ಡಾ. ಡಿ.ವೈ. ಪಾಟೀಲರ ನಿಧನಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ

ಡಾ. ಡಿ.ವೈ. ಪಾಟೀಲರ ನಿಧನಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ  Lakshmi Hebbalkar condoles the demise of Dr. D.Y. Patil


ಕೊಲ್ಲಾಪುರ, ಆ. 23: ಮಹಾರಾಷ್ಟ್ರದ ಹಿರಿಯ ನಾಯಕ, ಮಾಜಿ ರಾಜ್ಯಪಾಲ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಡಿ.ವೈ. ಪಾಟೀಲ ಅವರ ನಿಧನದ ಹಿನ್ನೆಲೆಯಲ್ಲಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭಾನುವಾರ ಕೊಲ್ಲಾಪುರದಲ್ಲಿರುವ ಡಾ. ಪಾಟೀಲ ಅವರ ನಿವಾಸಕ್ಕೆ ಭೇಟಿ ನೀಡಿ, ಮೃತರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದರು.  

ನಂತರ ಡಾ. ಡಿ.ವೈ. ಪಾಟೀಲ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಸತೇಜ್ (ಬಂಟಿ) ಪಾಟೀಲ ಮತ್ತು ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ದುಃಖದ ಸಂದರ್ಭದಲ್ಲಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಲಕ್ಷ್ಮೀ ಹೆಬ್ಬಾಳ್ಕರ್, ಡಾ. ಪಾಟೀಲ ಅವರ ಅಗಲಿಕೆಯಿಂದ ಉಂಟಾಗಿರುವ ನೋವಿನಲ್ಲಿ ತಾವು ಹಾಗೂ ತಮ್ಮ ಕುಟುಂಬವೂ ಭಾಗಿಯಾಗಿರುವುದಾಗಿ ತಿಳಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, “ಸರಳತೆ, ಸಜ್ಜನಿಕೆ ಹಾಗೂ ಮಾನವೀಯ ಮೌಲ್ಯಗಳಿಗೆ ಹೆಸರಾಗಿದ್ದ ಡಾ. ಡಿ.ವೈ. ಪಾಟೀಲ ಅವರು ತಮ್ಮ ಜೀವನವನ್ನು ಸಮಾಜ ಸೇವೆ ಹಾಗೂ ಜನಹಿತ ಕಾರ್ಯಗಳಿಗೆ ಮುಡಿಪಾಗಿಟ್ಟಿದ್ದರು. ಶಿಕ್ಷಣ, ಸಮಾಜಸೇವೆ, ರಾಜಕೀಯ ಹಾಗೂ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಅಪಾರ ಹಾಗೂ ಸ್ಮರಣೀಯ,” ಎಂದು ಹೇಳಿದರು.  

ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ  

ಶಿಕ್ಷಣ ಕ್ಷೇತ್ರದಲ್ಲಿ ಡಾ. ಪಾಟೀಲ ಅವರು ಸಲ್ಲಿಸಿದ ಸೇವೆಯನ್ನು ವಿಶೇಷವಾಗಿ ಸ್ಮರಿಸಿದ ಅವರು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಡಾ. ಪಾಟೀಲ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.  

ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿದ್ದ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.  

“ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದ ಡಾ. ಡಿ.ವೈ. ಪಾಟೀಲ ಅವರ ನಿಧನವು ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲ, ಸಾರ್ವಜನಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೂ ತುಂಬಲಾರದ ನಷ್ಟವಾಗಿದೆ. ಅವರ ಸೇವೆ, ಸರಳತೆ ಹಾಗೂ ಸಮಾಜಮುಖಿ ಚಿಂತನೆಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಲಿವೆ,” ಎಂದು ಅವರು ತಿಳಿಸಿದರು.  

ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಡಾ. ಪಾಟೀಲ ಅವರು ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದರು. ರಾಜಕೀಯದ ಜೊತೆಗೆ ಶಿಕ್ಷಣ ಹಾಗೂ ಸಮಾಜಸೇವೆಗೆ ಹೆಚ್ಚಿನ ಆದ್ಯತೆ ನೀಡಿದ್ದ ಅವರು ಜನಸಾಮಾನ್ಯರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಮರಿಸಿದರು.  

ಡಾ. ಡಿ.ವೈ. ಪಾಟೀಲ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಹಾಗೂ ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಅವರು ಪ್ರಾರ್ಥಿಸಿದರು.  ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಸೇರಿದಂತೆ ಪಾಟೀಲ ಕುಟುಂಬದ ಆಪ್ತರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.