ಮಾತೋಶ್ರೀ ಸುಕನ್ಯಾ ಅನಾಥಾಶ್ರಮ, ವೃದ್ಧಾಶ್ರಮಗಳು ಸ್ಫೂರ್ತಿ ತಾಣವಾಗಲಿ : ರಂಭಾಪುರಿ ಜಗದ್ಗುರು
ಬಾಳೆಹೊನ್ನೂರು 04: ವೃದ್ಧಾಶ್ರಮಗಳು ನೆಮ್ಮದಿ ಹಾಗೂ ಸ್ಫೂರ್ತಿದಾಯಕ ಆಶ್ರಯ ತಾಣಗಳಾಗಬೇಕು ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. ಮಹಂತಿಮಠದ ಸರಳ ವೇದಿಕೆಯಲ್ಲಿ ಚಮಕೇರಿಯ ಮಾತೋಶ್ರೀ ಸುಕನ್ಯಾ ಬಸಲಿಂಗಯ್ಯ ಹಿರೇಮಠ ಅನಾಥಾಶ್ರಮ ಮತ್ತು ವೃದ್ಧಾಶ್ರಮದ ಅಧ್ಯಕ್ಷ ಮಹಾದೇವ ಬಿರಾದಾರ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಾಗತಿಕ ಪರಿಸ್ಥಿತಿ ಮತ್ತು ಬಿಡುವಿಲ್ಲದ ಜೀವನ ಶೈಲಿಯಲ್ಲಿ ವಯೋವೃದ್ಧ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಸ್ಥಿತಿ ಎದುರಾಗಿದೆ.‘ತಂದೆ ತಾಯಿಯು ಕಷ್ಟಪಟ್ಟು ಮಕ್ಕಳನ್ನು ಸಾಕಿ ಶಿಕ್ಷಣ ಕೊಡಿಸಿ ಬೆಳೆಸಿರುತ್ತಾರೆ. ಆದರೆ, ಅದೇ ಮಕ್ಕಳು ಪೋಷಕರನ್ನು ಮನೆಯಿಂದ ಹೊರ ಕಳುಹಿಸಿ ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಇದರಿಂದ ಹಿರಿಯ ಜೀವಗಳ ಮನಸ್ಸಿಗೆ ಆಗುವ ನೋವಿನ ಪರಿವು ಮಕ್ಕಳಿಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಆ ನಿಟ್ಟಿನಲ್ಲಿ ಚಮಕೇರಿಯ ಮಹಾದೇವ ಬಿರಾದಾರ ಮಾಡುತ್ತಿರುವ ಅನಾಥಾಶ್ರಮ ಮತ್ತು ವೃದ್ಧಾಶ್ರಮವು ಸ್ಪೂರ್ತಿದಾಯಕ ತಾಣವಾಗಲಿ, ನೊಂದವರ, ಬೆಂದವರ ಗಟ್ಟಿನೆಲೆಯಾಗಿ ಹೊರಹೊಮ್ಮಲಿ ಎಂದು ಶುಭವ ಹಾರೈಸಿದರು.
ಸಿದ್ಧರಬೆಟ್ಟದ ಮಹಾಸ್ವಾಮಿಗಳು ಮಾತನಾಡಿ ವೃದ್ಧಾಶ್ರಮಗಳು ಹಿರಿಯ ನಾಗರೀಕರು ಒಟ್ಟಿಗೆ ವಾಸಿಸಲು ಇರುವ, ವಯಸ್ಸಾದವರು ಮಾನವರ ಜೀವಿತಾವಧಿಯನ್ನು ಸಮೀಪಿಸುತ್ತಾ ಅಥವಾ ಮೇಲುಗೈ ಮಾಡುವುದನ್ನು ವಯಸ್ಸನ್ನು ಉಲ್ಲೇಖಿಸುತ್ತಾರೆ. ಒಂದೊಳ್ಳೆಯ ಕಾರ್ಯವನ್ನು ಮಹಾದೇವ ಬಿರಾದಾರ ಮಾತೋಶ್ರೀ ಸುಕನ್ಯಾ ಬಸಲಿಂಗಯ್ಯ ಹಿರೇಮಠ ಅನಾಥಾಶ್ರಮ ಮತ್ತು ವೃದ್ಧಾಶ್ರಮದ ಮೂಲಕ ಮಾಡಲು ಹೊರಟಿರುವುದು ಸಂತಸ ತಂದಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಮಹಾದೇವ ಬಿರಾದಾರ ಜಗದ್ಗುರುಗಳನ್ನು ಸನ್ಮಾನಿಸಿ ಗೌರವಿಸಿದರು.