ಹೊರಹೊಮ್ಮಲಿ ಶೂರರ ಜಿಲ್ಲೆಯಾಗಿ ನಮ್ಮ ಬೈಲಹೊಂಗಲ: ಸಂತೋಷ ಗುರೂಜಿ
ಇಡೀ ರಾಜ್ಯದಲ್ಲಿ ಅತ್ಯಂತ ದೊಡ್ಡ ಜಿಲ್ಲೆಯೆಂಬ ಖ್ಯಾತಿಯನ್ನು ಹೊಂದಿರುವ ಸಕ್ಕರೆಯ ನಾಡು ನಮ್ಮ ಬೆಳಗಾವಿ. ಆದರೆ ಹೆಸರಿಗಷ್ಟೇ ದೊಡ್ಡ ಜಿಲ್ಲೆಯೆಂಬ ಹಣೆಪಟ್ಟಿ ಹೊತ್ತು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ಬರುವ ಅನುದಾನದಲ್ಲಿ ನಮ್ಮ ಜಿಲ್ಲೆಗೆ ಅನ್ಯಾಯವಾಗುತ್ತಿದೆ. 15 ತಾಲೂಕುಗಳು, 18 ಜನ ಶಾಸಕರು, 2 1/2 ಸಂಸದರು , 13415 ಚದರ ಕಿ.ಮೀ. ವಿಸ್ತೀರ್ಣ,2011 ರ ಜನಗಣತಿ ಪ್ರಕಾರ 47,79,661 ಜನಸಂಖ್ಯೆ ಪ್ರಸ್ತುತ ಅದು 55 ಲಕ್ಷ ಹತ್ತಿರ ಸಮೀಪಿಸುತ್ತದೆ.
28 ವರ್ಷಗಳ ಇತಿಹಾಸ ಹೊಂದಿರುವ ಜಿಲ್ಲಾ ವಿಭಜನೆ
1997 ಅಗಷ್ಟ 22 ರಂದು ನಡೆದ ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನದಂತೆ ಜಿಲ್ಲೆಯನ್ನು ಬೆಳಗಾವಿ, ಚಿಕ್ಕೋಡಿ ಹಾಗೂ ಗೋಕಾಕ ಎಂದು 3 ಜಿಲ್ಲೆಗಳಾಗಿ ವಿಭಜನೆ ಮಾಡಲಾಗಿತ್ತು. ಸರಕಾರದ ಈ ಒಂದು ತೀರ್ಮಾನಕ್ಕೆ ಕನ್ನಡಪರ ಸಂಘಟನೆಗಳು, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷರು ಶ್ರೀ ಅಶೋಕ ಚಂದರಗಿ ಹಾಗೂ ಮಾಜಿ ಮಹಾಪೌರರಾದ ದಿ. ಸಿದ್ಧನಗೌಡ ಪಾಟೀಲರು ಸರಕಾರದ ತೀರ್ಮಾನವನ್ನು ಖಂಡಿಸಿದರು. ಬೈಲಹೊಂಗಲ, ಸವದತ್ತಿ ಹಾಗೂ ರಾಮದುರ್ಗ ತಾಲೂಕಗಳ ಜನತೆಯ ವಿರೋದವು ತೀವ್ರವಾಗಿತ್ತು. ಆ ಸಂದರ್ಭದಲ್ಲಿ ಚಿಕ್ಕೋಡಿ ಮತ್ತು ಬೆಳಗಾವಿ ಎರಡೇ ಜಿಲ್ಲೆಗಳನ್ನಾಗಿ ಮಾಡಿದರೆ ಇದಕ್ಕೆ ಯಾರ ವಿರೋಧವು ಇದ್ದಿರಲಿಲ್ಲ.
