ಮುಂದಗೋಡ

ಅನುಮತಿ ಇಲ್ಲದೇ ಇಟ್ಟಿಗೆ ತಯಾರಿಕೆ ಆರಂಭಿಸಿದರೆ ಕಾನೂನು ಕ್ರಮ: ತಹಶೀಲ್ದಾರ ಶಂಕರ ಗೌಡಿ

ಅನುಮತಿ ಇಲ್ಲದೇ ಇಟ್ಟಿಗೆ ತಯಾರಿಕೆ ಆರಂಭಿಸಿದರೆ ಕಾನೂನು ಕ್ರಮ: ತಹಶೀಲ್ದಾರ ಶಂಕರ ಗೌಡಿ

ಮುಂಡಗೋಡ 07 :ತಾಲೂಕಿನ ಅನಧಿಕೃತ ಇಟ್ಟಿಗೆ ಭಟ್ಟಿ ಮಾಲೀಕರಿಗೆ ಪರವಾನಗಿ ಇಲ್ಲದೆ ಇಟ್ಟಿಗೆ ಭಟ್ಟಿಗಳನ್ನು ತಯಾರು ಮಾಡದಂತೆ ತಹಶೀಲ್ದಾರ ಶಂಕರ ಗೌಡಿ ಮಂಗಳವಾರ ವಾಟ್ಸ್‌ ಆಪ್ ಗ್ರುಪ್‌ನಲ್ಲಿ ಸಂದೇಶ ಹಾಕುವ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.  

ಸಾಕಷ್ಟು ಲಾಭದಾಯಕವಾಗಿರುವ ಇಟ್ಟಿಗೆ ತಯಾರಿಕೆಯು ತಾಲೂಕಿನಲ್ಲಿ ವ್ಯಾಪಕವಾಗಿ ನಡೆದಿದ್ದು ಶೇ.95ರಷ್ಟು ಮಾಲೀಕರು ಅನಧಿಕೃತವಾಗಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಇಟ್ಟಿಗೆ ತಯಾರಿಸುವಲ್ಲಿ ನಿರತರಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾಗಿದ್ದ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಕೃಷಿಗಾಗಿ ಬಳಸಬೇಕಿದ್ದ ಭೂಮಿಯಲ್ಲಿ ಲಕ್ಷಾಂತರ ರೂ. ಇಟ್ಟಿಗೆ ತಯಾರಿಸಲಾಗುತ್ತಿದೆ. ಕೃಷಿ ಭೂಮಿಯ ಮಣ್ಣು ಅಗೆದು ಅಲ್ಲಿಯೇ ಇಟ್ಟಿಗೆ ತಯಾರಿಸಿ ಮಾರಾಟ ಮಾಡಲಾಗುತ್ತದೆ. ತಾಲೂಕಿನಲ್ಲಿ ತಯಾರಾಗುವ ಇಟ್ಟಿಗೆಗಳು ಅಕ್ರಮವಾಗಿ ಪಕ್ಕದ ಜಿಲ್ಲೆಗಳಾದ ಧಾರವಾಡ, ಹಾವೇರಿ ಜಿಲ್ಲೆಗಳಿಗೆ ರಫ್ತಾಗುತ್ತದೆ. ಕೃಷಿ ಭೂಮಿಯಲ್ಲಿ ಬೇಸಿಗೆ ಬೆಳೆ ಬೆಳೆಯುವ ಬದಲಾಗಿ ಅನಧಿಕೃತವಾಗಿ ಇಟ್ಟಿಗೆ ತಯಾರಿಕೆಗೆ ಬಳಕೆಯಾಗುತ್ತಿರುವುದು ಕಾನೂನು ಬಾಹಿರವಾಗಿದ್ದರೂ ಕ್ರಮ ಜರುಗಿಸುವವರು ಇರಲಿಲ್ಲ.  

ತಾಲೂಕಿನ ಸನವಳ್ಳಿ, ಮರಗಡಿ, ಓಣಿಕೇರಿ, ರಾಮಾಪುರ, ಸಿಂಗನಳ್ಳಿ, ಮಳಗಿ, ಪಾಳಾ, ಕಾತೂರ, ಹಿರೇಹಳ್ಳಿ, ಚಿಗಳ್ಳಿ, ಸಾಲಗಾಂವ, ಕರಗಿನಕೊಪ್ಪ, ಕಲಕೇರಿ, ಗುಂಜಾವತಿ, ನಂದಿಕಟ್ಟಾ, ಇಂದೂರ, ಹುನಗುಂದ, ಅರಶಿಣಗೇರಿ, ಕುಂದರಗಿ, ನ್ಯಾಸರ್ಗಿ, ಬಾಚಣಕಿ, ಚವಡಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಅನಧಿಕೃತ ಇಟ್ಟಿಗೆ ಭಟ್ಟಿಗಳು ಪ್ರತಿ ವರ್ಷ ತಪ್ಪದೇ ತಲೆಯೆತ್ತುತ್ತಲೇ ಇದ್ದವು. ಅನಧಿಕೃತ ಇಟ್ಟಿಗೆ ತಯಾರಕರ ಮುಂದೆ ಇರುವ ಕೆಲವಷ್ಟು ಅಧಿಕೃತ ಇಟ್ಟಿಗೆ ತಯಾರಕರು ಮಂಕಾಗಿ ಹೋಗಿದ್ದರು.  

