ಹೊಳಗುಂದಿ ಮಳೆಯ ಕೊರತೆ: ಮೆಕ್ಕೆಜೋಳ ಬೆಳೆ ನಾಶಪಡಿಸಿದ ರೈತರು
ಲೋಕದರ್ಶನ ವರದಿ
ಹೂವಿನಹಡಗಲಿ 22: ಕಳೆದ ಒಂದು ತಿಂಗಳಿಂದ ಮಳೆ ಕೊರತೆಯಿಂದ ಮುಂಗಾರಿನ ಮೇಲೆ ಬರದ ಕಾರ್ಮೋಡ ಆವರಿಸಿದ್ದು,ಮಳೆ ಕೈಕೊಟ್ಟಿದ್ದರಿಂದ ತಾಲೂಕಿನ, ಹೊಳಗುಂದಿ ಗ್ರಾಮದಲ್ಲಿ ಬಹುತೇಕ ರೈತರು ಮೆಕ್ಕೆಜೋಳ ಬೆಳೆ ನಾಶಕ್ಕೆ ಮುಂದಾಗಿದ್ದಾರೆ.ಈಗಾಗಲೇ 24ರಿಂದ 30 ಎಕರೆ ಮೆಕ್ಕೆಜೋಳ ಮಳೆ ಕೊರತೆಯಿಂದ ಹಳದಿ ರೋಗ ಕಾಣಿಸಿಕೊಂಡು ಬೆಳೆ ಕುಂಠಿತವಾಗಿದ್ದರಿಂದ ನಾಶಪಡಿಸಿದ್ದಾರೆ. ಇದರಿಂದ ರೈತರು ಬೆಳೆಯಿಲ್ಲದೆ ಲಕ್ಷಾಂತರ ರೂ.ನಷ್ಟವಾಗಿದೆ. ರೈತರು ಇದೀಗ ಮುಂಗಾರು ಬೆಳೆಯನ್ನು ನಾಶಪಡಿಸುತ್ತಿದ್ದಾರೆ.
ತಾಲೂಕಿನ ಹೊಳಗುಂದಿ ಗ್ರಾಮದ ಪ್ರಗತಿ ಪರ ರೈತರಾದ ಗೌಡ್ರು ಗುರುವಪ್ಪ ತನ್ನ 16 ಎಕರೆ , ಸಣ್ಣಸ್ವಾಮಿಗಳ ಅವರಿಗೆ ಸೇರಿದ 8ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು,ಆರಂಭದಲ್ಲಿ ಸ್ವಲ್ಪ ಮಳೆಯಾಗಿದ್ದು ನಂತರ ಮಳೆ ಕೊರತೆಯಿಂದ ಬಾಡುತ್ತಿದ್ದು, ಇಳುವರಿ ಕುಂಠಿತವಾಗುವ ಲಕ್ಷಣಗಳನ್ನು ಕಂಡ ರೈತರು ತನ್ನ ಹೊಲದಲ್ಲಿ ಬೆಳೆದ ನಿಂತಿರುವ ಮೆಕ್ಕೆಜೋಳ ಬೆಳೆಯನ್ನು ಶನಿವಾರ ನಾಶಪಡಿಸಿ,ಮತ್ತೆ ಬಿತ್ತನೆಗಾಗಿ ಜಮೀನನ್ನು ಸಜ್ಜು ಮಾಡುತ್ತಿದ್ದಾನೆ.
ಮಳೆ ಕೊರತೆಯಿಂದ ಬೆಳೆಗಳು ಕುಂಠಿತವಾಗಿವೆ, ಕೆಲ ಬೆಳೆಗಳು ಒಣಗುತ್ತಿವೆ. ಈಗಾಗಲೇ ಪ್ರತಿ ಎಕರೆಗೆ ಕನಿಷ್ಠ 25ರಿಂದ 30ಸಾವಿರ ರೂ.ಖರ್ಚು ಮಾಡಿಕೊಂಡಿರುವ ರೈತರು ಅತ್ತ ಮಳೆ ಇಲ್ಲದೆ ಕಂಗಾಲಾಗಿದ್ದಾರೆ.ಮೊಡಗಳು ಬರುತ್ತಿದ್ದರೂ ನೆಲಕ್ಕೆ ಮಳೆ ಬಿಳುತ್ತಿಲ್ಲ.ಸರ್ಕಾರ ಪ್ರತಿ ಎಕರೆಗೆ ಕನಿಷ್ಠ 25ಸಾವಿರ ರೂ.ಬೆಳೆ ನಷ್ಟವನ್ನು ರೈತರಿಗೆ ಪರಿಹಾರವನ್ನು ಕೊಡಬೇಕೆಂದು ಸಂತ್ರಸ್ತ ರೈತರು ಒತ್ತಾಯಿಸಿದ್ದಾರೆ.