ಗೋವಾ ರಾಜ್ಯಕ್ಕಿಂತ ದೊಡ್ಡದು ನಮ್ಮ ಬೆಳಗಾವಿ ಜಿಲ್ಲೆ
ವಿಸ್ತೀರ್ಣ ಹಾಗೂ ಜನಸಂಖ್ಯೆಯ ದೃಷ್ಟಿಯಿಂದ ನಮ್ಮ ಬೆಳಗಾವಿ ಜಿಲ್ಲೆ ಕೂಗಳತೆಯ ಹತ್ತಿರದಲ್ಲೆ ಇರುವ ಗೋವಾ ರಾಜ್ಯಕ್ಕಿಂತ ದೊಡ್ಡದಾಗಿದೆ. ಹಾಗಾಗಿ ನಮ್ಮ ರಾಜ್ಯ ಸರಕಾರ ಮತ್ತು ನಮ್ಮ ಬೆಳಗಾವಿ ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಮತ್ತು ಎಲ್ಲ ಜನಪ್ರತಿನಿಧಿಗಳು ಸೇರಿ ಇದೀಗ ಪ್ರಸ್ತುತ ವಿದ್ಯಮಾನ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಐದು ಜಿಲ್ಲೆಗಳನ್ನಾಗಿ ವಿಭಜಿಸುವುದು ಸೂಕ್ತವಾಗಿದೆ. ಬೆಳಗಾವಿ, ಚಿಕ್ಕೋಡಿ, ಬೈಲಹೊಂಗಲ, ಗೋಕಾಕ ಮತ್ತು ಅಥಣಿ ಎಂದು ಐದು ನೂತನ ಜಿಲ್ಲೆಗಳನ್ನಾಗಿ ಮಾಡಿದರೆ ಎಲ್ಲರನ್ನೂ ಸಮಾಧಾನ ಪಡಿಸಿದಂತಾಗುತ್ತದೆ. ಇದರಲ್ಲಿ ಬಾಗಲೋಟೆ ಮತ್ತು ವಿಜಯಪುರ ಜಿಲ್ಲೆಗಳಿಂದ ದೂರವಿರುವ ಮಹಾಲಿಂಗಪುರ, ತೇರದಾಳ, ಹಿಪ್ಪರಗಿ, ಸಾವಳಗಿ ಮೊದಲಾದ ಪ್ರದೇಶಗಳನ್ನು ನೂತನ ಗೋಕಾಕ ಹಾಗೂ ಅಥಣಿ ಜಿಲ್ಲೆಗಳಿಗೆ ಸೇರಿಸಬಹುದು.
ಜಿಲ್ಲಾ ವಿಭಜನೆ ಮಾಡುವಲ್ಲಿ ಮರೆಯದಿರಿ ನಮ್ಮ ಬೈಲಹೊಂಗಲ
ವೀರ ಶೂರರು, ಕ್ರಾಂತಿಕಾರರು ಹುಟ್ಟಿ ಬಂದ ನಾಡು ನಮ್ಮ ಬೈಲಹೊಂಗಲ. ಬೆಳವಡಿ ರಾಜ್ಯವನ್ನಾಳಿದ ರಾಜಾ ಈಶಪ್ರಭು, ಬೆಳವಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಮಲ್ಲಸರ್ಜ ದೇಸಾಯಿ, ಬೆಳವಡಿಯ ಬೊಮ್ಮಪ್ಪ ದೇಸಾಯಿ, ಶೂರ ಸಂಗೋಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಬೆಳವಡಿಯ ವಡ್ಡರ ಯಲ್ಲಣ್ಣ ಮೊದಲಾದ ಅಪ್ರತಿಮ ಕ್ರಾಂತಿಕಾರರ ಭೂಮಿ ನಮ್ಮ ಬೈಲಹೊಂಗಲ. ಬೈಲಹೊಂಗಲ ಹೆಸರನ್ನು ಕೈಬಿಟ್ಟು ಜಿಲ್ಲಾ ವಿಭಜನೆಯ ಜೇನುಗೂಡಿಗೆ ಕೈಹಾಕಿದರೆ ಅದು ಹೆಜ್ಜೇನು ಆಗಬಹುದು. ಬೈಲಹೊಂಗಲ ಈ ರೀತಿಯಾಗಿ ಎಂಟು ತಾಲೂಕುಗಳನ್ನು ಹೊಂದಿ ನೂತನ ಜಿಲ್ಲೆಯಾಗಲಿ.
1) ಬೈಲಹೊಂಗಲ 2) ಸವದತ್ತಿ 3) ರಾಮದುರ್ಗ 4) ಕಿತ್ತೂರು
5) ಯರಗಟ್ಟಿ 6) ಬೆಳವಡಿ 7) ನೇಸರಗಿ. 8) ಹುಲಕುಂದ.
ಈ ರೀತಿಯಾಗಿ ನಮ್ಮ ಬೃಹತ್ ಬೆಳಗಾವಿ ಜಿಲ್ಲೆಯನ್ನು ಐದು ನೂತನ ಜಿಲ್ಲೆಗಳಾಗಿ, ಹಾಗೂ ನಮ್ಮ ಬೈಲಹೊಂಗಲ ಉಪವಿಭಾಗವನ್ನು ಬೈಲಹೊಂಗಲ ಜಿಲ್ಲೆಯಾಗಿ ಎಂಟು ತಾಲೂಕುಗಳಾಗಿ ರಚಿಸಿ ಸರಕಾರ ಜಾಣ ನಡೆಯನ್ನು ನಡೆಯಬೇಕೆಂಬುದು ಬೈಲಹೊಂಗಲ ಉಪವಿಭಾಗದವರ ಆಶಯವಾಗಿದೆ.