ಬಳ್ಳಾರಿ

ವಿದ್ಯಾವಂತರು ಬಯಲಾಟಕ್ಕೆ ಪ್ರೋತ್ಸಾಹಿಸಿ ಉಳಿಸಿ ಬೆಳೆಸಲು ಮುಂದಾಗಲಿ

ವಿದ್ಯಾವಂತರು ಬಯಲಾಟಕ್ಕೆ ಪ್ರೋತ್ಸಾಹಿಸಿ ಉಳಿಸಿ ಬೆಳೆಸಲು ಮುಂದಾಗಲಿ

 ಬಳ್ಳಾರಿ: ಗಂಡುಮೆಟ್ಟಿನ ಬಯಲಾಟ ಕಲೆಗೆ ವಿದ್ಯಾವಂತ ಬುದ್ಧಿವಂತರು, ಪ್ರೊಫೆಸರ್ಗಳು ಪಾತ್ರ ಅಭಿನಯಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಹಿರಿಯ ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿ ಹೇಳಿದರು. 

ನಗರದ ಬಂಡಿಹಟ್ಟಿ ಪ್ರದೇಶದ ರಾಮನಗರದಲ್ಲಿ ಸಪ್ತಸ್ವರ ಸಾಂಸ್ಕೃತಿಕ ಬಯಲಾಟ ಕಲಾ ಟ್ರಷ್ಟ್ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸಾಮಾನ್ಯ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಬಯಲಾಟ ಸಂಜೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಯಲಾಟ ಕೇವಲ ಗ್ರಾಮೀಣ ಪ್ರದೇಶಕ್ಕಷ್ಟೇ ಸೀಮಿತವಾಗಿದೆ. ಬಯಲಾಟ ಎಂದರೆ, ವಿದ್ಯಾವಂತರು ಮೂಗು ಮುರಿಯುವ ಪರಿಸ್ಥಿತಿ ಕಂಡು ಬರುತ್ತಿದೆ. ಕೇವಲ ಅನಕ್ಷರಸ್ತರು ಮಾತ್ರ ಇದರಲ್ಲಿ ಅಭಿನಯಿಸುತ್ತಿದ್ದಾರೆ. ಇದರಿಂದ ಇದು ಹಳ್ಳಿ ಪ್ರದೇಶಗಳಿಗೆ ಅಷ್ಟೇ ಸೀಮಿತವಾಗಿದೆ.  ಇದನ್ನು ನಗರ ಪ್ರದೇಶಗಳಿಗೂ ವ್ಯಾಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾವಂತರು ಬಯಲಾಟಕ್ಕೆ ಪ್ರೋತ್ಸಾಹ ನೀಡುವ ಮೂಲಕ ಬಯಲಾಟವನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದರು. 

ಯಕ್ಷಗಾನಕ್ಕೆ ವಿದ್ಯಾವಂತರು, ಬುದ್ಧಿವಂತರು, ಪ್ರೊಫೆಸರ್ಗಳು ಪ್ರದರ್ಶನ ಮಾಡುವುದರಿಂದ ಅದು ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದೆ. ಆದರೆ, ಬಯಲಾಟ ಮಾತ್ರ ನಮ್ಮ ರಾಜ್ಯದಲ್ಲೇ ಉಳಿದಿದೆ. ಇದನ್ನು ದೇಶ ವಿದೇಶಗಳಲ್ಲಿ ಖ್ಯಾತಿ ಪಡೆಯಲು ವಿದ್ಯಾವಂತರು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ನಾಟಕ ವಿಭಾಗದ ಉಪನ್ಯಾಸಕ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಮಾತನಾಡಿ, ಸಾಂಸ್ಕೃತಿಕ ಕಲೆ ಪ್ರತಿಯೊಬ್ಬರಿಗೂ ಮುಟ್ಟಬೇಕಾದರೆ, ರಂಗಭೂಮಿ ಜನರ ಬಳಿಗೆ ಹೋಗಬೇಕು. ಅಂದಾಗ ಮಾತ್ರ ರಂಗಭೂಮಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಎಲ್ಲರೂ ರಂಗಮಂದಿರಗಳಿಗೆ ಹೋಗಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ರಂಗಭೂಮಿಯೇ ಜನರ ಬಳಿಗೆ ಹೋಗಬೇಕು. ಬಡಾವಣೆಗಳ ಮೂಲಕ ರಂಗಭೂಮಿ ಚಲನೆ ಆಗಬೇಕು ಎಂದರು. 

ರಂಗಭೂಮಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೀಣಾಕುಮಾರಿ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ. ಗಂಗಣ್ಣ, ಕನರ್ಾಟಕ ಬಯಲಾಟ ಅಕಾಡೆಮಿ ಸದಸ್ಯ ಹೆಚ್. ತಿಪ್ಪೇಸ್ವಾಮಿ, ಜಿ. ನಾಗನಗೌಡ, ಸಿರಿಗೇರಿ ಮಂಜುನಾಥ್ ಅವರು ಮಾತನಾಡಿದರು.

ಸಪ್ತಸ್ವರ ಸಾಂಸ್ಕೃತಿಕ ಬಯಲಾಟ ಕಲಾ ಟ್ರಸ್ಟ್ನ ಅಧ್ಯಕ್ಷ ಈ. ಹನುಮಾವಧೂತಪ್ಪ, ಕಾರ್ಯದರ್ಶಿ  ಈ ಚಿದಾನಂದ, ಖಜಾಂಚಿ ಈ. ಅನುರಾಧ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

ಬಿ. ಗಾದಿಲಿಂಗಪ್ಪ ತಂಡದವರಿಂದ ವಚನ ಗಾಯನ, ತಿಪ್ಪಮ್ಮ ತಂಡದವರಿಂದ ರಂಗಗೀತೆ ಗಾಯನ, ಸಣ್ಣ ಹೊನ್ನೂರಪ್ಪ ತಂಡದವರಿಂದ ಮುಮ್ಮೇಳ ಕಾರ್ಯಕ್ರಮ ನಡೆಯಿತು. ನಂತರ ನಡೆದ ಅಭಿಮನ್ಯು ಸುಭದ್ರ ಸಂವಾದದಲ್ಲಿ ಮೋಕಾ ಶೇಖರ್ ಅಭಿಮನ್ಯು ಮತ್ತು ಅಂಬುಜಮ್ಮ ಸುಭದ್ರಾ ಪಾತ್ರಕ್ಕೆ ಜೀವ ತುಂಬಿದರು 

ಸುದ್ದಿ ಓದಿ