ಹೊಸ ವರುಷವನ್ನರಿತು ಬಾಳೋಣ ಒಂದು ಪರಿಕಲ್ಪನೆ
ನಮ್ಮ ಸನಾತನ ಧರ್ಮದ ಪ್ರಕಾರ ಯುಗಾದಿ ಹೊಸ ವರ್ಷದ ಆರಂಭದ ದಿನ. ಹೊಸ ವರುಷವಾಗಿ ಯುಗಾದಿಯ ಆಚರಣೆಗೂ, ಡಿಸೆಂಬರ್ 31ರ ರಾತ್ರಿಯ ಆಚರಣೆಗೂ ಅಜಗಜಾಂತರವಿದೆ. ಒಂದರಲ್ಲಿ ಭಾರತೀಯ ಸಂಸ್ಕೃತಿಯ ಸೊಗಡಿದ್ದರೆ ಇನ್ನೊಂದರಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ವಿಲಾಸೀ ಸೋಗಲಾಡಿತನವಿದೆ.
ಭಾರತೀಯ ಸಂಸ್ಕೃತಿಯ ಮೇಲೆ ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿಯ ಸವಾರಿ ಅತಿಯಾಗುತ್ತಿದೆ. ‘ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ ಎಂಬುದು ಋಗ್ವೇದದ ಮಾತು. ಅಂದರೆ ಉದಾತ್ತ ವಿಚಾರಗಳು ವಿಶ್ವದ ಎಲ್ಲ ಕಡೆಗಳಿಂದಲೂ ಬರಲಿ ಎಂದು ಪ್ರಾರ್ಥಿಸಿದ ಸಂಸ್ಕೃತಿ ನಮ್ಮದು. ಆದರೆ ಮನೆಯನ್ನು ಪ್ರವೇಶಿಸಿ ತಂಪಾಗಿ ಇಡಬೇಕಾದ ತಂಗಾಳಿ ಬಿರುಗಾಳಿಯಾಗಿ ಬೀಸಿ ನಮ್ಮ ಮನೆಯನ್ನು ಹಾರಿಸಿಕೊಂಡು ಹೋಗುವ ಪರಿಸ್ಥಿತಿ ಬರಬಾರದು. ಪಾಶ್ಚಾತ್ಯ ಸಂಸ್ಕೃತಿಯು ಸನಾತನ ಸಂಸ್ಕೃತಿಗೆ ಪೋಷಕವಾಗಬೇಕೇ ವಿನಾ ಮಾರಕವಾಗಬಾರದು. ಇಂದು ನಾವು ಪಾಶ್ಚಾತ್ಯರ ಒಳ್ಳೆಯ ರೂಢಿಗಳನ್ನು ಸ್ವೀಕರಿಸುವ ಬದಲು ಅವರ ಕೆಟ್ಟ ಅಂಶಗಳನ್ನು ಮಾತ್ರ ಅನುಸರಿಸುತ್ತಿದ್ದೇವೆ.
