‘ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದಲ್ಲಿ ರೂಢಿಸಿಕೊಳ್ಳಲಿ’
ಲೋಕದರ್ಶನ ವರದಿ
ಹೊಸಪೇಟೆ 26: ನಗರದ 1ನೇ ವಾರ್ಡ್‌ನ ಚಿತ್ತವಾಡ್ಗಿಯಲ್ಲಿರುವ ಆಕಾಶ ಪಿ.ಯು. ಕಾಲೇಜು ಹಾಗೂ ಜೆ.ಇ.ಇ. ಮತ್ತು ನೀಟ್ ಅಕಾಡೆಮಿಯ ಸಂಸ್ಥೆ ವತಿಯಿಂದ ದಿ. 26ರಂದು ಕಾಲೇಜಿನ ಸಂಭಾಗಣದಲ್ಲಿ ನೂತನ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಒರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಆಕಾಶ ವಿದ್ಯಾ ಸಂಸ್ಥೆಯ ಅಧ್ಯಕ್ಷ ಹೆಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ರವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಕೇವಲ ಅಂಕ ಗಳಿಸುವುದೊಂದೇ ಶಿಕ್ಷಣದ ಉದ್ದೇಶವಾಗಿರದೇ ವಾಸ್ತವ ಬದುಕಿಗೆ ಪೂರಕವಾಗಿರುವ ಸಂವಹನ ಕೌಶಲ್ಯ ಮತ್ತು ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದಲ್ಲಿ ರೂಢಿಸಿಕೊಳ್ಳಬೇಕು ಹಾಗೂ ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಪ್ರಗತಿ ಹೊಂದಿ ಸಂಸ್ಥೆಯ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಒಯ್ಯಬೇಕೆಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಮಹೇಶ ಕುಮಾರ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯೆ ನಮ್ಮನ್ನು ಪರಿಪೂರ್ಣರನ್ನಾಗಿಸುವುದಲ್ಲದೇ ಸುಸಂಸ್ಕೃತರಾಗಿ ಬಾಳುವಂತೆ ಪ್ರೇರೇಪಿಸುತ್ತದೆ, ಎರಡು ವರ್ಷಗಳ ಪದವಿ ಪೂರ್ವ ಶಿಕ್ಷಣ ಮುಂದಿನ ಭವಿಷ್ಯತ್ತಿಗೆ ಬುನಾದಿಯಾಗುವಂತೆ ಶ್ರಮಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಿ.ಇ.ಓ. ವೆಂಕಟೇಶ, ನಿರ್ದೇಶಕ ಅಯೂಬ್ ಖಾನ್, ಉಪ ಪ್ರಾಶುಂಪಾಲ ಮುಬೀನಾ, ಉಪನ್ಯಾಸಕ ನಾಗರಾಜ್ , ಅನ್ಸರ್ ಭಾಷಾ, ಪಣಿರಾಜ್ , ವಿಜಯ ಕುಮಾರ್, ಹಾಗೂ ಕಾಲೇಜಿನ ಸಿಬ್ಬಂದಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.