ಸನವಳ್ಳಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಕೃಷಿ ಭೂಮಿಯಲ್ಲಿ 30ಕ್ಕೂ ಹೆಚ್ಚು ರೈತರು ಅಕ್ರಮವಾಗಿ ಇಟ್ಟಿಗೆ ಭಟ್ಟಿಗಳನ್ನು ಮಾಡುತ್ತಾ ಬಂದಿದ್ದರು. ಕಳೆದ ವರ್ಷ ಕೆಲವು ಸಾರ್ವಜನಿಕರು ಕೃಷಿ ಭೂಮಿಯಲ್ಲಿ ಅಕ್ರಮವಾಗಿ ಇಟ್ಟಿಗೆ ಭಟ್ಟಿಗಳನ್ನು ಮಾಡಿದ್ದಾರೆ ಎಂದು ದೂರಿದ್ದರು. ಅಂದಿನ ತಹಶೀಲ್ದಾರ ಅಕ್ರಮವಾಗಿ ಇಟ್ಟಿಗೆ ಭಟ್ಟಿಗಳನ್ನು ತಯಾರಿಸಿದ ರೈತರಿಗೆ ನೋಟೀಸ್ ಜಾರಿ ಮಾಡಿದ್ದರು. ಆ ವೇಳೆಯಲ್ಲಿ ಇದೊಂದು ವರ್ಷ ಅವಕಾಶ ನೀಡುವಂತೆ ಲಿಖಿತವಾಗಿ ನೋಟಿಸ್‌ಗೆ ಉತ್ತರಿಸಿದ್ದರು. ಹಿಂದಿನ ತಹಶೀಲ್ದಾರ ಶ್ರೀಧರ ಮುಂದಲಮನಿ ಅವರು ವರ್ಗಾವಣೆವಾಗುತ್ತಿದ್ದಂತೆಯೇ ಅಕ್ರಮವಾಗಿ ಇಟ್ಟಿಗೆ ಭಟ್ಟಿಗಳು ಮತ್ತೆ ಆರಂಭವಾಗಿದ್ದವು. ಈ ಹಿಂದೆ ಈಗಿನ ತಹಶೀಲ್ದಾರ ಶಂಕರ ಗೌಡಿ ಇಟ್ಟಿಗೆ ಭಟ್ಟಿಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದರೂ ಅಲ್ಲಿರುವ ಇಟ್ಟಿಗೆ ಭಟ್ಟಿಗಳನ್ನು ತೆರವುಗೊಳಿಸರಲಿಲ್ಲ. ಆದ್ದರಿಂದ ಜೂ.1ರಂದು ತಹಶೀಲ್ದಾರ ಶಂಕರ ಗೌಡಿ ಅವರು ಪೊಲೀಸ್ ಭದ್ರತೆಯಲ್ಲಿ ಇಟ್ಟಿಗೆ ಭಟ್ಟಿಗಳನ್ನು ತೆರವುಗೊಳಿಸಲು ಮುಂದಾಗಿದ್ದರು. ನಂತರ ಕೆಲವು ಗ್ರಾಮಸ್ಥರು 15 ದಿನಗಳೊಳಗಾಗಿ ಇಟ್ಟಿಗೆ ಭಟ್ಟಿಗಳನ್ನು ತೆರವುಗೊಳಿಸಿ ಕೃಷಿ ಚಟುವಟಿಕೆ ಆರಂಭಿಸುವುದಾಗಿ ಭರವಸೆ ನೀಡಿದ ನಂತರ ತಹಶೀಲ್ದಾರರು ಅಕ್ರಮವಾಗಿ ಇಟ್ಟಿಗೆ ಭಟ್ಟಿಗಳನ್ನು ಮಾಡುತ್ತಿದ್ದ 30 ಜನ ರೈತರಿಗೆ ನೋಟೀಸ್ ಜಾರಿ ಮಾಡಿ ಉತ್ತರ ಪಡೆದಿದ್ದರು.  

ತಾಲೂಕಿನಲ್ಲಿ ಯಾವುದೇ ಇಟ್ಟಿಗೆ ಭಟ್ಟಿಗಳಿಗೆ ಅಧಿಕೃತ ಪರವಾನಗಿ ಇರುವುದಿಲ್ಲ. ಅನುಮತಿ ಇಲ್ಲದೇ ಯಾರಾದರೂ ಇಟ್ಟಿಗೆ ತಯಾರಿಕೆ ಆರಂಭ ಮಾಡಿದರೆ ಕಾನೂನು ನಿಯಮಗಳ ಅನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪತ್ರಕರ್ತರು ಮತ್ತು ಅಧಿಕಾರಿಗಳು ಇರುವ ವಾಟ್ಸ್‌ ಆಪ್ ಗ್ರುಪ್‌ನಲ್ಲಿ ತಹಶೀಲ್ದಾರ ಶಂಕರ ಗೌಡಿ ಸಂದೇಶ ಹಾಕಿದ್ದಾರೆ. 


ಸುದ್ದಿ ಓದಿ