ಈ ನೆಲದಲ್ಲಿ ಹುಟ್ಟಿದ, ಬೆಳೆದು ಅರಳಿದ ಬಹುತೇಕ ಸಂಪ್ರದಾಯಗಳು, ಆಚರಣೆಗಳು ಮನುಷ್ಯನನ್ನು ಉತ್ತಮ ಸಂಸ್ಕಾರದೆಡೆಗೆ, ಉನ್ನತಿಯೆಡೆಗೆ ಕೊಂಡೊಯ್ಯುತ್ತವೆ. ಆದರೆ ನಾವಿಂದು ಪಾಶ್ಚಾತ್ಯ ಆಚರಣೆಗಳನ್ನು ಕೇವಲ ಕುರುಡಾಗಿ ಅನುಕರಿಸುತ್ತಿದ್ದೇವೆ; ಇದರಿಂದಲೇ ಅಧಃಪತನದತ್ತ ಜಾರುತ್ತಿದ್ದೇವೆ. ಉದಾಹರಣೆಗೆ ಜನವರಿ 1ರ ಹೊಸ ವರ್ಷದ ಆಚರಣೆಯ ನೆಪದಲ್ಲಿ ಡಿಸೆಂಬರ್ 31ರ ರಾತ್ರಿ ಈ ದೇಶದ ಬಹುತೇಕ ಜನರು ತಿಂದು, ಕುಡಿದು, ಕುಣಿದು ಕುಪ್ಪಳಿಸಿ ಸಂತೋಷವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಈ ರೀತಿಯ ತಾಮಸೀ ಸಂತೋಷವನ್ನು ಪಡೆಯುವ ಭರದಲ್ಲಿ, ಕುಡಿದ ಅಮಲಿನಲ್ಲಿ ಮಧ್ಯರಾತ್ರಿಯ ರಸ್ತೆ ಅಪಘಾತಗಳಾಗಿ ಎಷ್ಟೋ ಜನ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.
ಯಾವುದು ಉದಾತ್ತ?
ನಮ್ಮ ಸನಾತನಧರ್ಮದ ಪ್ರಕಾರ ಯುಗಾದಿಯು ಹೊಸ ವರ್ಷದ ಆರಂಭದ ದಿನ. ಯುಗಾದಿ ಅಂದರೆ ಸೃಷ್ಟಿಯ ಪ್ರಾರಂಭದ ದಿನ, ಯುಗದ ಆರಂಭದ ದಿನ, ಹೊಸ ಸಂವತ್ಸರದ ಮೊದಲ ದಿನ. ಯುಗದ ಆರಂಭದ ದಿನ ಆದದ್ದರಿಂದ ಅದನ್ನು ಯುಗಾದಿ ಎಂದು ಕರೆಯುತ್ತಾರೆ. ಬ್ರಹ್ಮನು ಚೈತ್ರ ಶುದ್ಧ ಪ್ರಥಮದಂದು ಸೂರ್ಯೋದಯ ಸಮಯಕ್ಕೆ ಸರಿಯಾಗಿ, ಸಮಗ್ರವಾಗಿ ಈ ಜಗತ್ತನ್ನು ಸೃಷ್ಟಿಸಿದನೆಂದು ಪುರಾಣಗಳು ಹೇಳುತ್ತವೆ. ಅದಕ್ಕಾಗಿ ಆ ದಿನ ನಮಗೆ ಹೊಸ ವರುಷದ ಆರಂಭದ ಹಬ್ಬದ ದಿನವೆನಿಸಿದೆ. ಹೊಸ ವರುಷವಾಗಿ ಯುಗಾದಿಯ ಆಚರಣೆಗೂ ಡಿಸೆಂಬರ್ 31ರ ರಾತ್ರಿಯ ಆಚರಣೆಗೂ ಅಜಗಜಾಂತರವಿದೆ. ಒಂದರಲ್ಲಿ ಭಾರತೀಯ ಸಂಸ್ಕೃತಿಯ ಸೊಗಡಿದ್ದರೆ ಇನ್ನೊಂದರಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ವಿಲಾಸೀ ಲೋಲುಪತೆಯಿದೆ.
