ಬಳ್ಳಾರಿ

ಕನ್ನಡಕ್ಕಾಗಿ ‘ಬಳ್ಳಾರಿ ಸದ್ದು’ ಮಾಡಲಿ : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ

ಕನ್ನಡಕ್ಕಾಗಿ ‘ಬಳ್ಳಾರಿ ಸದ್ದು’ ಮಾಡಲಿ : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ

ಬಳ್ಳಾರಿ 09: ನಾನಾ ಕಾರಣಗಳಿಗಾಗಿ ಸದ್ದು ಮಾಡುವ ಶ್ರೀಮಂತ ಇತಿಹಾಸ, ಪರಂಪರೆ ಹೊಂದಿರುವ ಬಳ್ಳಾರಿ ಜಿಲ್ಲೆಯು ಕನ್ನಡ ಪರಿಣಾಮಕಾರಿ ಅನುಷ್ಠಾನ ಮಾಡುವುದರ ಮೂಲಕ ಮಾದರಿ ಜಿಲ್ಲೆಯಾಗಿ ಸದ್ದು ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು ಹೇಳಿದರು. 

ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕನ್ನಡವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ನಮ್ಮೆಲ್ಲರ ಕರ್ತವ್ಯ;ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂಬುದನ್ನು ಅರಿತುಕೊಂಡು ಅಧಿಕಾರಿಗಳು ಕನ್ನಡ ಅನುಷ್ಠಾನ ಮಾಡಬೇಕು ಎಂದು ಹೇಳಿದ ಅವರು ಗಡಿ ಜಿಲ್ಲೆಯಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ಮಾದರಿಯಾಗಿ ಕನ್ನಡ ಅನುಷ್ಠಾನವಾಗಿದೆ ಎಂದು ಹೆಮ್ಮಯಿಂದ ಹೇಳುವ ರೀತಿಯಲ್ಲಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.ಕನ್ನಡ ಬೆಳೆಸುವ ನಿಟ್ಟಿನಲ್ಲಿ ಹೆಚ್ಚೆಚ್ಚು ಕೆಲಸ ಮಾಡುವ ಅಗತ್ಯವಿದೆ ಎಂದರು. 

ಕನ್ನಡ ಅನುಷ್ಠಾನದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿರುವುದು ಗಮನಕ್ಕಿದ್ದು,ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕ್ರಮವಹಿಸಲಿದೆ ಎಂಬ ಅಶ್ವಾಸನೆಯನ್ನು ಅವರು ಈ ಸಂದರ್ಭದಲ್ಲಿ ನೀಡಿದರು. 

ಕನ್ನಡದ ಬಗ್ಗೆ ಏನೇ ಸಮಸ್ಯೆಗಳಿದ್ದರೂ ನೇರವಾಗಿ ಪ್ರಾಧಿಕಾರಕ್ಕೆ ತಿಳಿಸಬಹುದು ಎಂದು ಹೇಳಿದ ಅವರು ಕನ್ನಡದ ಬದ್ಧತೆ,ಕನ್ನಡದ ಅಸ್ಮೀತೆಗೆ ಹಾಗೂ ಸರೋಜಿನಿ ಮಹೀಷಿ ವರದಿ ಅನುಷ್ಠಾನದಲ್ಲಿ ಪ್ರಾಧಿಕಾರ ಶ್ರಮಿಸುತ್ತಿದ್ದು, 1992ರಲ್ಲಿ ಸ್ಥಾಪನೆಯಾಗಿರುವ ಪ್ರಾಧಿಕಾರಕ್ಕೆ 30 ವರ್ಷ ತುಂಬಿರುವ ಈ ಶುಭ ಸಂದರ್ಭದಲ್ಲಿ  30 ವರ್ಷಗಳು ಸಾಗಿಬಂದ ದಾರಿ ಕುರಿತು ಪುಸ್ತಕ ಸಿದ್ದಪಡಿಸಲಾಗುತ್ತಿದ್ದು,ಅದನ್ನು ಜುಲೈ ಅಂತ್ಯದಲ್ಲಿ ಬಿಡುಗಡೆ ಮಾಡಲಾಗುವುದು;ಇದರ ಜೊತೆಗೆ 18 ಪುಸ್ತಕಗಳು ಬಿಡುಗಡೆಯಾಗಲಿವೆ. ನಾಲ್ಕು ಕಡೆ ವಿಚಾರ ಸಂಕಿರಣ ಏರಿ​‍್ಡಸಲಾಗುತ್ತಿದೆ ಎಂದರು. 

