ರಾಷ್ಟ್ರೀಯ

ಕೇಂದ್ರದ 20 ಸಾವಿರ ಕೋಟಿ ರೂ. ವೆಚ್ಚದ ವಿಸ್ಟಾ ಯೋಜನೆಗೆ ಸುಪ್ರೀಂಕೋರ್ಟ್‌ ಅನುಮತಿ

ಕೇಂದ್ರದ 20 ಸಾವಿರ ಕೋಟಿ ರೂ. ವೆಚ್ಚದ ವಿಸ್ಟಾ ಯೋಜನೆಗೆ ಸುಪ್ರೀಂಕೋರ್ಟ್‌ ಅನುಮತಿ

ನವದೆಹಲಿ, ಜ 5 : ಕೇಂದ್ರ ಸರ್ಕಾರದ 20 ಸಾವಿರ ಕೋಟಿ ರೂ. ವಿಸ್ಟಾ ಯೋಜನೆಗೆ ಸುಪ್ರೀಂಕೋರ್ಟ್ ಮಂಗಳವಾರ ಅನುಮತಿ ನೀಡಿದೆ.ಕಳೆದ ಸೆಪ್ಟೆಂಬರ್‌ನಲ್ಲಿ ಘೋಷಣೆಯಾಗಿರುವ ಈ ಮಹತ್ವಾಕಾಂಕ್ಷೆಯ ಯೋಜನೆ, ಹೊಸ ಸಂಸತ್ ಕಟ್ಟಡ, ಸಂಸದರಿಗೆ ಕಟ್ಟಡಗಳು, ಕೇಂದ್ರ ಸರ್ಕಾರಿ ಕಚೇರಿಗಳಿಗೆ ಹೊಸ ಕಟ್ಟಡ ಮತ್ತು ಪ್ರಧಾನ ಮಂತ್ರಿಗೆ ಹೊಸ ನಿವಾಸದ ಪ್ರಸ್ತಾವನೆ ಒಳಗೊಂಡಿದೆ.ಯೋಜನೆ ಹಾಗೂ ಅದಕ್ಕೆ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಹಲವು ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಮಂಗಳವಾರ ಈ ತೀರ್ಪು ನೀಡಿದೆ. 

ನ್ಯಾಯಮೂರ್ತಿಗಳಾದ  ಎ.ಎಂ. ಖಾನ್‌ವಿಲ್ಕರ್, ದಿನೇಶ್‌ ಮಹೇಶ್ವರಿ ಮತ್ತು ಸಂಜೀವ್‌ ಖನ್ನ ಅವರಿದ್ದ ತ್ರಿಸದಸ್ಯ ಪೀಠದ ಪೈಕಿ ನ್ಯಾಯಮೂರ್ತಿ ಖನ್ನಾ ಪ್ರತ್ಯೇಕ ತೀರ್ಪು ನೀಡಿದ್ದಾರಾದರೂ, ಉಳಿದ ಇಬ್ಬರು ನ್ಯಾಯಮೂರ್ತಿಗಳ ಬಹುಮತದ ಆಧಾರದ ಮೇಲೆ ಈ ತೀರ್ಪು ಹೊರಬಿದ್ದಿದೆ.ದೆಹಲಿ ಅಭಿವೃದ್ಧಿ ಕಾಯ್ದೆ (ಡಿಡಿಎ) ಅಡಿಯಲ್ಲಿ ಯೋಜನೆಗೆ ಅನುಮೋದನೆ ನೀಡಿರುವುದು ಸರಿಯಿದೆ ಮತ್ತು ಪರಿಸರ ಸಚಿವಾಲಯದಿಂದ ದೊರೆತಿರುವ ನಿರಾಕ್ಷೇಪಣಾ ಪತ್ರ ಕೂಡ ಮಾನ್ಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.



ಸುದ್ದಿ ಓದಿ