ಜಂಗಮ ಜಾಗೃತಿ ಅಭಿಯಾನಕ್ಕೆ ಚಾಲನೆ
ತಾಳಿಕೋಟಿ: ತಾಲೂಕಿನ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿರುವ ಜಂಗಮ ಸಮಾಜದ ಬಾಂಧವರನ್ನು ಧರ್ಮದ ತಳಹದಿಯ ಮೇಲೆ ಸಂಘಟಸಿ ಸಂಸ್ಕಾರವಂತರನ್ನಾಗಿ ಮಾಡುವ ಉದ್ದೇಶದಿಂದ ನಾನು ಜಂಗಮ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದೇನೆ ಎಂದು ಜ್ಯೋತಿಷ್ಯರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕೊಡಗಾನೂರ, ನಾವದಗಿ, ಅಸ್ಕಿ, ಬನ್ನಟ್ಟಿ, ಬೆಕಿನಾಳ ಹಾಗೂ ಗೊಟಖಂಡ್ಕಿ ಗ್ರಾಮಗಳಲ್ಲಿ ಜಂಗಮ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಂಗಮ ಸಮಾಜಕ್ಕೆ ತನ್ನದೇ ಆದ ಧಾರ್ಮಿಕ ಶಿಷ್ಟಾಚಾರಗಳಿವೆ ಅದನ್ನು ನಾವೆಲ್ಲರೂ ಚಾಚು ತಪ್ಪದೆ ಪಾಲಿಸುವಂತಾಗಬೇಕು. ಜಂಗಮರು ಯಾವುದೇ ರೀತಿಯ ಕೆಟ್ಟ ಅಭ್ಯಾಸಗಳ ದಾಸರಾಗಬಾರದು ಉನ್ನತ ನೈತಿಕತೆಯೊಂದಿಗೆ ಬದುಕಲು ಪ್ರಯತ್ನಿಸಬೇಕು. ಸಂಘಟಿತ ಬದುಕು ನಡೆಸಿ ಸಂಘಟನೆಯಲ್ಲಿ ದೊಡ್ಡ ಶಕ್ತಿ ಇದೆ. ಪ್ರತಿ ಗ್ರಾಮದಲ್ಲೂ ಜಂಗಮ ಸಮಾಜದ ಸಂಘಟನೆ ಮಾಡಿ ಅವರನ್ನು ಸಂಸ್ಕರಿಸುವಂಥಹ ಕೆಲಸ ಮಾಡಲಾಗುವುದು ಇದಕ್ಕೆ ನಿಮ್ಮೆಲ್ಲರ ಸಹಕಾರ ನಮಗೆ ಬೇಕು ಎಂದರು.
ಈ ಸಮಯದಲ್ಲಿ ನಾವದಗಿ ಹಿರೇಮಠದ ರಾಜೇಂದ್ರ ಒಡೆಯರ ಮಹಾಸ್ವಾಮಿಗಳು, ಅಸ್ಕಿ ಹಿರೇಮಠದ ವಿರುಪಾಕ್ಷ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.