*ಆಡಳಿತದಲ್ಲಿ ಪದಬಳಕೆ ಸಮಸ್ಯೆಯೇ ‘ಪದಕಣಜ’ ಆ್ಯಪ್ ಬಳಸಿ:ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಆಡಳಿತದಲ್ಲಿ ಪದಬಳಕೆ ಸಮಸ್ಯೆಯಾದಲ್ಲಿ ಇತ್ತೀಚೆಗೆ ಸರಕಾರ ಸಿದ್ದಪಡಿಸಿದ ‘ಪದಕಣಜ’ ಆ್ಯಪ್ ಬಳಸಿ;ಅದರಲ್ಲಿ 6ಲಕ್ಷ ಪದಗಳಿದ್ದು,ಇತ್ತೀಚೆಗೆ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್‌.ನಾಗಾಭರಣ ಅವರು ತಿಳಿಸಿದರು. 

ನಿರ್ವಿಘ್ನವಾಗಿ ಕರ್ನಾಟಕದಲ್ಲಿ ಆಡಳಿತ ಭಾಷೆ ಬಳಸಲಿಕ್ಕೆ ತಂತ್ರಜ್ಞಾನದ ಬೆಂಬಲ ಸಿಗುತ್ತಿದೆ ಎಂದು ಹೇಳಿದ ಅವರು ತ್ರಿಭಾಷೆ ಸೂತ್ರವಿರುವುದರಿಂದ ಇಂಗ್ಲಿಷ್ ಸುತ್ತೋಲೆಯ ಜೊತೆಗೆ ನಮ್ಮ ಕನ್ನಡ ಭಾಷೆಯಲ್ಲಿಯೂ ಸುತ್ತೋಲೆ ತರ್ಜುಮೆ ಮಾಡಿ ಕಳುಹಿಸಿಕೊಡುವಂತೆ ತಮ್ಮ ಇಲಾಖೆಗೆ ಪತ್ರ ಬರೆಯಿರಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. 

*ಓಷಧಿಗಳ ಹೆಸರು ಮತ್ತು ವಿವರ ಕನ್ನಡದಲ್ಲಿರಲಿ: ರೋಗಿಗಳಿಗೆ ನೀಡುವ ಓಷಧಿಗಳ ಹೆಸರು ಮತ್ತು ವಿವರಗಳನ್ನು ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದ್ದು,ಇಂಗ್ಲಿಷ್ ಬದಲಿಗೆ ಕನ್ನಡದಲ್ಲಿಯೇ ನಮೂದಿಸಿ ನೀಡುವಂತೆ ಓಷಧ ನಿಯಂತ್ರಕರಿಗೆ ಪತ್ರ ಬರೆಯಿರಿ;ಅದರ ಪ್ರತಿಯನ್ನು ನಮ್ಮ ಪ್ರಾಧಿಕಾರಕ್ಕೂ ಕಳುಹಿಸಿಕೊಡಿ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ನಾಗಾಭರಣ್ ಅವರು ತಿಳಿಸಿದರು. 

ಪಶುಸಂಗೋಪನಾ ಇಲಾಖೆಯ ಓಷಧಿಗಳು ಸೇರಿದಂತೆ ವಿವಿಧ ಇಲಾಖೆಗಳಡಿ ಜನರಿಗೆ ದೊರೆಯುವ ಸೌಲಭ್ಯಗಳು ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು. 