ಉಂಡಿದ್ದೇ ಯುಗಾದಿ, ಮಿಂದಿದ್ದೇ ದೀಪಾವಳಿ, ಹೊಟ್ಟೆಗಿಲ್ಲದ್ದೇ ಏಕಾದಶಿ’ ಎಂಬುದಾಗಿ ಜನಪದರು ಯುಗಾದಿಯ ಬಗ್ಗೆ ಹಾಡಿದ್ದಾರೆ. ರೈತ ಬಾಂಧವರಿಗೆ ಈ ಹಬ್ಬದ ಸಮಯದಲ್ಲಿ ಕೃಷಿಕೆಲಸಕ್ಕೆ ಬಿಡುವಿರುತ್ತದೆ. ಈ ದಿನದವರೆಗೂ ಅವರು ಬೆಳೆದ ಬೇಳೆ-ಕಾಳುಗಳಿಂದ ಮನೆ-ಮನ ತುಂಬಿ ಸಂತಸದಿಂದಿರುತ್ತಾರೆ. ಈ ಸಂದರ್ಭದಲ್ಲೆ ಹೊಸ ಮಳೆಗಳು ಕೂಡಿಕೊಳ್ಳುತ್ತವೆ. ಅದಕ್ಕೆ ಬೇಸಾಯಗಾರರು ಹೊಲದಲ್ಲಿನ ಕೆಲಸ ನವೀಕರಿಸಿಕೊಳ್ಳುವ ಈ ದಿನವನ್ನು ಹೆಚ್ಚು ಬಳಸುತ್ತಾರೆ. ಚಾಂದ್ರಮಾನ ಕಾಲಗಣನೆಯ ಪ್ರಕಾರ ಮೇಷ ಸಂಕ್ರಮಣಕ್ಕೆ ಯುಗಾದಿ ಬರುತ್ತದೆ. ಇದನ್ನೇ ‘ವಿಷು’ ‘ಬಿಸು’ ‘ಪರ್ಬ’ ಎಂದೆಲ್ಲ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ಈ ‘ಬಿಸು’ ಪರ್ಬದ ದಿವಸ ಒಕ್ಕಲಿಗರು ಹಾಗೂ ಧನಿಕರಲ್ಲಿ ಉಳುವ ಭೂಮಿಯನ್ನು ಬಿಟ್ಟುಕೊಡುವ ಹಾಗೂ ನವೀಕರಿಸುವ ಪದ್ಧತಿಯಿತ್ತು. ಸಾಹುಕಾರನ ಸಾಲ ಸಂದಾಯ ಮಾಡಿ ರೈತ ಋಣಮುಕ್ತನಾಗುವ ಹೊಸ ವರ್ಷದ ಹಬ್ಬವಿದು. ಹೊಸ ವರ್ಷದ ಯುಗಾದಿಯಂದು ತಮ್ಮ ವ್ಯಾಪ್ತಿಯ ಭೂಮಿಯಲ್ಲಿ ಸ್ವಲ್ಪ ಭಾಗವನ್ನಾದರೂ ಉಳುಮೆ ಮಾಡುವ ವಾಡಿಕೆಯಿದೆ. ಯುಗಾದಿಯಂದು ಸಂಜೆ ಎಲ್ಲರೂ ಊರ ದೇವಾಲಯದಲ್ಲಿ ಸೇರಿ ಪಂಚಾಂಗಶ್ರವಣ ಮಾಡಿ, ಮುಂದಿನ ವರ್ಷದ ಮಳೆ-ಬೆಳೆ ಇತರ ಫಲಗಳನ್ನು ತಿಳಿಯುತ್ತಾರೆ. ಯುವಜನತೆ ಕ್ರೀಡೆ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸುತ್ತ ಮನರಂಜನೆ ಒದಗಿಸುತ್ತಾರೆ. ಹಾಗಾದರೆ ಮನಸ್ಸನ್ನು ಕೆರಳಿಸುವ ಡಿಸೆಂಬರ್ 31ರ ರಾತ್ರಿಯ ಹೊಸ ವರ್ಷಾಚರಣೆ ಉತ್ತಮವೋ, ಮನಸ್ಸನ್ನು ಅರಳಿಸುವ ಯುಗಾದಿಯಂದು ಹೊಸ ವರ್ಷಾಚರಣೆ ಉದಾತ್ತವೋ?
