಸೂರ್ಯಕಲಾ ಟ್ರಸ್ಟ್ನ ಬಿ.ಅಶ್ವಿನಿ ಹಾಗೂ ಬಿ.ಐಶ್ವರ್ಯ ತಂಡದವರಿಂದ ಸಮೂಹ ನೃತ್ಯ ಕಾರ್ಯಕ್ರಮ ಜರುಗಿತು. ಹಿರಿಯ ಬಯಲಾಟ ಕಲಾವಿದೆ ಉಷಾರಾಣಿ, ಅಂಬುಜಮ್ಮ, ಎರೆ್ರಮ್ಮ ಅವರು ಬಯಲಾಟದ ರಂಗಗೀತೆಗಳು ಹಾಗೂ ಡಾ.ದೊಡ್ಡಯ್ಯ ವಿ.ಕಲ್ಲೂರು ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ವಿವಿಧ ಕವಿಗಳ ಕನ್ನಡಗೀತೆಗಳನ್ನು ಪ್ರಸ್ತುತಪಡಿಸಿದರು.
ಉಮೇಶ್ ತಬಲಾ ಸಾಥ್ ನೀಡಿದರು. ಇದೇ ವೇಳೆ ಡಾ.ದೊಡ್ಡಯ್ಯ ಕಲ್ಲೂರು, ಕರ್ನಾಟಕ ಬಯಲಾಟಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ವೈ.ರಂಗಾರೆಡ್ಡಿ, ಬಯಲಾಟ ಪರಿಷತ್ತಿನ ಅಧ್ಯಕ್ಷ ಜಿ.ನಾಗನಗೌಡ, ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ಹೇಮರೆಡ್ಡಿ, ಪತ್ರಕರ್ತರಾದ ಸಿದ್ಧರಾಮಪ್ಪ ಸಿರಿಗೇರಿ ಹಾಗೂ ಕೆ.ಎಂ.ಮಂಜುನಾಥ ಅವರನ್ನು ಸನ್ಮಾನಿಸಲಾಯಿತು.
ಸತ್ಯಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆಲಂಬಾಷಾ ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ‘ವೀರ ಅಭಿಮನ್ಯು ಕಾಳಗ' ಬಯಲಾಟದ ಕೆಲ ದೃಶ್ಯಗಳ ಪ್ರದರ್ಶನ ಜರುಗಿತು.ಅಭಿಮನ್ಯು ಪಾತ್ರದಲ್ಲಿ ನಾಗರಾಜಗೌಡ ಕರ್ಚೇಡು, ಧರ್ಮರಾಯನಾಗಿ ಎಚ್.ತಿಪ್ಪೇಸ್ವಾಮಿ ಮುದ್ದಟನೂರು, ಸುಭದ್ರೆಯಾಗಿ ಅಂಬುಜಮ್ಮ, ಸಾರಥಿಯಾಗಿ ಎನ್.ರಮೇಶ್ ರುದ್ರಪಾದ ನಿರ್ವಹಿಸಿದರು. ಕೆ.ಹೇಮರೆಡ್ಡಿ ತಂಡದಿಂದ ಹಿಮ್ಮೇಳ, ಮುಮ್ಮೇಳ ಜರುಗಿತು. ವೈ.ರಂಗಾರೆಡ್ಡಿ ಹಾರ್ಮೋನಿಯಂ ಹಾಗೂ ವೀರೇಶ್ ತಬಲಾ ಸಾಥ್ ನೀಡಿದರು.