ದಿ.ಪುನೀತ ಪುಣ್ಯಸ್ಮರಣೆ: ಅಮ್ಮನವರಿಗೆ ವಿಶೇಷ ಪೂಜೆ
ಅಂಗವಾಗಿ ಪಟ್ಟಣದ ಮುರಗೋಡ ರಸ್ತೆಯ ದುರ್ಗಾಮಾತಾ ಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರಿಂದ ಅಮ್ಮನವರಿಗೆ ವಿಶೇಷ ಪೂಜೆ ಅಭಿಷೇಕ
ಬೈಲಹೊಂಗಲ 29: ದಿ.ಪುನೀತ ರಾಜಕುಮಾರ ಅವರ ಪುಣ್ಯಸ್ಮರಣೆ ಅಂಗವಾಗಿ ಪಟ್ಟಣದ ಮುರಗೋಡ ರಸ್ತೆಯ ದುರ್ಗಾಮಾತಾ ಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರಿಂದ ಅಮ್ಮನವರಿಗೆ ವಿಶೇಷ ಪೂಜೆ ಅಭಿಷೇಕ ನೆರವೇರಿದವು.
ಧರ್ಮದರ್ಶಿ ಡಾ.ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ ಮಾತನಾಡಿ, ಪುನೀತ ರಾಜಕುಮಾರ ಅವರು ತಮ್ಮ ಸರಳ ಸಜ್ಜನಿಕೆ, ಹೃದಯ ವೈಶಾಲ್ಯ, ಸಮಾಜ ಸೇವೆ ಹಾಗೂ ಸಿನಿಮಾಗಳ ಮೂಲಕ ಅಸಂಖ್ಯಾತ ಮನಸ್ಸು ಗೆದ್ದಿದ್ದರು. ಅವರು ನಮ್ಮೆಲ್ಲರೊಳಗೊಂದಾಗಿ ಇರಬೇಕೆಂದರೆ, ಅವರಂತೆ ನಾವಾಗಬೇಕು; ಅವರಂತೆ ಚಿಂತಿಸಬೇಕು, ಅವರ ಆದರ್ಶಗಳನ್ನು ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬೇಕು. ಅದೇ ನಾವು ಆ ಅಪರೂಪದ ನಟನಿಗೆ ಸಲ್ಲಿಸುವ ಗೌರವದ ಶ್ರದ್ಧಾಂಜಲಿ, ದಕ್ಷಿಣ ಭಾರತದಲ್ಲಂತೂ ಲಕ್ಷಾಂತರ ಹೃದಯಗಳು ಪುನೀತ್ಗಾಗಿ ಮರುಗುತ್ತಿವೆ. ಅಷ್ಟರ ಮಟ್ಟಿಗೆ ಅಪ್ಪು ಅಗಲಿಕೆಯ ನೋವು ಜನರನ್ನು ಇನ್ನೂ ಬಾಧಿಸುತ್ತಲೇ ಇದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದರು.
ಬಸನಗೌಡ ಪಾಟೀಲ, ವೀರನಗೌಡ ಪಾಟೀಲ, ಪ್ರಶಾಂತ ಶಾಸ್ತ್ರಿ, ಬಸಯ್ಯ ಶಾಸ್ತ್ರಿ ಹಾಗೂ ದೇವಸ್ಥಾನದ ಸದ್ಭಕ್ತರು ಇದ್ದರು.