ವೈಜ್ಞಾನಿಕ ಕಾಲಗಣನೆ : ನಮ್ಮ ಪೂರ್ವಜರು ನಂಬಿದ ವರ್ತಮಾನಗಳು 9. ಭಾರತೀಯರು ಒಂಭತ್ತು ಬಗೆಯ ಕಾಲಗಣನಾ ಪದ್ಧತಿಯನ್ನು ಖಗೋಳವಿಜ್ಞಾನದ ರೀತಿಯಲ್ಲಿ ಆವಿಷ್ಕರಿಸಿದ್ದರು. ಚಾಂದ್ರಮಾನ, ಸೌರಮಾನ, ಸಾವನಮಾನ, ಪಿತೃಮಾನ, ದೇವಮಾನ, ನಾಕ್ಷತ್ರಮಾನ, ಬಾರ್ಹಸ್ಪತ್ಯಮಾನ, ಪ್ರಾಜಾಪತ್ಯಮಾನ ಮತ್ತು ಬ್ರಾಹ್ಮಮಾನ. ಇವುಗಳ ಪೈಕಿ ಚಾಂದ್ರಮಾನ, ಸೌರಮಾನಗಳು ಮಾನವನ ದೈನಂದಿನ ವ್ಯವಹಾರಕ್ಕೆ ಒದಗಿಬರುತ್ತವೆ. ಪ್ರಾಜಾಪತ್ಯಮಾನ, ಬ್ರಾಹ್ಮಮಾನ ಇತ್ಯಾದಿಗಳು ಬ್ರಹ್ಮಾಂಡ, ಮನ್ವಂತರಗಳಿಗೆ ಸಂಬಂಧಪಟ್ಟವುಗಳಾಗಿದ್ದು ಖಗೋಳವಿಜ್ಞಾನಕ್ಕೆ ಉಪಯುಕ್ತವಾದವುಗಳಾಗಿವೆ. 5116 ವರ್ಷಗಳ ಹಿಂದೆ ನವಗ್ರಹಗಳು ಒಂದೇ ರೇಖೆಯಲ್ಲಿ ಬಂದಿದ್ದವು. ಕೋಟ್ಯಂತರ ವರ್ಷಕ್ಕೊಮ್ಮೆ ನವಗ್ರಹಗಳು ಒಂದೇ ರೇಖೆಗೆ ಬರುತ್ತವ. 5116 ವರ್ಷಗಳ ಹಿಂದೆ ಎಲ್ಲಾ ಗ್ರಹಗಳು ಒಂದೇ ರೇಖೆಗೆ ಬಂದ ದಿನವೇ ಕಲಿಯುಗ ಆರಂಭ ಆದದ್ದು. ಅಂದೇ ಶ್ರೀಕೃಷ್ಣನು ಲೋಕವನ್ನು ಬಿಟ್ಟು ಹೋದದ್ದು.
ಭಾರತೀಯ ಕಾಲಗಣನೆ ಅತ್ಯಂತ ವೈಜ್ಞಾನಿಕವಾದದ್ದು. ಕಲ್ಪ, ಮನ್ವಂತರ, ಚತುರ್ಯುಗ, ಯುಗ, ಬ್ರಹ್ಮನ ಆಯುಷ್ಯ ಮುಂತಾದ ಕಾಲಗಣನೆಯನ್ನು ಭಾರತೀಯ ಶಾಸ್ತ್ರಗಳಲ್ಲಿ ಕಾಣಬಹುದು. ಯುಗಗಳು ನಾಲ್ಕು: ಕೃತಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗ ಎಂಬುದಾಗಿ. ಕಲಿಯುಗದ ಅವಧಿ 4,32,000 ವರ್ಷಗಳು. ಇದಕ್ಕಿಂತ ಎರಡುಪಟ್ಟು ದ್ವಾಪರಯುಗವೂ, ಕಲಿಯುಗದ ಮೂರುಪಟ್ಟು ತ್ರೇತಾಯುಗವೂ ಹಾಗೂ ನಾಲ್ಕುಪಟ್ಟು ಕೃತಯುಗದ ಅವಧಿಯೂ ಆಗಿರುತ್ತದೆ. ಹೀಗೆ ನಾಲ್ಕು ಯುಗಗಳ ಅವಧಿ 43,20,000 ವರ್ಷಗಳು. 1,000 ಚತುರ್ಯುಗ ಸೇರಿದರೆ ಒಂದು ಕಲ್ಪ. ಅಂದರೆ 432 ಕೋಟಿ ವರ್ಷಕ್ಕೆ ಒಂದು ಕಲ್ಪ. ಇದು ಬ್ರಹ್ಮನ ಒಂದು ಹಗಲು. ಆತನ ಒಂದು ದಿನ ಅಂದರೆ 864 ಕೋಟಿ ವರ್ಷಗಳು. ಆತನ ನೂರು ವರ್ಷ ಆಯುಷ್ಯ ಅಂದರೆ 3,11,04,000 ಕೋಟಿ ವರ್ಷ. ಅದರ ನಂತರ ಮಹಾಪ್ರಳಯ. ಈಗ ನಮ್ಮ ಭೂಮಿಯ ಆಯುಷ್ಯ ನೋಡೋಣ. 1000 ಚತುರ್ಯುಗಗಳು ಸೇರಿದರೆ ಒಂದು ಕಲ್ಪ ಆಗುತ್ತದೆ. 71 ಚತುರ್ಯುಗಗಳು ಸೇರಿದರೆ ಒಂದು ಮನ್ವಂತರವಾಗುತ್ತದೆ. ಈಗ 6 ಮನ್ವಂತರ ಮುಗಿದು 7ನೇ ಮನ್ವಂತರ ನಡೆಯುತ್ತಾ ಇದೆ. 7ನೇ ಮನ್ವಂತರದಲ್ಲಿ 27 ಚತುರ್ಯುಗಗಳು ಮುಗಿದು 28ನೇ ಚತುರ್ಯುಗದ ಕಲಿಯುಗದ 5116ನೇ ವರ್ಷದಲ್ಲಿ ಜೀವಿಸುತ್ತಿದ್ದೇವೆ. ಭಾರತೀಯ ಕಾಲಗಣನೆಯ ಪ್ರಕಾರ ಭೂಮಿಯ ಈಗಿನ ಆಯುಷ್ಯ 198 ಕೋಟಿ ವರ್ಷ. ವಿಜ್ಞಾನಿಗಳ ಪ್ರಕಾರ ಭೂಮಿಯ ಆಯುಷ್ಯ ಎಷ್ಟು? ಭೂಮಿಯ ಬಗ್ಗೆ ತಿಳಿಸುತ್ತಾ ಪ್ರಖ್ಯಾತ ವಿಜ್ಞಾನಿ ಸರ್ ಜೇಮ್ಸ್ ಜೀನ್ಸ್ ಎಂಬ ವಿಜ್ಞಾನಿ ಭೂಮಿಯು ಹುಟ್ಟಿ 200 ಕೋಟಿ ವರ್ಷವಾಗಿದೆಯೆಂದು ತಿಳಿಸಿದ್ದಾನೆ.