ಬಳ್ಳಾರಿ ಜಿಲ್ಲೆಯಲ್ಲಿ 7 ಬೃಹತ್ ಕೈಗಾರಿಕೆಗಳಿದ್ದು,ಇಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಕೌಶಲ್ಯಭಿವೃದ್ಧಿ ತರಬೇತಿಗಳನ್ನು ಏರಿ​‍್ಡಸಿ ನಮ್ಮ ಯುವಕರನ್ನು ಸಜ್ಜುಗೊಳಿಸುವಂತೆ ಕೌಶಲ್ಯ ಅಧಿಕಾರಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು. 

*ಅಂಗಡಿಗಳ ನಾಮಫಲಕ ಮತ್ತು ವ್ಯವಹಾರ ಕನ್ನಡ ಬಳಕೆ: ಪ್ರಾಧಿಕಾರ ಅಧ್ಯಕ್ಷರ ಛಾಟಿ:ಬಳ್ಳಾರಿ ನಗರದಲ್ಲಿ ಅಂಗಡಿಗಳ ಮೇಲೆ ನಾಮಫಲಕ ಮತ್ತು ವ್ಯವಹಾರಗಳಲ್ಲಿ ಕನ್ನಡ ಕಡ್ಡಾಯ ಬಳಸುವಿಕೆಗೆ ಸಂಬಂಧಿಸಿದಂತೆ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್‌.ನಾಗಾಭರಣ್ ಅವರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಛಾಟಿ ಬಿಸಿದರು. 

ಅಂಗಡಿಗಳ ನಾಮಫಲಕಗಳ ಮೇಲೆ ಮತ್ತು ವ್ಯವಹಾರದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ನಮೂದಿಸುವಂತೆ ಸೂಚನೆ ನೀಡಬೇಕು; ಉದಾಸೀನತೆ ತೋರಿದ ಅಂಗಡಿಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಅವರು ಸೂಚಿಸಿದರು. 

ಟ್ರೇಡ್ ಲೈಸನ್ಸ್‌ ನವೀಕರಣ ಸಂದರ್ಭದಲ್ಲಿ ಅಂಗಡಿಗಳ ಮಾಲೀಕರಿಗೆ ಅವರ ಅಂಗಡಿಗಳ ಫೋಟೊಗಳು ಸಲ್ಲಿಸುವಂತೆ ತಿಳಿಸಬೇಕು;ಅದನ್ನು ಪರೀಶೀಲಿಸಿ ಅವರಿಗೆ ಅಗತ್ಯ ಕಟ್ಟುನಿಟ್ಟಿನ ಸೂಚನೆ ನೀಡಬೇಕು;ಫೋಟೊಗಳಲ್ಲಿ ಕನ್ನಡ ಭಾಷೆ ಬಳಕೆ ಅಷ್ಟಾಗಿ ಇರದಿದ್ದಲ್ಲಿ ಅಂತ ಟ್ರೇಡ್ ಲೈಸನ್ಸ್‌ ನವೀಕರಣಗೊಳಿಸಬಾರದು ಎಂದು ಹೇಳಿದರು. 

ಸಾರಿಗೆ,ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕನ್ನಡ ಭಾಷೆ ಬಳಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು ಕಂಡುಬಂದಿತು. ನ್ಯಾಯಾಲಯದ ಆದೇಶಗಳನ್ನು ಹೊರತುಪಡಿಸಿ ಉಳಿದ ಎಲ್ಲ ನಿತ್ಯದ ಕಚೇರಿ ವ್ಯವಹಾರಗಳು ಮತ್ತು ಸುತ್ತೋಲೆಗಳನ್ನು ಕನ್ನಡದಲ್ಲಿಯೇ ಹೊರಡಿಸಲಾಗುತ್ತಿರುವುದನ್ನು ಅಧಿಕಾರಿಗಳು ಸಭೆಗೆ ಸ್ಪಷ್ಟಪಡಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,  ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲು, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಹೇಶ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು. 


ಸುದ್ದಿ ಓದಿ