ಬಳ್ಳಾರಿ

ಎತ್ತಿನಬೂದಿಹಾಳ್‌ದಲ್ಲಿ ಕಾನೂನು ಅರಿವು-ನೆರವು, ಭ್ರಷ್ಟಾಚಾರ ನಿಗ್ರಹ ಜಾಗೃತಿ ಕಾರ್ಯಕ್ರಮ

ಎತ್ತಿನಬೂದಿಹಾಳ್‌ದಲ್ಲಿ ಕಾನೂನು ಅರಿವು-ನೆರವು, ಭ್ರಷ್ಟಾಚಾರ ನಿಗ್ರಹ ಜಾಗೃತಿ ಕಾರ್ಯಕ್ರಮ

ಬಳ್ಳಾರಿ 02: ಭ್ರಷ್ಟಾಚಾರ ನಿಗ್ರಹದಳ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ತಾಲೂಕಿನ ಎತ್ತಿನಬೂದಿಹಾಳ್ ಗ್ರಾಮದಲ್ಲಿ ಸೋಮವಾರ ಕಾನೂನು ಅರಿವು-ನೆರವು ಮತ್ತು ಭ್ರಷ್ಟಾಚಾರ ನಿಗ್ರಹ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಎಸ್‌.ಎಚ್‌.ಪುಷ್ಪಾಂಜಲಿದೇವಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾನೂನು ಅರಿವು ಮತ್ತು ಬಾಲ್ಯವಿವಾಹದ ಕುರಿತು, ಆಸ್ತಿಗಳ ತಕರಾರುಗಳ ಬಗ್ಗೆ ಹಾಗೂ ಕಾನೂನಿನ ಹಕ್ಕುಗಳ ಕುರಿತು ಸವಿವರವಾಗಿ ಸಾರ್ವಜನಿಕರಿಗೆ ಮನ ಮುಟ್ಟುವಂತೆ ಹೇಳಿದರು. ಶಿಕ್ಷಣ ಪಡೆಯುವುದರ ಮೂಲಕ ಕಾನೂನು ತಿಳಿದುಕೊಳ್ಳುವುದರ ವಿಷಯದ ಕುರಿತು ಸಹ ವಿವರವಾಗಿ ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಇನ್ಸ್‌ಪೆಕ್ಟರ್ ಫ್ರಭುಲಿಂಗಯ್ಯ ಹಿರೇಮಠ ಅವರು ಭ್ರಷ್ಟಾಚಾರ ವಿಚಾರದ ಬಗ್ಗೆ ಹಾಗೂ ಕಚೇರಿಯಲ್ಲಿ ಯಾವುದೇ ಕೆಲಸಗಳು ಬಾಕಿ ಇರದಂತೆ ಎಲ್ಲಾ ಕೆಲಸಗಳನ್ನು ಸಕಾಲದಲ್ಲಿ ಯಾವ ರೀತಿ ಮಾಡಬೇಕು ಎಂಬುದರ ಕುರಿತು ಹಾಗೂ ಭ್ರಷ್ಟಾಚಾರ ನಿರ್ಮೂಲನೆಯನ್ನು ಮಾಡಲು ಅಧಿಕಾರಿಗಳಲ್ಲಿ ಯಾವ ರೀತಿ ಪ್ರಶ್ನೆ ಮಾಡಬೇಕು ಮತ್ತು ಕಾನೂನಿನ ಅಡಿಯಲ್ಲಿ ಇರುವ ಅವಕಾಶಗಳನ್ನು ಕುರಿತು ಸಾರ್ವಜನಿಕರಿಗೆ ತಿಳಿಸಿದರು. 

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಕೀಲ ಸುಧಾಕರ್,ಗ್ರಾಪಂ ಉಪಾಧ್ಯಕ್ಷ ಅಕ್ಕಿ ಶಿವಕುಮಾರಗೌಡ ಮಾತನಾಡಿದರು. 

ಈ ಸಂದರ್ಭದಲ್ಲಿ ಪಿಡಿಒ ಪ್ರಭಾಕರ, ಗ್ರಾಪಂ ಅಧ್ಯಕ್ಷೆ ತಿಮ್ಮಕ್ಕ, ಗ್ರಾಪಂ ಸದಸ್ಯರು, ಗ್ರಾಪಂ ಸಿಬ್ಬಂದಿ ವರ್ಗದವರು, ಶಿಕ್ಷಕರು,ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಸಹಾಯಕರು ಹಾಗೂ ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