ವಿಜಯಪುರ

ಪ್ರಜಾಸೌಧಕ್ಕೆ ಭೂದಾನ: ದಾನಿಗಳಿಗೆ ಸಚಿವರಿಂದ ಸನ್ಮಾನ

ಪ್ರಜಾಸೌಧಕ್ಕೆ ಭೂದಾನ: ದಾನಿಗಳಿಗೆ ಸಚಿವರಿಂದ ಸನ್ಮಾನ


ದೇವರಹಿಪ್ಪರಗಿ 21: ತಾಲೂಕು ಆಡಳಿತದ ವತಿಯಿಂದ ನಿರ್ಮಾಣಗೊಳ್ಳಲಿರುವ ಪ್ರಜಾಸೌಧ ಕಟ್ಟಡಕ್ಕಾಗಿ ಸುಮಾರು 3 ಎಕರೆ ಜಮೀನು ಭೂದಾನ ಮಾಡಿದ ದೇವರಹಿಪ್ಪರಗಿ ತಾಂಡಾ ಗ್ರಾಮದ ಗಣ್ಯ ಉದ್ದಿಮೆದಾರ ಹಾಗೂ ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಈಶ್ವರ ಭೀಲು ಚವ್ಹಾಣ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಿಂಗನಗೌಡ ರಾಮನಗೌಡ ಪಾಟೀಲ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸನ್ಮಾನಿಸಿ ಗೌರವಿಸಿದರು.

ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಪ್ರಜಾಸೌಧ ಕಟ್ಟಡದ ಭೂಮಿಪೂಜೆ ಹಾಗೂ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಭೂದಾನಿಗಳನ್ನು ಸನ್ಮಾನಿಸಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ ಹಾಗೂ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಸಾರ್ವಜನಿಕ ಸೇವೆಗೆ ಅಗತ್ಯವಿರುವ ಪ್ರಜಾಸೌಧ ನಿರ್ಮಾಣಕ್ಕೆ ಭೂಮಿ ದಾನ ಮಾಡಿರುವುದು ಸಮಾಜಮುಖಿ ಕಾರ್ಯವಾಗಿದೆ.

ದಾನಿಗಳ ಸೇವಾ ಮನೋಭಾವ ಶ್ಲಾಘನೀಯ ಎಂದರು. ಸರ್ಕಾರಿ ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ದಾನ ಮಾಡಿದ ದಾನಿಗಳ ಕಾರ್ಯವನ್ನು ಮೆಚ್ಚಿ ಯುವ ಮುಖಂಡ ಹಾಗೂ ಬಂಜಾರ ಸಮಾಜದ ತಾಲೂಕು ಘಟಕದ ಉಪಾಧ್ಯಕ್ಷ ಸುರೇಶ ಚವ್ಹಾಣ ಮಾತನಾಡಿ, ಸಾರ್ವಜನಿಕ ಹಿತದೃಷ್ಟಿಯಿಂದ ಭೂಮಿ ದಾನ ಮಾಡಿರುವುದು ಸಮಾಜಕ್ಕೆ ಮಾದರಿಯಾಗಿದೆ. ಭೂದಾನಿಗಳ ಸೇವಾ ಮನೋಭಾವವನ್ನು ಎಲ್ಲರೂ ಗೌರವಿಸಬೇಕು ಎಂದರು.  ಕಾರ್ಯಕ್ರಮದಲ್ಲಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ತಹಶೀಲ್ದಾರ್ ನಿಂಗಣ್ಣ ಬಿರಾದಾರ, ಶ್ರೀಗಳು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