ಹೀಗೆ ಭಾರತೀಯ ಕಾಲಗಣನೆಗೂ ವೈಜ್ಞಾನಿಕ ಕಾಲಗಣನೆಗೂ ತುಂಬಾ ಸಾಮ್ಯತೆ ಇದೆ. ನಮ್ಮಲ್ಲಿ ಇನ್ನೂ ಕೆಲವು ಕಾಲಗಣನೆ ಪದ್ಧತಿಗಳು ಇವೆ. ವಿಕ್ರಮ ಶಕೆ, ಶಾಲಿವಾಹನ ಶಕೆ ಮುಂತಾದ ಪದ್ಧತಿಗಳು ಉತ್ತರ ಭಾರತದಲ್ಲಿ ರೂಢಿಯಲ್ಲಿವೆ. ಈ ದೇಶಕ್ಕೆ ವಿದೇಶೀಯರಾದ ಶಕರು, ಹೂಣರು ಆಕ್ರಮಣ ಮಾಡಿದಾಗ ಶಾಲಿವಾಹನ ಎಂಬ ರಾಜ ಮಣ್ಣಿನ ಗೊಂಬೆಗಳನ್ನು ಮಾಡಿ, ಅದರಲ್ಲಿ ಜೀವ ತುಂಬಿ, ಅವರನ್ನು ಸೈನಿಕರನ್ನಾಗಿ ಮಾಡಿ ಶಕರ ವಿರುದ್ಧ ಹೋರಾಟ ಮಾಡಿ ಜಯಗಳಿಸಿದ ಎಂಬುದಾಗಿ ಹೇಳುತ್ತಾರೆ. ಮಣ್ಣಿನ ಗೊಂಬೆ ಮಾಡಿ, ತದನಂತರ ಅದಕ್ಕೆ ಜೀವ ತುಂಬಿ ಹೋರಾಟ ಮಾಡಿದ ಎಂಬುದನ್ನು ಇಂದಿನ ವೈಜ್ಞಾನಿಕ ಯುಗದಲ್ಲಿ ಯಾರಾದರೂ ನಂಬುತ್ತಾರಾ? ಮಣ್ಣಿನ ಗೊಂಬೆಗೆ ಜೀವ ತುಂಬಿಸುವುದು ಎಂಬುದು ಒಂದು ಸಾಂಕೇತಿಕ ಛಾಯೆ. ಅದರ ನಿಜವಾದ ಒಳ ಅರ್ಥವೇನು? ನೈಜ ಮರ್ಮವೇನು?
ಕ್ರಿಸ್ತ ವೈಭವೀಕರಣ : ಜಗತ್ತಿನಲ್ಲಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನದಂದು ಹೊಸ ವರ್ಷ ಆಚರಣೆ ಮಾಡುತ್ತಾರೆ. ಬ್ಯಾಬಿಲೋನಿಯಾದಲ್ಲಿ ಮೇಷಸಂಕ್ರಾಂತಿ ಹತ್ತಿರದ ಅಮಾವಾಸ್ಯೆಯಂದು ಹೊಸ ವರ್ಷ ಆಚರಿಸಲಾಗುತ್ತಿತ್ತು. ಅಸ್ಸೀರಿಯಾದಲ್ಲಿ ತುಲಾಸಂಕ್ರಾಂತಿಯ ಸಮೀಪದ ಅಮಾವಾಸ್ಯೆ ದಿನದಂದು ಹೊಸ ವರ್ಷ ಪ್ರಾರಂಭವಾಗುತ್ತದೆ. ಈಜಿಪ್ಷಿಯನ್ನರಿಗೆ, ಪರ್ಷಿಯನ್ನರಿಗೆ ತುಲಾಸಂಕ್ರಾಂತಿಯಂದು, ಗ್ರೀಕರಿಗೆ ಮಕರಸಂಕ್ರಾಂತಿಯಂದು ಹೊಸ ವರ್ಷ ಆರಂಭವಾಗುತ್ತದೆ. ಮಹಮ್ಮದೀಯರು ಚಾಂದ್ರಮಾನ ಪದ್ಧತಿಯನ್ನು ಅನುಸರಿಸುತ್ತಾರೆ.
