ವಿದ್ಯಾರ್ಥಿಗಳು ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಲಿ: ಅಧ್ಯಕ್ಷ ಭೀಮನಗೌಡ ಬರಗೂರು
ಲೋಕದರ್ಶನ ವರದಿ
ಮುದೇನೂರು 28: ಶಾಲಾ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಮಕ್ಕಳು ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಭೀಮನಗೌಡ ಬರಗೂರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
2021-22ಸಾಲಿನ ವಿದ್ಯಾ ವಿಕಾಸ್ ಯೋಜನೆಯಡಿ ಕುಷ್ಟಗಿ ತಾಲೂಕಿನ ಮುದೇನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ 8 ನೇ ತರಗತಿ, 9 ನೇ ತರಗತಿ, 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಉಚಿತ ಸಮವಸ್ತ್ರವನ್ನು ವಿತರಿಸಿ ಮಾತನಾಡಿದ ಅವರು ಮಕ್ಕಳು ತಮ್ಮ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನವಹಿಸಿ ಉನ್ನತ ಶಿಕ್ಷಣವನ್ನು ಪಡೆಯುವ ಮೂಲಕ ಸನ್ಮಾರ್ಗಿಗಳಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಪತ್ರಕರ್ತ ಚಂದ್ರಶೇಖರ ಕುಂಬಾರ್, ಮುಖ್ಯೋಪಾಧ್ಯಯರಾದ ವಸಂತ ಮಾಧವ್, ದೈಹಿಕ ಶಿಕ್ಷಕ ಪಿಡ್ಡನಗೌಡ ಹಳೇಗೌಡರ, ಸಿಆರ್‌ಪಿ ಸೋಮಲಿಂಗಪ್ಪ ಗುರಿಕಾರ್ ಹಾಗೂ ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.