ಬಳ್ಳಾರಿ

ಕಂಪನಿ ಪರವಾನಿಗೆ ಪರದಾಟಕ್ಕೆ ತೆರೆ ಬೀಳಲಿ

ಕಂಪನಿ ಪರವಾನಿಗೆ ಪರದಾಟಕ್ಕೆ ತೆರೆ ಬೀಳಲಿ

ಡಾ.ಬಿ.ವಿ. ರಾಜಾರಾಂ ಆಶಯ: ಕಂಪನಿ ನಾಟಕ ಮಾಲಿಕರ-ಕಲಾವಿದರ ಸಮ್ಮೇಳನ ಸಮಾರೋಪ   

ರಾಜ್ಯದ 25 ಮಿಕ್ಕಿ ನಿತ್ಯ ನಾಟಕ ಪ್ರದರ್ಶನ ನೀಡಿ ಬದುಕುತ್ತಿರುವ ಕಂಪನಿಗಳ 650ಕ್ಕೂ ಮಿಕ್ಕಿ ಕಲಾವಿದರ ಪ್ರಥಮ ರಾಜ್ಯ ಸಮ್ಮೇಳನ ಬಳ್ಳಾರಿಯಲ್ಲಿ ‘ರಂಗತೋರಣ’ ಆಯೋಜಿಸಿದ್ದು ಐತಿಹಾಸಿಕ ಹಾಗೂ ಚರಿತಾರ್ಹ. ಅನಾದಿಕಾಲದಿಂದ ಬಂದ ರಂಗ ಪರಂಪರೆಯ ವೈಭವವನ್ನು ಗೌರವಿಸಿ ಕಾಪಾಡುವ ಒಂದು ನಿರ್ಣಯ ಹಾಗೂ ಅವರ ಪಾಡಿಪಾಟಲಿಗೆ ಸಮಾಧಾನದ ಪರಿಹಾರ ನೀಡುವ ಮತ್ತೊಂದು ನಿರ್ಣಯ ಮಾಡಿರುವುದು ದಾಖಲೆ. ಅವುಗಳ ಅನುಷ್ಠಾನಕ್ಕೆ ಎಲ್ಲರೂ ಶಕ್ತಿಮೀರಿ ಶ್ರಮಿಸೋಣ ಎಂದು ಕೇಂದ್ರ ಸಂಗೀತ, ನಾಟಕ ಅಕಾಡೆಮಿಯ ಸದಸ್ಯರಾಗಿರುವ ಹಿರಿಯ ರಂಗ ಸಂಘಟಕ, ಅಡಕಾಮಿ ಮಾಜಿ ಅಧ್ಯಕ್ಷ ಹಾಗೂ ರಂಗಾಯಣ ಮೈಸೂರಿನ ನಿರ್ದೇಶಕರೂ ಆಗಿದ್ದ ಡಾ.ಬಿ.ವಿ. ರಾಜಾರಾಂ ಅಪೇಕ್ಷಿಸಿದರು. 

ಅವರು ಫೆ-26ರಂದು ನಗರದ ರಾಘವ ಕಲಾಮಂದಿರದಲ್ಲಿ ನಡೆದ ಕಂಪನಿ ನಾಟಕ ಕಲಾವಿದರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. 

ಕಂಪನಿ ನಾಟಕಗಳು ಊರಿಂದೂರಿಗೆ ಪ್ರದರ್ಶನ ಅನುಮತಿಗಾಗಿ ಪರದಾಡುವ, ಕಲಾವಿದರ ನಿತ್ಯ ವಾಸ್ತವ್ಯ, ಮಕ್ಕಳ ವಿದ್ಯಾಭ್ಯಾಸದ ಸಮಸ್ಯೆಗಳು ಇಂದಿಗೂ ಸವಾಲುಗಳಾಗಿವೆ. ಇವುಗಳನ್ನು ಸರ್ಕಾರದ ಮಟ್ಟದಲ್ಲಿ ಸರಿಯಾಗಿ ಬಿಂಬಿಸಿ ಈ ಪರದಾಟಕ್ಕೆ ತೆರೆ ಎಳೆಯಬೇಕಾಗಿದೆ ಎಂದರು. ಹಾಗಾಗಿ ಮುಂದಿನ ಹಲವು ಸಮ್ಮೇಳನಗಳನ್ನು ರಂಗತೋರಣವೇ ಸಮರ್ಥವಾಗಿ ನಿರ್ವಹಿಸಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು. 

ಕಂಪನಿ ನಾಟಕಗಳ ಗುಣಮಟ್ಟ ಸುಧಾರಣೆಯೇ ಸಾಮಾಜಿಕ ಜಾಲತಾಣಗಳ ಪೈಪೋಟಿಗೆ ತಕ್ಕ ಸವಾಲು ಎಂದು ನಾಟಕಕಾರ ಬಸವರಾಜ ಪಂಚಗಲ್ ನುಡಿದರು. ಅಭಿಮಾನಿ ದೇವರುಗಳೇ ಕಲಾವಿದರ ನಿಜವಾದ ಶಕ್ತಿ ಎಂದು 83 ವರ್ಷದ ಕುಕನೂರಿನ ಬಾಬಣ್ಣ ಕಲ್ಮನಿ ಹೇಳಿದರು. ತಾಯಿ ಕೂಡಾ ಮಗು ಅಳದೇ ಹಾಲು ಕುಡಿಸುವುದಿಲ್ಲವಾದ್ದರಿಂದ ನಾವು ಸಂಘಟಿತರಾಗಿ ನಮ್ಮ ಅಹವಾಲುಗಳನ್ನು ಸರಿಯಾಗಿ ಸಲ್ಲಿದಾಗ ಮಾತ್ರ ಕಿಂಚಿತ್ ಸಹಾಯವಾದರೂ ಸಿಗಲಿದೆ ಎಂದು ಕರ್ನಾಟಕ ರಾಜ್ಯ ಕಂಪನಿ ಮಾಲಿಕರ ಸಂಘ ಅಧ್ಯಕ್ಷ ಎಲ್‌.ಬಿ.ಶೇಖ ಮಾಸ್ತರ ಆಶಿಸಿದರು. 

ಆರಂಭದಲ್ಲಿ ಹಿರಿಯ ಕಲಾವಿದೆ ಪ್ರೇಮಾ ತಾಳಿಕೋಟೆ ಪ್ರಾರ್ಥನೆ ಹಾಡಿದರು. ಮೈಸೂರಿನ ಯುವಕಲಾವಿದ ಶ್ರೀವತ್ಸ ಕಾರ್ಯಕ್ರಮ ನಿರೂಪಿಸಿದರು. ಪ್ರಭುದೇವ ಕಪ್ಪಗಲ್ಲು ಸಮ್ಮೇಳನದ ಸಂಕ್ಷಿಪ್ತ ವರದಿ ನೀಡಿದರು. ಪ್ರೊ.ಆರ್ ಭೀಮಸೇನ ವಂದಿಸಿದರು  ನಟರಾಜ ಧ್ವಜಾವತರಣ ಸಮ್ಮೇಳನ ಮುಕ್ತಾಯ ಸೂಚಿಸಿತು. ಸಮ್ಮೇಳನದ ಸವಿನೆನಪಿಗಾಗಿ  ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ, ಗದಗ ಅವರಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಪೂರ್ಣ ನಾಟಕವನ್ನು ಆಯೋಜಿಸಲಾಗಿತ್ತು. 


ಸುದ್ದಿ ಓದಿ