ಅದೇ ರೀತಿ ಕ್ರೈಸ್ತರಿಗೆ ಜನವರಿ 1ರಂದು ಹೊಸ ವರ್ಷ ಆರಂಭವಾಗುತ್ತದೆ. ಜನವರಿ 1ರಂದು ಹೊಸ ವರ್ಷ ಆಚರಣೆ ವೈಜ್ಞಾನಿಕವಾದುದಲ್ಲ. ಹಿಂದೆ ಅವರೂ ಮಾರ್ಚ್ 1ರಂದು ಹೊಸ ವರ್ಷ ಆಚರಿಸುತ್ತಿದ್ದರು. ಆದರೆ 13ನೇ ಪೋಪ್ ಆಗಿದ್ದ ಗ್ರೆಗರಿ ಎಂಬವನು ಯೋಚಿಸಿದ - ಯೇಸುಕ್ರಿಸ್ತ ಇಡೀ ಜಗತ್ತಿಗೆ ದೊಡ್ಡ ಮಹಾಪುರುಷ, ಆದ್ದರಿಂದ ಆತನ ಜನ್ಮದಿನದ ಆಧಾರದ ಮೇಲೆಯೇ ಹೊಸ ವರ್ಷ ಆರಂಭಿಸಬೇಕು ಎಂಬುದಾಗಿ. ಇದರಿಂದ ಪೋಪನ ಅನುಯಾಯಿಗಳು ಯೇಸುಕ್ರಿಸ್ತನ ಜನ್ಮದಿನವಾದ ಡಿಸಂಬರ್ 25 ಮುಗಿದ 6 ದಿನಗಳಲ್ಲಿ ಬರುವ ಜನವರಿ 1ನ್ನು ಹೊಸ ವರ್ಷವನ್ನಾಗಿ ಆಚರಿಸಲು ಪ್ರಾರಂಭಿಸಿದರು. ಹೀಗೆ ಯೇಸುಕ್ರಿಸ್ತನನ್ನು ವೈಭವೀಕರಿಸುವುದಕ್ಕಾಗಿ 1582ರಿಂದ ಗ್ರೆಗೋರಿಯನ್ ಕ್ಯಾಲೆಂಡರ್ ಆಚರಣೆಗೆ ಬಂತು. ರೋಮನ್ ಕ್ಯಾಥೊಲಿಕ್ ರಾಷ್ಟ್ರಗಳೆಲ್ಲ ಜನವರಿ ಒಂದನ್ನೇ ವರ್ಷಾರಂಭವೆಂದು ಸ್ವೀಕಾರ ಮಾಡಿದುದರ ಫಲವಾಗಿ ಇಂದು ಪ್ರಪಂಚದ ಬಹುತೇಕ ಕಡೆ ಜನವರಿ ಒಂದರಂದು ಹೊಸ ವರ್ಷ ಆಚರಣೆಯಲ್ಲಿದೆ.
ಹೀಗೆ ಪ್ರಕೃತಿಯನ್ನು ಆರಾಧಿಸುವ, ಜೀವನವನ್ನು ಬೆಳಗಿಸುವ, ಮನಸ್ಸನ್ನು ಅರಳಿಸುವ ಯುಗಾದಿಯನ್ನು ಹೊಸ ವರ್ಷವೆಂದು ಆಚರಿಸುವುದು ಶ್ರೇಷ್ಠವೋ? ತಿಂದು, ಕುಡಿದು, ಕುಪ್ಪಳಿಸುವ, ಮನಸ್ಸನ್ನು ಕೆರಳಿಸುವ ಡಿಸೆಂಬರ್ 31ರ ಮಧ್ಯರಾತ್ರಿಯ ಆಚರಣೆ ಸೂಕ್ತವೋ? ಎಂಬುದನ್ನು ಹೊಸ ವರ್ಷವನ್ನು ಸರಿಯಾಗಿ ಅರ್ಥೈಸಿಕೊಂಡು ಆಚರಿಸುವಂತಾಗಲಿ ಎಂದು ಸೌಜನ್ಯತಾ ಸಮಗ್ರ ನಾಗರೀಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸಹನಾ ರಾಘವೇಂದ್ರ ಪಾಲನಕರ ಸಮಸ್ತ ನಾಗರೀಕರಲ್ಲಿ ಹೊಸ ವರ್ಷಾಚರಣೆಯ ಶುಭಾಶಯಗಳನ್ನು ವ್ಯೆಕ್ತಪಡಿಸಿರುತ್ತಾರೆ.
- ಸಹನಾ ರಾಘವೇಂದ್ರ ಪಾಲನಕರ
ಗದಗ
- * * * -